ಬೆಂಗಳೂರು: ಗಲಾಟೆ, ಗದ್ದಲದಿಂದಲೇ ಸುದ್ದಿಯಾಗುತ್ತಿದ್ದ ಬಿಗ್‌ಬಾಸ್ ಕನ್ನಡ 11ನೇ ಆವೃತ್ತಿಯು ಈಗ ಭಾವನಾತ್ಮಕ ತಿರುವು ಪಡೆದುಕೊಂಡಿದೆ. ಸದ್ಯ, ಮೂರು ವಾರ ಕಳೆದಿದ್ದು, 4 ಮಂದಿ ಎಲಿಮಿನೇಟ್ ಆಗಿದ್ದಾರೆ.
ಪ್ರತಿಯೊಬ್ಬ ಸ್ಪರ್ಧಿಗೂ ತಮ್ಮ ಮನಸ್ಸು ಬಿಚ್ಚಿ ಮಾತನಾಡಲು ಬಿಗ್‌ಬಾಸ್ ಅವಕಾಶ ನೀಡಿದ್ದು, ಸ್ಪರ್ಧಿಗಳು ತಮ್ಮ ಜೀವನದ ಅತ್ಯಂತ ಗುಟ್ಟಾದ ಮತ್ತು ಎಲ್ಲಿಯೂ ಹಂಚಿಕೊಳ್ಳದ ಘಟನೆಗಳ ಕುರಿತಂತೆ ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲೂ ತಮ್ಮ ಹರಿತವಾದ ಭಾಷಣ ಶೈಲಿಯಿಂದಲೇ ಹೆಸರಾಗಿದ್ದ ಚೈತ್ರಾ ಕುಂದಾಪುರ ತಮ್ಮ ಕುಟುಂಬದ ಜೊತೆಗೂ ಹಂಚಿಕೊಳ್ಳದ ಒಂದು ಗುಟ್ಟನ್ನು ಹೊರಗೆ ಹಾಕಿದ್ದಾರೆ.
‘ಮುಸುರೆ ತಿಕ್ಕಿ ವಿದ್ಯಾಭ್ಯಾಸ ಮಾಡಿದ್ದೆ’
ಹೌದು, ಒಂದು ಸಮಯದಲ್ಲಿ ತಮ್ಮ ಕುಟುಂಬ ಎಷ್ಟು ಕಷ್ಟದಲ್ಲಿತ್ತೆಂದರೆ ಒಂದು ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೆ ಎಂದು ಚೈತ್ರಾ ಹೇಳಿದ್ದಾರೆ. ಪದವಿ ಮುಗಿಸಿದ ಬಳಿಕ ನನಗೆ ಸ್ನಾತಕೋತ್ತರ ಪದವಿಗೆ ಸೇರುವ ಇಚ್ಛೆ ಇತ್ತು. ಆದರೆ, ಮನೆಯಲ್ಲಿ ಬಡತನ. ಅಷ್ಟು ಹಣ ಖರ್ಚು ಮಾಡಲು ಸಾಧ್ಯವಿರಲಿಲ್ಲ. ವ್ಯಾಸಂಗ ಮಾಡಲೇಬೇಕೆಂದು ನನಗೆ ಉಚಿತ ಶಿಕ್ಷಣದ ಅವಕಾಶ ಸಿಕ್ಕಿದೆ ಎಂದು ಮನೆಯಲ್ಲಿ ಸುಳ್ಳು ಹೇಳಿದ್ದೆ. ಮೆರಿಟ್ ಸೀಟು ಸಿಕ್ಕಿದ್ದರಿಂದ ಶುಲ್ಕಕ್ಕೆ ಹೆಚ್ಚು ತೊಂದರೆ ಆಗಲಿಲ್ಲ. ಆದರೆ, ಉಳಿದುಕೊಳ್ಳುವುದೇ ಸಮಸ್ಯೆ ಆಗಿತ್ತು. ಮನೆಯಲ್ಲಿ ಪಾಕೆಟ್ ಮನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕಾಸರಗೋಡಿನ ಸ್ವಾತಂತ್ರ್ಯ ಹೋರಾಟಗಾರರ ನೆರವು ಪಡೆದು ಒಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿದೆ. ಬೆಳಗ್ಗೆ ಬೇಗನೆ ಎದ್ದು ಮನೆಗೆಲಸ ಮುಗಿಸಿ ಮೂರು ಬಸ್‌ಗಳನ್ನು ಹಿಡಿದು ವ್ಯಾಸಂಗಕ್ಕೆ ತೆರಳುತ್ತಿದ್ದೆ. ಒಂದು ವರ್ಷ ಹಾಗೆಯೇ ಕಳೆಯಿತು. ಒಂದು ದಿನ ಮನೆಗೆಲಸ ಮಾಡುತ್ತಿದ್ದ ಮನೆಯವರು ಮನೆ ಖಾಲಿ ಮಾಡಿಕೊಂಡು ಹೋದರು. ಆಗ ನಾನು ಊರಿಗೆ ತೆರಳಬೇಕು ಅಥವಾ ಬೆಂಗಳೂರಿಗೆ ಎರಡೇ ಆಯ್ಕೆ ಇತ್ತು. ಲಗೇಜ್ ಜೊತೆಯೇ ತರಗತಿಗೆ ತೆರಳಿದೆ. ತರಗತಿ ಮುಗಿಸಿ ಬರುತ್ತಿದ್ದಾಗ ಅಲ್ಲಿ ಪರಿಚಯವಾದ ಒಬ್ಬರು ಬೆಂಗಳೂರಲ್ಲಿ ಸೆಮಿನಾರ್ ಇದೆ. ಶನಿವಾರ ಭಾನುವಾರ. ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. ಸಂಘಟನೆಯಿಂದ ಆಯೋಜಿಸಿರುವುದು ಎಂದು ಹೇಳಿದರು. ಎರಡು ದಿನ ಎಲ್ಲಿಯಾದರೂ ಉಳಿದುಕೊಳ್ಳಲು ಅವಕಾಶ ಸಿಕ್ಕಿತ್ತಲ್ಲ ಎಂಬ ಖುಷಿಯಲ್ಲೇ ಬೆಂಗಳೂರಿಗೆ ಹೊರಟೆ. ಸೆಮಿನಾರ್‌ನಲ್ಲಿ ನನ್ನ ಭಾಷಣವನ್ನು ಮೆಚ್ಚಿದ ಗಣ್ಯ ವ್ಯಕ್ತಿಯೊಬ್ಬರು ನನ್ನ ಪೂರ್ವಾಪರ ವಿಚಾರಿಸಿದರು. ಬಳಿಕ, ಅವರೇ ನನಗೆ ಮಂಗಳೂರಲ್ಲಿ ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡಿಸಿಕೊಟ್ಟರು. ಅವರು ದೇವರ ರೀತಿ ನನ್ನ ನೆರವಿಗೆ ಬರದೇ ಇದ್ದಿದ್ದರೆ ನಾನು ವಿದ್ಯಾಭ್ಯಾಸ ಮುಗಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಚೈತ್ರಾ ಹೇಳಿದ್ದಾರೆ.
ನಾನು ಒಂದು ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದೆ ಎಂದು ಹೇಳಿದರೆ ಅಮ್ಮ ನೊಂದುಕೊಳ್ಳುತ್ತಾರೆ ಎಂದು ಅವರಿಗೆ ಹೇಳಿರಲಿಲ್ಲ. ಆ ಗುಟ್ಟನ್ನು ಇಂದು ಬಿಚ್ಚಿಟ್ಟಿದ್ದೇನೆ ಎಂದು ಚೈತ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.