ಬೆಂಗಳೂರು: 120 ದಿನಗಳಿಂದ ನಡೆದ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ನಿಂತಿದೆ. ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫೈನಲ್ ಹಂತಕ್ಕೇರಿರುವ ಐವರು ಸ್ಪರ್ಧಿಗಳಲ್ಲಿ ಢವಢವ ಶುರುವಾಗಿದೆ.
ಹೌದು, ಹಿಂದೆಂದಿಗಿಂತಲೂ ಹಲವು ಏಳುಬೀಳುಗಳನ್ನು ಕಂಡ ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಕೊರೊನಾ ಕಾರಣದಿಂದ ವಿಧಿಸಲಾಗಿದ್ದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮಧ್ಯದಲ್ಲೇ ಸ್ಥಗಿತಗೊಂಡಿದ್ದ ಶೋ ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್‌ಗೆ ಕಾಲಿಟ್ಟ 12 ಸ್ಪರ್ಧಿಗಳ ಪೈಕಿ 5 ಮಂದಿ ಫಿನಾಲೆಗೆ ಅಡಿ ಇಡುತ್ತಿದ್ದಾರೆ. ಬೈಕ್ ರೇಸರ್ ಕೆ.ಪಿ. ಅರವಿಂದ್, ಹಾಸ್ಯ ಕಲಾವಿದ ಮಂಜು ಪಾವಗಡ, ಕಿರುತೆರೆ ನಟಿ ವೈಷ್ಣವಿ, ನಟಿ ದಿವ್ಯಾ ಉರುಡುಗ ಮತ್ತು ಉದ್ಯಮಿ ಪ್ರಶಾಂತ್ ಸಂಬರಗಿ ಅಂತಿಮ ಹಂತಕ್ಕೆ ಬಂದಿದ್ದಾರೆ.
ಕೆ.ಪಿ. ಅರವಿಂದ್: ಉಡುಪಿ ಮೂಲದ ಕೆ.ಪಿ.ಅರವಿಂದ್ ಅಂತರರಾಷ್ಟ್ರೀಯ ಬೈಕ್ ರೇಸರ್. 17 ಬಾರಿ ನ್ಯಾಶನಲ್ ಚಾಂಪಿಯನ್ ಆಗಿರುವ ಅರವಿಂದ್ ಅವರು ಹಲವು ಅಂತರರಾಷ್ಟ್ರೀಯ ರೇಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಢಾಕಾ, ಹಿಮಾಲಯದಲ್ಲಿ ನಡೆದ ಹಲವು ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 13ನೇ ಸ್ಥಾನ ಪಡೆದಿರುವುದು ಅವರ ಅತ್ಯುತ್ತಮ ಸಾಧನೆ. ಗಂಭೀರ ಅಪಘಾತಗಳಿಗೆ ಒಳಗಾಗಿರುವ ಅವರಿಗೆ ಹಲವು ಸರ್ಜರಿಗಳಾಗಿದ್ದು, ಅವರ ದೇಹದಲ್ಲಿ 12 ಸ್ಕ್ರೂಗಳನ್ನು ಅಳವಡಿಸಲಾಗಿದೆ.
ಮನೆಯ ಟಾಸ್ಕ್‌ಗಳಲ್ಲಿ ಎಲ್ಲರಿಗಿಂತ ಮುಂದಿರುತ್ತಿದ್ದ ಅರವಿಂದ್ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದಿದ್ದರು. ಎಂತಹ ಸಂದರ್ಭದಲ್ಲಿಯೂ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದ ಅವರ ಛಲ ಬಿಡದ ಮನಸ್ಥಿತಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
3 ಬಾರಿ ಮನೆಯ ಕ್ಯಾಪ್ಟನ್ ಆಗಿದ್ದ ಕೆಪಿ, ಎರಡು ಬಾರಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಮಂಜು ಪಾವಗಡ: ಪಾವಗಡ ಮೂಲದ ಮಂಜು ಪಾವಗಡ ಅವರು ರಂಗಭೂಮಿಯ ಹಿನ್ನೆಲೆ ಉಳ್ಳವರು. ಕಲರ್ಸ್ ಕನ್ನಡದ ಮಜಾಭಾರತ ವೇದಿಕೆ ಮೂಲಕ ಹೆಚ್ಚು ಹೆಸರುವಾಸಿಯಾಗಿರುವ ಹಾಸ್ಯ ಕಲಾವಿದ. ಮನೆಯಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದಲೇ ಗುರುತಿಸಿಕೊಂಡಿದ್ದಾರೆ. ಮನೆಯ ಇತರೆ ಸದಸ್ಯರೇ ಹೇಳುವಂತೆ, ಅರವಿಂದ್ ಮತ್ತು ಮಂಜುಪಾವಗಡ ನಡುವೆ ತೀವ್ರ ಪೈಪೋಟಿ ಇದೆ.
ಎರಡು ಬಾರಿ ಮನೆಯ ಕ್ಯಾಪ್ಟನ್ ಆಗಿದ್ದ ಮಂಜು ಪಾವಗಡ ಎರಡು ಬಾರಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದಾರೆ.
ಮನೆಯಿಂದ ಎಲಿಮಿನೇಟ್ ಆದ ರಘು, ನಿಧಿ ಸುಬ್ಬಯ್ಯ, ಚಂದ್ರಚೂಡ್, ಶುಭಾ ಪೂಂಜಾ ಮತ್ತು ವಿಶ್ವನಾಥ್ ಸೇರಿದಂತೆ ಹಲವರು ಮಂಜು ಪಾವಗಡ ಮತ್ತು ಅರವಿಂದ್ ಗೆಲ್ಲುವ ಸ್ಪರ್ಧಿಗಳು ಎಂದು ಭವಿಷ್ಯ ನುಡಿದಿದ್ದಾರೆ.
