ಬಿಗ್‌ಬಾಸ್ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ಗೆಲ್ಲಲೇಬೇಕೆಂಬ ಹಠದಲ್ಲಿದ್ದ ನಮ್ರತಾ ಅವರಿಗೆ ಎಲಿಮಿನೇಷನ್ ಶಾಕ್ ನೀಡಿದೆ. 15ನೇ ವಾರದಲ್ಲಿ ಬಿಗ್ ಬಾಸ್ ಪಯಣ ಮುಗಿಸಿ ಬಂದ ನಮ್ರತಾ ಅವರು ಜಿಯೊ ಸಿನಿಮಾಗೆ ನೀಡಿದ ಸಂದರ್ಶನ ಇಲ್ಲಿದೆ.
ಎಲಿಮಿನೇಷನ್‌ನಿಂದ ನಿಜಕ್ಕೂ ಬೇಸರವಾಗಿದೆ
ನಿಜಕ್ಕೂ ಸಖತ್ ಬೇಜಾರಾಗ್ತಿದೆ. 19 ಜನರಲ್ಲಿ 7ನೇ ಸ್ಥಾನದವರೆಗೂ ಬಂದಿರುವುದು ಖಂಡಿತ ಸುಲಭದ ಸಂಗತಿ ಅಲ್ಲ. ಮೂರು ದಿನಗಳ ಹಿಂದೆ ಹಳೆಯ ಸ್ಪರ್ಧಿಗಳೆಲ್ಲ ಬಂದು ನೀನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದರು, ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಆದರೆ ಈಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್ ಉಂಟುಮಾಡಿದೆ.
ಈ 106 ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಬಿಗ್‌ಬಾಸ್ ಮನೆಯಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಇವೆಲ್ಲ ಯಾರಿಂದಲೂ ಪ್ರೇರಿತನಾಗಿ ಮಾಡಿದ್ದಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಆಟವಾಡಲು, ತಂತ್ರ ರೂಪಿಸಲು ಗೊತ್ತಾಗ್ತಾ ಇರಲಿಲ್ಲ. ಆದರೆ ನಾನು ಕಲಿತಾ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೆ. ನಂತರ ನಾನು ಆಟದಲ್ಲಿ ಇಳಿದೆ.
ಇದೊಂದು ಸೋಲ್‌ಫುಲ್ ಜರ್ನಿ
ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಿಜವಾದ ಸ್ನೇಹ ಕೂಡ ಮನೆಯೊಳಗಿಲ್ಲ, ಹೊರಗೇ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ.
ನನ್ನ-ಸಂಗೀತಾ ನಡುವಿನ ಸ್ನೇಹವನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಅಕ್ಕ ತಂಗಿಯರ ರೀತಿ ಇದೆ. ನನಗೆ ಆ ರೀತಿ ಬಂಧ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ.
ನನಗೆ ಅಣ್ಣ ಇಲ್ಲ ಎಂಬ ಕೊರಗು ಯಾವಾಗಲೂ ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಂಧನವನ್ನು ಮುಂದುವರಿಸಿಕೊಳ್ಳಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬಹುಬೇಗ ಮನಸ್ಸಿಗೆ ಹತ್ತಿರವಾದವನು ಪ್ರತಾಪ್. ಆಗಾಗ ವಿಚಿತ್ರವಾಗಿ ಆಡುತ್ತಾನೆ ನಿಜ. ಆದರೆ ಅವನು ಇರೋದೇ ಹಾಗೆ. ಅವನನ್ನು ಹಾಗೆಯೇ ಒಪ್ಪಿಕೊಂಡಿದ್ದೇನೆ ನಾನು.
