ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಗೆ ಮತ್ತಿಬ್ಬರು ಮಹಿಳಾ ಸದಸ್ಯರ ಆಗಮನವಾಗಿದೆ. ನಟಿಯರಾದ ವೈಜಯಂತಿ ಅಡಿಗ ಮತ್ತು ಪ್ರಿಯಾಂಕಾ ತಿಮ್ಮೇಶ್ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಅಡಿ ಇಟ್ಟಿದ್ದಾರೆ. ಹೀಗಾಗಿ, ಚಂದ್ರಚೂಡ್ ಚಕ್ರವರ್ತಿ ಸೇರಿ ಈ ಬಾರಿ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.
ಕನ್ಫೆಶನ್ ರೂಮ್ ಮೂಲಕ ಎಂಟ್ರಿ: ಸಾಮಾನ್ಯವಾಗಿ ಮುಖ್ಯ ದ್ವಾರದ ಮೂಲಕ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತದೆ. ಆದರೆ, ವೈಜಯಂತಿ ಮಾತ್ರ ಕನ್ಫೆಶನ್ ಕೊಠಡಿ ಮೂಲಕ ಮನೆಗೆ ಪ್ರವೇಶ ಪಡೆದಿದ್ದಾರೆ. ಇದಕ್ಕೂ ಮುನ್ನ ಕನ್ಫೇಶನ್ ಕೊಠಡಿಗೆ ಮಂಜು ಪಾವಗಡ ಅವರನ್ನು ಕರೆದ ಬಿಗ್ ಬಾಸ್ ಅಲ್ಲಿಯೇ ವೈಜಯಂತಿ ಪರಿಚಯ ಮಾಡಿಕೊಟ್ಟರು. ‘ನಾನು ರೆಸ್ಟೋರೆಂಟ್ ಉದ್ಯಮದಿಂದ ಬಂದಿದ್ದು, ಇಡ್ಲಿ, ದೋಸೆ ಮಾರುತ್ತೀವಿ. ವೈದೇಹಿ ಅವರ ಸಣ್ಣ ಕಥೆ ಆಧರಿತ ಒಂದು ಸಿನಿಮಾ ಮಾಡಿದ್ದೀನಿ. ಡಾನ್ಸರ್ ಕೂಡ ಹೌದು. ಭರತ ನಾಟ್ಯ ಕಲಿತಿದ್ದೇನೆ’ ಎಂದು ವೈಜಯಂತಿ ತಮ್ಮನ್ನು ತಾವು ಪರಿಚಯ ಮಾಡಿಕೊಂಡರು. ಮಂಜು ಅವರನ್ನು ಅಲ್ಲಿಯೇ ಕೂರಿಸಿ ಮನೆಗ ಬಂದ ವೈಜಯಂತಿ ಮನೆ ಮಂದಿಗೆ ಅಚ್ಚರಿ ಮೂಡಿಸಿದರು. ಅಯ್ಯೋ ಮಂಜು ಎಲ್ಲಿ ಹೋದ?. ಮಂಜು ಹುಡುಗಿಯಾಗಿಬಿಟ್ಟನೆ ಎಂಬ ಹಾಸ್ಯದ ಮಾತುಗಳು ಕೇಳಿಬಂದವು.
ಈಗ ಪಾಕಶಾಲಾ ಎಂದಾಗಿರುವ ಈ ಹಿಂದೆ ಅಡಿಗಾಸ್ ಎಂದಿದ್ದ ಹೋಟೆಲ್ ಉದ್ಯಮದಲ್ಲಿ ನಮ್ಮ ಕುಟುಂಬ ತೊಡಗಿಸಿಕೊಂಡಿದೆ. ನಾನೂ ಸಹ ಅದರಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು. ಕೂಡಲೇ, ನಿಮಗೆ ಅಡುಗೆ ಮಾಡೋಕೆ ಬರುತ್ತಾ ಎಂಬ ಪ್ರಶ್ನೆ ಮನೆ ಮಂದಿಯಿಂದ ತೇಲಿ ಬಂದಿತು. ಹೌದು, ಅಡುಗೆ ಮಾಡುತ್ತೇನೆ. ಆದರೆ, ದಿನಾ ಅದೇ ಡಿಪಾರ್ಟ್ಮೆಂಟ್‌ಗೆ ಹಾಕಿಬಿಡಬೇಡಿ ಎಂದು ವೈಜಯಂತಿ ತಮಾಷೆ ಮಾಡಿದರು.
