ADVERTISEMENT

ಈ ಬಾರಿ ‘ಸ್ಮಾಲ್ ಬಾಸ್’ ಇಲ್ಲ, ಸೆಲೆಬ್ರಿಟಿಗಳೇ ಎಲ್ಲ!

13ರಿಂದ ‘ಬಿಗ್‌ಬಾಸ್’ ಸೀಸನ್ 7 ಆರಂಭ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 14:31 IST
Last Updated 10 ಅಕ್ಟೋಬರ್ 2019, 14:31 IST
ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮತ್ತು ಸುದೀಪ್
ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮತ್ತು ಸುದೀಪ್   

ಬೆಂಗಳೂರು: ಇದೇ 13ರಂದು ಆರಂಭವಾಗಲಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಷೋ ‘ಬಿಗ್‌ಬಾಸ್’ ಏಳನೇ ಆವೃತ್ತಿಯಲ್ಲಿ ‘ಸ್ಮಾಲ್ ಬಾಸ್’ ಅರ್ಥಾತ್ ಶ್ರೀಸಾಮಾನ್ಯರಿಗೆ ಪ್ರವೇಶವಿಲ್ಲ. ಸೆಲೆಬ್ರಿಟಿಗಳೇ ಈ ಬಾರಿ ‘ಬಿಗ್‌ಬಾಸ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಎರಡು ವರ್ಷಗಳ ಕಾಲ ‘ಕಲರ್ಸ್ ಸೂಪರ್‌’ನಲ್ಲಿ ಪ್ರಸಾರವಾಗಿದ್ದ ‘ಬಿಗ್‌ಬಾಸ್’ ಈ ಬಾರಿ ಕಲರ್ಸ್ ಕನ್ನಡಕ್ಕೆ ಮರಳಿದ್ದು, 13ರಂದು ಸಂಜೆ 6 ಗಂಟೆಗೆ ಮೊದಲ ಸಂಚಿಕೆ ಪ್ರಸಾರವಾಗಲಿದೆ. ಸೋಮವಾರದಿಂದ ‘ಬಿಗ್‌ಬಾಸ್’ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಯಾಕಾಂ 18 ಕನ್ನಡ ಎಂಟರ್‌ಟೇನ್‌ಮೆಂಟ್ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್,‘ಬಿಗ್‌ಬಾಸ್ ಶುರುವಾಗಿದ್ದು ಸೆಲೆಬ್ರಿಟಿಗಳಿಂದಲೇ. ಮಧ್ಯೆ ಜನಸಾಮಾನ್ಯರಿಗೂ ಬಿಗ್‌ಬಾಸ್ ಮನೆಗೆ ಕರೆದು ಪ್ರಯೋಗ ಮಾಡಿದ್ದೆವು. ಈಗ ಮತ್ತೆ ಸೆಲೆಬ್ರಿಟಿಗಳತ್ತ ಮರಳಿದ್ದೇವೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು. ಆದರೆ ಯಾವ ಯಾವ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆಂಬ ಗುಟ್ಟು ಬಿಟ್ಟುಕೊಡಲಿಲ್ಲ.

ADVERTISEMENT

‘ಎಲ್ಲಾ ಸೀಸನ್‌ಗಳಿಗಿಂತ ಈ ಬಾರಿ ಬಿಗ್‌ಬಾಸ್ ವಿಶೇಷವಾಗಿರಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ 17 ಮಂದಿ ನೂರು ದಿನಗಳ ಕಾಲ ‘ಬಿಗ್‌ಬಾಸ್‌’ ಮನೆಯಲ್ಲಿ ಕಾಲ ಕಳೆಯಲಿದ್ದಾರೆ. ಕೂಡು ಕುಟುಂಬದ ಮಾದರಿಯನ್ನು ಈ ಬಾರಿಯ ‘ಬಿಗ್‌ಬಾಸ್’ ಮನೆಯಲ್ಲಿ ಪ್ರೇಕ್ಷಕರು ನಿರೀಕ್ಷೆ ಮಾಡಬಹುದು. ರಾಜ್ಯದ ವಿವಿಧ ಭೌಗೋಳಿಕ ಪ್ರದೇಶ ಮತ್ತು ವೃತ್ತಿಗೆ ಅನುಗುಣವಾಗಿ ಸೆಲೆಬ್ರಿಟಿಗಳ ಆಯ್ಕೆ ನಡೆದಿದೆ.ವಿಜೇತರಿಗೆ ₹ 50 ಲಕ್ಷ ನಗದು ಬಹುಮಾನ ದೊರೆಯುತ್ತದೆ’ ಎಂದರು.

ಈ ಬಾರಿಯೂ ನಟ ಸುದೀಪ್ ಅವರೇ ನಿರೂಪಕರಾಗಿರುತ್ತಾರೆ. ಕನ್ನಡದ ‘ಬಿಗ್‌ಬಾಸ್‌’ನ ಯಶಸ್ಸಿನಲ್ಲಿ ಅವರ ಪಾಲು ದೊಡ್ಡದು. ಈ ಬಾರಿಯ ಬಿಗ್‌ಬಾಸ್‌ನ ಮೊದಲಸಂಚಿಕೆಯನ್ನು ಬೆಂಗಳೂರು, ಮೈಸೂರು, ಬೆಳಗಾವಿ, ಮಣಿಪಾಲದ ಐನಾಕ್ಸ್ ಮಲ್ಟಿಪೆಕ್ಸ್‌ಗಳಲ್ಲಿ ಪ್ರಸಾರ ಮಾಡಲಾಗುವುದು. ಆಸಕ್ತರು theticketing.in ಪೋರ್ಟಲ್‌ನಲ್ಲಿ ಟಿಕೆಟ್ ಬುಕ್ ಮಾಡಿ ಉಚಿತವಾಗಿ ವೀಕ್ಷಿಸಬಹುದು ಎಂದು ಅವರು ತಿಳಿಸಿದರು.

ನಟ ಸುದೀಪ್ ಮಾತನಾಡಿ, ‘ಬಿಗ್‌ಬಾಸ್‌ ಜತೆಗಿನ ಸಂಬಂಧ ಭಾವನಾತ್ಮಕವಾದದ್ದು, ಇಲ್ಲಿ ಕಲಿತದ್ದು ಅಪಾರ. ಏಳನೇ ಸೀಸನ್‌ ಬಗ್ಗೆ ನಾನೂ ಪ್ರೇಕ್ಷಕರಷ್ಟೇ ಕಾತರದಿಂದ ಕಾಯುತ್ತಿರುವೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳ ಮಾಹಿತಿ ಈ ಕ್ಷಣದವರೆಗೂ ನನಗಿಲ್ಲ. ಯಾವ ಸೆಲೆಬ್ರಿಟಿಗಳು ಬರುತ್ತಾರೆ ಅನ್ನೋದು ಅಂದಿನ ವೇದಿಕೆಯಲ್ಲೇ ನನಗೆ ತಿಳಿಯುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.