ತುಕಾಲಿಯೇ ಫೇಕ್
ನನಗೆ ಅಕ್ಷರಶಃ ನಕಲಿ ಅನಿಸಿದ್ದು ತುಕಾಲಿ ಸಂತೋಷ್ ಅವರು. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಅನಿಸಿದ್ದು ಸ್ನೇಹಿತ್ ಕೂಡ ಫೇಕ್ ಎಂದು. ನಾನು ಅವರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದರೆ ನಾನು ಹಿಂಜರಿಯುವಂತೆ ಮಾಡಿದ್ದು ಸ್ನೇಹಿತ್. ಇಡೀ ಮನೆಯಲ್ಲಿ ನಾನು ತುಂಬ ಪ್ರಮಾಣಿಕವಾಗಿದ್ದೆ. ಒಬ್ಬರನ್ನು ಬೈದರೂ , ಪ್ರೀತಿಸಿದರೂ ಹೃದಯದಿಂದ ಮಾಡ್ತಿದ್ದೆ. ನನ್ನ ಹಾಗೆ ವಿನಯ್. ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ. ಸಂಗೀತ ಕೂಡ. ಅವರನ್ನು ನಾನು ತುಂಬ ತಪ್ಪು ತಿಳ್ಕೊಂಡಿದ್ದೆ.
ಸಂಗೀತಾ ಗೆಲ್ಲುತ್ತಾರೆ
ಟಾಪ್ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ಗೆಲ್ಲಬೇಕು ಅಂತ ಇದೆ. ಆದರೆ ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ ಸಂಗೀತಾ ಗೆಲ್ಲುತ್ತಾರೆ ಅಂತ. ನನ್ನ ಪ್ರಕಾರ ಈ ಸೀಟಲ್ಲಿ ನನ್ನ ನಂತರ ಕಾರ್ತಿಕ್ ಕೂತಿರ್ತಾರೆ.
ಜಿಯೊ ಸಿನಿಮಾ ಫನ್ ಫ್ರೈಡೆ
ಜಿಯೊ ಸಿನಿಮಾ ಫನ್ ಫ್ರೈಡೆಯ ಎಲ್ಲ ಟಾಸ್ಕ್‌ಗಳನ್ನೂ ನಾನು ಖುಷಿಯಿಂದ ಮಾಡಿದ್ದೇನೆ. ಸಂತು-ಪಂತು ಆಟ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದೇನೆ.
ಮೈಕ್ ಅನ್ನು ಎಂದೂ ಮರೆಯೊಲ್ಲ
ಬಿಗ್‌ಬಾಸ್ ಮನೆಯಲ್ಲಿ ನಾನು ತುಂಬ ಮಿಸ್ ಮಾಡ್ಕೊಳ್ಳೋದು ಮೈಕ್. ಈಗಲೂ ನಾನು ಮೈಕ್ ಎಲ್ಲಿ ಅಂತ ನೋಡಿಕೊಳ್ಳುತ್ತೇನೆ. ಬಿಗ್‌ಬಾಸ್ ಧ್ವನಿಯನ್ನು ಮಿಸ್ ಮಾಡ್ಕೋತೀನಿ. ಕೊನೆದಾಗಿ ನಾನು ಬಿಗ್‌ಬಾಸ್‌ಗೆ ಹೇಳಬೇಕು, ‘ಬಿಗ್‌ಬಾಸ್, ನಾನು ನಿಮ್ ಧ್ವನಿ ನನಗೆ ಇಷ್ಟ ಆಗಿದೆ. ನೀವು ಹೇಗಿದೀರಾ ನೋಡ್ಬೇಕು. ನಮ್ರತಾ ಖುಷಿಯಲ್ಲಿದ್ದಾ ಹೀಗೇ ಇರೋದು. ನನ್ನನ್ನು ನಾನು ಪ್ರೀತಿಸಲು ಶುರುಮಾಡಿದೀನಿ. ನೀವು ಕೊಟ್ಟ ಎಲ್ಲ ಸಂದರ್ಭಗಳು, ಪಾಠಗಳು ನನ್ನನ್ನು ಗಟ್ಟಿಗೊಳಿಸಿವೆ. ಬಿಗ್ ಬಾಸ್ ಮನೆಯಲ್ಲಿ ಇಷ್ಟೊಂದು ಎದುರಿಸಿ ಬಂದ ಮೇಲೆ ಹೊರಗಡೆ ಏನು ಬೇಕಾದ್ರೂ ಎದುರಿಸಲು ತಯಾರಾಗಿದ್ದೀನಿ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.