ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಿಂದ 5ನೇ ವಾರ ಹಿರಿಯ ಸ್ಪರ್ಧಿ ಶಂಕರ್ ಅಶ್ವತ್ಥ್ ಹೊರಹೋಗಿದ್ದಾರೆ. ಕಳೆದ ವಾರ ಸೇಫ್ ಆಗಿದ್ದ ಅವರು, ಈ ವಾರ ತಮ್ಮ ಪಯಣ ಅಂತ್ಯಗೊಳಿಸಿದ್ದಾರೆ. ಇನ್ನು,ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗದ ಶಮಂತ್, ಈ ವಾರವೂ ಸೇಫ್ ಆಗಿ ಮುಂದುವರಿದಿದ್ದಾರೆ.
ಶನಿವಾರ ಪ್ರಶಾಂತ್ ಸಂಬರಗಿ ಒಬ್ಬರನ್ನು ಸೇಫ್ ಮಾಡಿದ್ದ ಸುದೀಪ್, ಭಾನುವಾರ ಉಳಿದ ಐವರಲ್ಲಿ 4 ಜನರನ್ನು ಸೇಫ್ ಮಾಡಿದ್ದಾರೆ. ಮೊದಲಿಗರಾಗಿ ಅರವಿಂದ್, ಬಳಿಕ ಕ್ರಮವಾಗಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ಶಮಂತ್ ಸೇಫ್ ಆದರು. ಪ್ರತಿವಾರದಂತೆ ಅಂತಿಮ ಹಂತಕ್ಕೆ ಬರುವ ಇಬ್ಬರು ಸ್ಪರ್ಧಿಗಳಲ್ಲಿ ಶಮಂತ್ ಸಹ ಒಬ್ಬರಾಗಿದ್ದರು. ಈ ಸಂದರ್ಭ, ನಾನು ವಾರದಿಂದ ವಾರಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಹಾಗಾಗಿ, ಮುಂದುವರಿಯಬೇಕು ಎಂದು ಶಮಂತ್ ಅಭಿಪ್ರಾಯಪಟ್ಟರು. ಆದರೆ, ನಾನು ಅಸಮರ್ಥ, ಮುಂದುವರಿಯುವುದು ಬೇಡ. ಶಮಂತ್ ಮುಂದುವರಿಯಲಿ ಎಂದು ಶಂಕರ್ ಅಶ್ವತ್ಥ್ ಹೇಳಿದರು. ವೀಕ್ಷಕರ ಅಭಿಪ್ರಾಯ ಸಹ ಅದೇ ಆಗಿತ್ತು.
ಹೋಗುವಾಗ ನಿಧಿಗೆ ಶಾಕ್ ಕೊಟ್ಟ ಶಂಕರ್: ಶಂಕರ್ ಅಶ್ವತ್ಥ್ ಮನೆಯಿಂದ ತೆರಳುವಾಗ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ಕೊಟ್ಟರು. ಅದರನ್ವಯ, ನೀವು ಯಾರಾದರೂ ಒಬ್ಬ ಸ್ಪರ್ಧಿಯನ್ನು ಮುಂದಿನ ವಾರಕ್ಕೆ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಮಾಡಬಹುದು ಎಂದು ಸೂಚಿಸಿದರು. ಈ ಸಂದರ್ಭ, ನನ್ನನ್ನು ಎಲ್ಲೆಲ್ಲೋ ಮುಟ್ಟ ಬೇಡಿ ಎಂದು ಕಾಮೆಂಟ್ ಮಾಡಿದ್ದ ನಿಧಿ ಸುಬ್ಬಯ್ಯ ಮಾತುಗಳನ್ನು ನೆನಪಿಸಿಕೊಂಡ ಶಂಕರ್ ಅಶ್ವತ್ಥ್, ಇದೇ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಹೇಳಿ ಹೊರಟರು.
ಶಂಕರ್ ಪ್ರದರ್ಶನದ ಬಗ್ಗೆ ಪತ್ನಿ, ಪುತ್ರನ ಅಸಮಾಧಾನ: ಬಿಗ್ ಬಾಸ್ ಮನೆಯಿಂದ ಹೊರಟು ವೇದಿಕೆಗೆ ಬಂದ ಶಂಕರ್ ಅಶ್ವತ್ಥ್ ಪ್ರದರ್ಶನದ ಬಗ್ಗೆ ಅವರ ಕುಟುಂಬ ವರ್ಗದವರ ಬಳಿ ಕಿಚ್ಚ ಸುದೀಪ್ ಅಭಿಪ್ರಾಯ ಕೇಳಿದರು. ಮನೆಯಲ್ಲಿ ಸಿಂಹದಂತಿರುವ ಅವರು ಬಿಗ್ ಬಾಸ್ ಮನೆಯಲ್ಲಿ ನೀಡಿದ ಪ್ರದರ್ಶನ ಅಷ್ಟಾಗಿ ಉತ್ತಮವಾಗಿರಲಿಲ್ಲ ಎಂದು ಪತ್ನಿ ಮತ್ತು ಮಗ ಅಭಿಪ್ರಾಯಪಟ್ಟರು. ನಮ್ಮ ಮನೆಯವರಾದರೆ, ನಾನು ಹೇಳಿದಂಗೆ ಕೇಳ್ತಾರೆ, ಬೇರೆಯವರು ಕೇಳ್ತಾರಾ? ಎಂದ ಶಂಕರ್, ನಾನು ಮನೆಯಲ್ಲಿ ಸಿಂಹ, ಬೀದಿಯಲ್ಲಿ ಇಲಿ ಎಂದು ಖಾರವಾಗಿ ಉತ್ತರಿಸಿದರು. ನನಗೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಆಗಿದೆ. ಬಿಗ್ ಬಾಸ್ ಮನೆಯ ಟಾಸ್ಕ್ ವೇಳೆ ಎಲ್ಲಿ ತೊಂದರೆ ಆಗಿಬಿಡುತ್ತದೋ ಎಂಬ ಆತಂಕವಿತ್ತು. ಹಾಗಾಗಿಯೆ, ಹೊರಬರುವ ಇಚ್ಛೆ ಮೂಡಿತ್ತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.