ದಿವ್ಯಾ ಉರುಡುಗ: ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮಲೆನಾಡ ಬೆಡಗಿ ನಟಿ ದಿವ್ಯಾ ಉರುಡುಗ ಕನ್ನಡದ ಕಿರುತೆರೆ ಮತ್ತು ಚಿತ್ರರಂಗದ ಮೂಲಕ ಗುರುತಿಸಿಕೊಂಡಿದ್ದಾರೆ.
‘ಚಿಟ್ಟೆ ಹೆಜ್ಜೆ’,ಅಂಬಾರಿ, ಓಂಶಕ್ತಿ ಓಂ ಶಾಂತಿ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯಾ ಉರುಡುಗ ಅವರು, 2017 ರಲ್ಲಿ ತೆರೆಕಂಡ ‘ಹುಲಿರಾಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
‘ಧ್ವಜ’,‘ ಫೇಸ್ ಟು ಫೇಸ್’ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಕೆ.ಪಿ. ಅರವಿಂದ್ ಜೊತೆ ಆಪ್ತವಾಗಿ ಗುರುತಿಸಿಕೊಂಡಿರುವ ದಿವ್ಯಾ ಉರುಡುಗ ಅವರು ಟಾಸ್ಕ್‌ಗಳ ಮೂಲಕವೇ ಗಮನ ಸೆಳೆದಿದ್ದಾರೆ. ಯಾವುದೇ ಆಟದಲ್ಲಿ ಯಾರಿಗೂ ಬಿಟ್ಟುಕೊಡದೆ ಕೊನೆವರೆಗೂ ಗೆಲುವಿಗಾಗಿ ಪ್ರಯತ್ನಿಸುವ ಅವರ ಚ್ಯಾತಿ ಮೂಲಕ ಗಮನ ಸೆಳೆದಿದ್ದಾರೆ.
ಎರಡು ಬಾರಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿರುವ ಇವರು ಕಿಚ್ಚನ ಚಪ್ಪಾಳೆಯನ್ನೂ ಪಡೆದುಕೊಂಡಿದ್ದಾರೆ.
ಪ್ರಶಾಂತ್ ಸಂಬರಗಿ:ಉದ್ಯಮಿ, ಫಿಲ್ಮ್ ಪ್ರಮೋಶನ್, ಸ್ಟ್ರಾಟಜಿ, ಮಾಧ್ಯಮ ನಿರ್ವಾಹಕ ಮುಂತಾದ ಬಹುಮುಖಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಬರಗಿ ಅವರ ಹೆಸರು ಹೆಚ್ಚು ಕೇಳಿಬಂದಿದ್ದು, ಸ್ಯಾಂಡಲ್‌ವುಡ್ ಡ್ರಗ್ಸ್ ಹಗರಣದ ಬಗ್ಗೆ ಬೆಳಕು ಚೆಲ್ಲಿದಾಗ.
ಡ್ರಗ್ಸ್ ಹಗರಣದಲ್ಲಿ ಕೆಲವು ನಟಿಯರು ತೊಡಗಿಸಿಕೊಂಡಿರುವ ಬಗ್ಗೆ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಸಂಬರಗಿ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು.
ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥನೆಂದು ಹೇಳಿಕೊಳ್ಳುವ ಪ್ರಶಾಂತ್ ಸಂಬರಗಿ ಉತ್ತರ ಕರ್ನಾಟಕ ಮೂಲದವರು.
ಮನೆಯಲ್ಲಿ ಸದಾ ಒಂದಿಲ್ಲೊಂದು ಜಗಳ ಮತ್ತು ವಿವಾದಗಳ ಮೂಲಕವೇ ಅವರು ಗುರುತಿಸಿಕೊಂಡಿದ್ದಾರೆ. ಒಮ್ಮೆ ಮನೆಯ ಕ್ಯಾಪ್ಟನ್ ಆಗಿದ್ದರು. 3 ಬಾರಿ ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದರು. ಒಮ್ಮೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ವೈಷ್ಣವಿ: ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಮನೆಮಾತಾಗಿರುವ ವೈಷ್ಣವಿ ಗೌಡ ಈ ಬಾರಿಯ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ.
ಆರಂಭದಲ್ಲಿ ಲೆಕ್ಕಕ್ಕೇ ಇಲ್ಲ ಎಂಬಂತಿದ್ದ ವೈಷ್ಣವಿ ಕಮ್ ಬ್ಯಾಕ್ ಮಾಡಿದ ರೀತಿ. ಟಾಪ್ ಕಂಟೆಂಡರ್‌ಗಳಾದ ಕೆ.ಪಿ. ಅರವಿಂದ್ ಮತ್ತು ಮಂಜು ಪಾವಗಡ ಅವರಿಗೂ ಪೈಪೋಟಿ ಕೊಟ್ಟಿದ್ದು ಸುಳ್ಳಲ್ಲ. ಮಂಜು ಹಾಸ್ಯದ ಜೊತೆ ತನ್ನದೇ ಶೈಲಿಯಲ್ಲಿ ಹಾಸ್ಯ ಬೆರೆಸುತ್ತಿದ್ದ ವೈಷ್ಣವಿ ಆಟ ಪ್ರೇಕ್ಷರನ್ನು ರಂಜಿಸಿದೆ. ವೈಷ್ಣವಿ ಒಮ್ಮೆ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.