ಬಿಗ್ ಬಾಸ್ ಫಿನಾಲೆಯ ಶನಿವಾರದ ಸಂಚಿಕೆಯಲ್ಲಿ ಎಲಿಮಿನೇಶನ್ ಜೊತೆ ಗಮನಸೆಳೆದ ವಿಷಯಗಳೆಂದರೆ, ಫೈನಲಿಸ್ಟ್‌ಗಳು ಮಾಜಿ ಸ್ಪರ್ಧಿಗಳಿಗೆ ಬರೆದಿದ್ದ ಪತ್ರಗಳು. ಫಿನಾಲೆಗೂ ಮುನ್ನ, ನಿಮ್ಮ ಜೊತೆ ಇಷ್ಟು ದಿನ ಕಳೆದ ಸ್ಪರ್ಧಿಗಳಿಗೆ ಪತ್ರ ಬರೆಯುವಂತೆ ಮನೆಯಲ್ಲಿದ್ದ ಐವರು ಫೈನಲಿಸ್ಟ್‌ಗಳಿಗೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ, .ಕೆ. ಪಿ. ಅರವಿಂದ್ ಅವರು ನಿಧಿ ಸುಬ್ಬಯ್ಯ ಅವರಿಗೆ, ವೈಷ್ಣವಿ ಅವರು ರಘು ಅವರಿಗೆ ಪತ್ರ ಬರೆದಿದ್ದರು.
ಕ್ಷಮೆ ಕೇಳಿದ ಅರವಿಂದ್: ಹೌದು, ಬಿಗ್ ಬಾಸ್ ಮನೆಯಲ್ಲಿ ನಡೆದ ಅಹಿತಕರ ಘಟನೆಯೊಂದನ್ನು ಪತ್ರದಲ್ಲಿ ಉಲ್ಲೇಖಿಸಿದ್ದ ಅರವಿಂದ್, ನಿಧಿ ಸುಬ್ಬಯ್ಯ ಬಳಿ ಕ್ಷಮೆ ಕೇಳಿದ್ದಾರೆ.
ಈ ಹಿಂದೆ ಮನೆಯಲ್ಲಿ ತಮ್ಮಿಬ್ಬರ ನಡುವೆ ನಡೆದಿದ್ದ ಅವಾಚ್ಯ ಶಬ್ದಗಳ ಮಾತಿನ ಚಕಮಕಿ ಪ್ರಸಂಗ ನಡೆಯಬಾರದಿತ್ತು. ಅದು ಈಗಲೂ ನನಗೆ ಕಾಡುತ್ತಿರುತ್ತದೆ. ನಿನ್ನಲ್ಲಿ ಒಬ್ಬ ಒಳ್ಳೆಯ ಸ್ನೇಹಿತೆಯನ್ನು ಕಂಡಿರುವೆ. ನಮ್ಮ ನಡುವಿನ ಸಲುಗೆಯನ್ನು ಯಾವಾಗಲೂ ಬಳಸಿಕೊಳ್ಳಬಾರದು ಎಂಬುದು ಗೊತ್ತಾಗಿದೆ. ಇಂತಿ ನಿನ್ನ ಸ್ನೇಹಿತ ಅರವಿಂದ್ ಎಂದು ಬರೆದಿದ್ದಾರೆ.
ಮುಚ್ಕೊಳ್ಳಿ ಎಂದಿದ್ದ ಅರವಿಂದ್: ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್ ವೇಳೆ ಟಿಶ್ಯೂ ರೋಲ್‌ಗಳನ್ನು ಕೂಡಿ ಹಾಕಿ ಅದನ್ನು ಜೋಡಿಸುವ ಟಾಸ್ಕ್ ಇತ್ತು. ಎರಡೂ ತಂಡದ ರನ್ನರ್‌ಗಳು ಮಾತ್ರ ಬಜರ್ ಆದಾಗ ಸ್ಟೋರ್ ರೂಮಿಗೆ ತೆರಳಿ ರೋಲ್‌ಗಳನ್ನು ತರಬೇಕಿತ್ತು. ಈ ಸಂದರ್ಭ ಓಡುತ್ತಿದ್ದ ಅರವಿಂದ್ ಕೈಯಿಂದ ಬಿದ್ದ ರೋಲ್‌ಗಳನ್ನು ಮತ್ತೊಂದು ತಂಡದ ನಿಧಿ ಎತ್ತಿಕೊಂಡು ಹೋಗಿದ್ದರು. ರನ್ನರ್ ಮಾತ್ರ ಎತ್ತಿಕೊಳ್ಳಬೇಕು. ನೀವು ಎತ್ತಿಕೊಂಡಿದ್ದು ಸರಿಯಲ್ಲ ಎಂದು ಅರವಿಂದ್ ವಾದಿಸಿದ್ದರು. ಬಳಿಕ, ನಾಯಕ ಮಂಜು ಪಾವಗಡ ಬಳಿ ಬಂದು ಈ ಬಗ್ಗೆ ಮಾತನಾಡಲು ಅರವಿಂದ್ ಯತ್ನಿಸಿದಾಗ ನಿಧಿ ಮಧ್ಯಪ್ರವೇಶಿಸಿದರು. ಇದರಿಂದ ವಿಚಲಿತರಾದ ಅರವಿಂದ್, ನಾನು ಕ್ಯಾಪ್ಟನ್ ಬಳಿ ಮಾತನಾಡುತ್ತಿದ್ದೇನೆ 'ನೀವು ಮುಚ್ಕೊಳ್ಳಿ' ಎಂದು ಖಾರವಾಗಿ ಉತ್ತರಿಸಿದ್ದರು. ಇದರಿಂದ ಕೋಪಗೊಂಡ ನಿಧಿ ಸುಬ್ಬಯ್ಯ ಸಹ, ನೀನೊಬ್ಬ ಸ್ಪೋರ್ಟ್ಸ್‌ಮನ್, ಕ್ರೀಡಾ ಸ್ಫೂರ್ತಿ ಇಲ್ಲ ನಿನಗೆ ಎಂದು ಕಿರುಚಾಡಿದ್ದರು.
ನಂತರದ ವಾರ ನಡೆದ ಕಿಚ್ಚನ ವೀಕೆಂಡ್ ಪಂಚಾಯ್ತಿಯಲ್ಲಿ ಇಬ್ಬರಿಗೂ ಚಾಟಿ ಬೀಸಿದ್ದ ಸುದೀಪ್ ಬುದ್ಧಿ ಹೇಳಿ ಕಳುಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.