ಬೆಂಗಳೂರು: ಇಷ್ಟು ದಿನ ತಣ್ಣಗಿದ್ದ ಬಿಗ್ ಬಾಸ್ ಮನೆಯಲ್ಲಿ ಈಗ ಬೆಂಕಿ ಹೊತ್ತಿಕೊಂಡಿದೆ. ನಕ್ಕು ನಲಿಯುತ್ತಾ.. ಒಬ್ಬರಿಗೊಬ್ಬರು ತಮಾಷೆ ಮಾಡುತ್ತಿದ್ದ ಮನೆಯಲ್ಲಿ ‘ಛೀ , ಥೂ, ಗಲೀಜು’ ಎಂಬ ಪದಗಳು ಕೇಳಿಸುತ್ತಿವೆ.
ಇದಕ್ಕೆಲ್ಲ ಕಾರಣ ಬಿಗ್ ಬಾಸ್ ಕೊಟ್ಟಿರುವ ಹೊಸ ವೈರಸ್ ಟಾಸ್ಕ್. ಹೌದು, ಬಿಗ್ ಬಾಸ್ ಮನೆಮಂದಿಯನ್ನೆಲ್ಲ ಎರಡು ಗುಂಪು ಮಾಡಿ ಒಂದಕ್ಕೆ ವೈರಸ್ ಮತ್ತೊಂದಕ್ಕೆ ಮನುಷ್ಯರು ಎಂಬ ಹೆಸರಿಟ್ಟು ವೈರಸ್ ಟಾಸ್ಕ್ ನೀಡಲಾಗಿದೆ.
ಏನಿದು ಟಾಸ್ಕ್?: ವೈರಸ್ ಗುಂಪು ಮನುಷ್ಯರ ಮೇಲೆ ದಾಳಿ ಮಾಡಬೇಕು. ಮನುಷ್ಯರು ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ಒಂದೊಮ್ಮೆ ಮನುಷ್ಯರ ಮೇಲೆ ವೈರಸ್ ದಾಳಿ ಆಗಿಯೇ ಬಿಟ್ಟರೆ ಅವರು ಕ್ವಾರಂಟೈನ್‌ಗೆ ಹೋಗಬೇಕು. ಕ್ವಾರಂಟೈನ್‌ನಲ್ಲಿ ನಿಂತು ನೀರು ಸುರಿಯುವ, ಬಟ್ಟೆಗಳನ್ನು ಮೇಲೆ ಹಾಕುವ, ಭಾರದ ವಸ್ತುಗಳನ್ನು ಹಾಕುವ. ಇವೇ ಮುಂತಾದ ವೈರಸ್ ತಂಡ ಕೊಡುವ ಹಿಂಸೆ ಅನುಭವಿಸಿ ಗೆಲ್ಲಬೇಕು. ಸೋತರೆ, ಆ ವ್ಯಕ್ತಿ ಆಟದಿಂದ ಹೊರ ಹೋಗ್ತಾರೆ. ಗೆದ್ದವರಿಗೆ ಪಾಯಿಂಟ್ಸ್ ಸಿಗುತ್ತೆ. ವೈರಸ್ ತಂಡ ಪ್ರಶಾಂತ್ಸಂಬರಗಿ ಮತ್ತು ಮನುಷ್ಯರ ತಂಡಕ್ಕೆ ಮಂಜು ಪಾವಗಡ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.
ಮೊದಲ ಬಾರಿಗೆ ವೈರಸ್ ದಾಳಿಗೆ ತುತ್ತಾದ ಚಂದ್ರಕಲಾ ಅವರು ಕ್ವಾರಂಟೈನ್‌ನಲ್ಲಿ ವೈರಸ್ ತಂಡದ ಹಿಂಸೆ ಗೆದ್ದು ಮನುಷ್ಯರ ತಂಡಕ್ಕೆ ಪಾಯಿಂಟ್ಸ್ ತಂದು ಕೊಟ್ಟರು. ಆದರೆ, ಮತ್ತೊಮ್ಮೆ ದಾಳಿಗೊಳಗಾದ ಗೀತಾ ಕ್ವಾರಂಟೈನ್‌ನಲ್ಲಿ ಭಾರ ಸಹಿಸಲಾಗದೆ ಕೈಬಿಟ್ಟು ಪಾಯಿಂಟ್ಸ್ ಕೈಚೆಲ್ಲಿದರು. ಮೊದಲ ಟಾಸ್ಕ್‌ನಲ್ಲಿ ಯಶಸ್ವಿಯಾಗಿ ದಾಳಿ ಮಾಡಿದ ವೈರಸ್ ತಂಡ ಗೆದ್ದುಕೊಂಡಿದೆ.
