ಮುಂಬೈ: ಕೊರೊನಾ ಆತಂಕದ ನಡುವೆಯೇ ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಷೊ ‘ಬಿಗ್ ಬಾಸ್ –ಸೀಸನ್ 14‘ ಶನಿವಾರ ರಾತ್ರಿಯಿಂದ ಪ್ರೀಮಿಯರ್ ಶೋ ಮೂಲಕ ಪ್ರದರ್ಶನ ಆರಂಭಿಸುತ್ತಿದೆ.
ಪ್ರತಿ ಬಾರಿ ಪ್ರೇಕ್ಷಕರ ಸಂಭ್ರಮ, ಕರತಾಡನದ ನಡುವೆ ವಿಜೃಂಭಿಸುತ್ತಿದ್ದ ಪ್ರೀಮಿಯರ್ ಷೊ, ಕೊರೊನಾ ಸೋಂಕಿನಿಂದಾಗಿ, ಪ್ರೇಕ್ಷಕ ರಹಿತವಾಗಿ ಪ್ರದರ್ಶನಗೊಳ್ಳುತ್ತಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಂಕಷ್ಟಗಳನ್ನು ಎದುರಿಸುತ್ತಿರುವ 2020 ವರ್ಷಕ್ಕೆ ಬಿಗ್ ಬಾಸ್ ಷೊ ಉತ್ತಮ ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಬಿಗ್‌ಬಾಸ್ ಸೀಸನ್ 14 ಉದ್ಘಾನಾ ಕಾರ್ಯಕ್ರಮ ಪ್ರೀಮಿಯರ್ ಷೊನಲ್ಲಿ ಮಾತನಾಡಿದ ನಟ ಸಲ್ಮಾನ್‌ಖಾನ್, ‘ಈ ವರ್ಷ ಅತ್ಯಂತ ನಕಾರಾತ್ಮಕ ಪದ ಸಕಾರಾತ್ಮಕವಾಗಿದೆ‘ ಎಂದು ಹೇಳಿದ್ದಾರೆ.
‘ಈ ಲಾಕ್‌ಡೌನ್, ನಮಗೆ ಅನೇಕ ಮನೆಕೆಲಸಗಳನ್ನು ಕಲಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ‘ಆ ಕಾಲವೇ ಎಷ್ಟು ಚೆನ್ನಾಗಿತ್ತಲ್ಲವಾ‘ ಎಂದು ಭೂತಕಾಲವನ್ನು ಮೆಚ್ಚಿಕೊಳ್ಳುವಂತೆ ಮಾಡಿದೆ‘ ಎಂದು ಸಲ್ಮಾನ್ ಬಿಗ್‌ಬಾಸ್ ಪ್ರೀಮಿಯರ್ ಷೊ ನಲ್ಲಿ ನೆನಪಿಸಿಕೊಂಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಪ್ರೇಕ್ಷಕರಿಲ್ಲದೇ ಕಾರ್ಯಕ್ರಮ ನಡೆಸಬೇಕಾಗಿದೆ. ಪ್ರೇಕ್ಷಕರೇ ಇಲ್ಲದೇ ಷೊ ನಡೆಸುತ್ತಿರುವುದು ಒಂದು ರೀತಿ ಖಾಲಿ ಖಾಲಿ ಎನ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಬಿಗ್‌ಬಾಸ್ – ಸೀಸನ್ 14‘ ಪ್ರೀಮಿಯರ್ ಷೊ, ಶನಿವಾರ ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.