ಇದೇ ದಿನ ಮತ್ತೊಬ್ಬ ನಟಿ ಪ್ರಿಯಾಂಕಾ ತಿಮ್ಮೇಶ್ ಸಹ ಕನ್ನಡದ ಬಿಗ್ ಬಾಸ್ ಮನೆ ಸೇರಿದ್ದಾರೆ. ಮುಖ್ಯ ದ್ವಾರದಿಂದ ಮನೆಯ ಸದಸ್ಯರ ಬಹು ಬೇಡಿಕೆಯ ಚಿಕನ್ ಹಿಡಿದು ಅವರು ಎಂಟ್ರಿ ಕೊಟ್ಟರು.
ಪ್ರಿಯಾಂಕಾ ತಿಮ್ಮೇಶ್ ಯಾರು?: ‘ನಾನು ಭದ್ರಾವತಿ ಮೂಲದವಳು. ‘ಪ್ರೀತಿಯಿಂದ’ ಧಾರಾವಾಹಿ ಮೂಲಕ ನನ್ನ ನಟನಾ ವೃತ್ತಿ ಆರಂಭಿಸಿ ಗಣಪ, ಪಟಾಕಿ, ಭೀಮಸೇನಾ ನಳಮಹಾರಾಜ ಸಿನಿಮಾ ಮಾಡಿದ್ದೇನೆ. ಅರ್ಜುನ್ ಗೌಡ ಮತ್ತು ಶುಗರ್ ಲೆಸ್ ಚಿತ್ರಗಳು ರಿಲೀಸ್ ಆಗಬೇಕಿದೆ.’ಎಂದು ತಮ್ಮ ಬಗ್ಗೆ ಪರಿಚಯ ಮಾಡಿಕೊಂಡರು. ಎಲ್ಲರೂ ಚಿಕನ್‌ಗೆ ಹೆಚ್ಚು ಮಹತ್ವ ಕೊಡುತ್ತೀರಿ ಅಂದುಕೊಂಡಿದ್ದೆ. ಸದ್ಯ, ನನ್ನ ಮೇಲೆ ಗಮನ ಹರಿಸಿದ್ದೀರಿ ಎಂದ ಪ್ರಿಯಾಂಕಾ, ನಾನು ಬಂದಿದ್ದರಿಂದ ಆತಂಕವಾಯಿತೇ? ಎಂದು ಪ್ರಶ್ನಿಸಿದರು.
ಇದೇವೇಳೆ, ‘ಚಿಕನ್ ಜೊತೆ ಚಿಕ್ಕೂ’ ಮನೆಗೆ ಬಂದಿತು ಎಂದು ಹಾಸ್ಯ ಮಾಡಿದ ಶಮಂತ್ ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದರು.
ಮಂಜು ಕೇಳಿದ್ದೂ ಹುಡುಗಿಯನ್ನೇ ಬಂದಿದ್ದೂ ಹುಡುಗಿಯರೆ: ಹೌದು, ಕಳೆದ ವಾರ ಚಂದ್ರಚೂಡ್ ಎಂಟ್ರಿಯಾದಾಗ ಹುಡುಗಿಯನ್ನು ಕಳುಹಿಸಿದ್ರೆ ಚೆನ್ನಾಗಿತ್ತು ಎಂದು ಮಂಜು ಪಾವಗಡ ಅವರು ಸುದೀಪ್ ಬಳಿ ಹೇಳಿದ್ದರು. ಅವರ ಆಶಯ ಈಗ ನಿಜವಾಗಿದೆ. ಇಬ್ಬಿಬ್ಬರು ಹುಡುಗಿಯರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.