ಇದನ್ನೂ ಓದಿ..Big Boss 8: ಮೊದಲ ವಾರ ಬಿಗ್ಬಾಸ್ ಮನೆಯಿಂದ ಧನುಶ್ರೀ ಹೊರಕ್ಕೆ
ಛೀ ಥೂ: ಈ ಟಾಸ್ಕ್ ಅಕ್ಷರಶಃ ತಂಡದ ಸದಸ್ಯರ ನಡುವೆ ಸಾಮರಸ್ಯ ಹಾಳು ಮಾಡಿದೆ. ಟಾಸ್ಕ್ ವೇಳೆ ಒಬ್ಬರಿಗೊಬ್ಬರು ಮುಗಿಬಿದ್ದಾಗ ಪ್ರಶಾಂತ್ ದುರ್ವರ್ತನೆ ತೋರಿದರೆಂದು ಕೋಪಗೊಂಡ ಬ್ರೋ ಗೌಡ ಅಲಿಯಾಸ್ ಶಮಂತ್, ಥೂ ನಿನಗೆ ನಾಚಿಯಗಬೇಕು. ನನ್ನ ಹೆಣ ತೆಗೆದುಕೊಂಡು ಹೊರಗೆ ಹೋಗ್ತಿಯಾ? ವಯಸ್ಸಾಗಿದೆ ಅಂತಾ ಬಿಡ್ತಿದ್ದೀನಿ ಎಂದು ವಾರ್ನ್ ಮಾಡಿದರು. ಬಳಿಕ, ಮಾತಿನ ಚಕಮಕಿಯೂ ನಡೆಯಿತು. ಅವಾಚ್ಯ ಶಬ್ದಗಳಿಂದ ನಿಂದನೆ, ಕೂಗಾಟ, ಚೀರಾಟ ಎಲ್ಲವೂನಡೆಯಿತು. ಕೆಲವೊಮ್ಮೆ ಕೆಟ್ಟ ಪದ ಬಳಕೆಯಾದ್ದರಿಂದ ಬೀಪ್ ಸೌಂಡ್ ಸಹ ಕೇಳಿಸಿತು.
ವೈರಸ್ ತಂಡದವರು ದುರ್ವರ್ತನೆ ತೋರುತ್ತಿದ್ದಾರೆ. ಮಧ್ಯಪ್ರವೇಶಿಸಿ ಎಂದು ಮನುಷ್ಯರ ತಂಡದ ಬ್ರೋ ಗೌಡ, ಅರವಿಂದ್ ಕ್ಯಾಮೆರಾ ಬಳಿ ಹೋಗಿ ಬಿಗ್ ಬಾಸ್‌ಗೆ ಮನವಿ ಮಾಡಿದರು. ಇನ್ನೂ, ತನ್ನನ್ನು ಏಕವಚನದಲ್ಲಿ ಕರೆದ ಬಗ್ಗೆ ನಿಧಿ ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಜನನ್ನು ನಾನು ಎತ್ತರದಲ್ಲಿಟ್ಟಿದ್ದೆ. ಅವನಿಗೆ ಮಾನವೀಯತೆ ಇಲ್ಲ ಎಂಬುದು ಗೊತ್ತಾಗಿದೆ ಎಂದು ಗೊಣಗಾಡಿದರು.
ಇದಕ್ಕೂ ಮುನ್ನ, ಮನುಷ್ಯರು ಮತ್ತು ವೈರಸ್ ತಂಡ ಆತ್ಮೀಯವಾಗಿರಬಾರದು ಎಂಬ ನಿಯಮವಿದ್ದರೂ ಅದನ್ನು ಮುರಿದಿದ್ದಕ್ಕಾಗಿ ಮನುಷ್ಯರ ತಂಡಕ್ಕೆ ಬಿಗ್ ಬಾಸ್ ಕ್ಯಾಪ್ಟನ್ ಮಂಜು ಸೇರಿ ಮೂರು ಸದಸ್ಯರು ಕೆಲ ಸಮಯ ಆಟದಿಂದ ಹೊರಗುಳಿಯುವ ಶಿಕ್ಷೆ ನೀಡಿದ್ದರು.ಅದರಂತೆ, ಪಾವಗಡ ಮಂಜು, ಶುಭಾ ಪೂಂಜಾ ಮತ್ತು ಚಂದ್ರಕಲಾ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.