ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನ ಅಂತಿಮ ಘಟ್ಟಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಬಿಗ್ ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ. ಈ ವಾರ ‘ವಿಜಯದಂಡ’ ಗಳಿಸುವ ಮೂಲಕ ಆಟದಲ್ಲಿ ಮಂಜು ಪಾವಗಡ ನೇತೃತ್ವದ ‘ನಿಂಗೈತೆ ಇರು’ ತಂಡ 6 ದಂಡಗಳನ್ನು ಗೆದ್ದು ಎಲಿಮಿನೇಶನ್‌ನಿಂದ ಪಾರಾಗಿದೆ.
ಪ್ರತೀ ಬಾರಿ ಎಲಿಮಿನೇಶನ್‌ನಿಂದ ಪಾರಾಗಲು ವೀಕೆಂಡ್‌ವರೆಗೆ ಕಾಯುತ್ತಿದ್ದ ನಾಮಿನೇಟ್ ಆಗಿದ್ದ ಸದಸ್ಯರಿಗೆ ಈ ವಾರ ಟಾಸ್ಕ್ ಗೆದ್ದು ಸೇಫ್ ಆಗುವ ಟ್ವಿಸ್ಟ್ ನೀಡಿದ್ದರು ಬಿಗ್ ಬಾಸ್. ನಾಮಿನೇಟ್ ಆಗಿದ್ದ 8 ಸದಸ್ಯರು, ಕ್ಯಾಪ್ಟನ್ ಅರವಿಂದ್, ಕಳೆದ ವಾರ ಮನೆಯಿಂದ ಹೊರಹೋದ ರಘು ಅವರಿಂದ ನೇರವಾಗಿ ನಾಮಿನೇಶನ್‌ನಿಂದಸೇಫ್ ಆಗಿದ್ದ ಶಮಂತ್ ಆಟದಲ್ಲಿ ಪೈಪೋಟಿ ನಡೆಸಿದರು.
ಇದರನ್ವಯ, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಿ ಕಾಲ ಕಾಲಕ್ಕೆ ಟಾಸ್ಕ್‌ಗಳನ್ನು ನೀಡಲಾಗಿತ್ತು. ಭಾರೀ ಪೈಪೋಟಿಯಿಂದ ಕೂಡಿದ್ದ ಈ ಟಾಸ್ಕ್‌ಗಳಲ್ಲಿ ಎರಡೂ ತಂಡಗಳು ತಲಾ 5 ದಂಡಗಳನ್ನು ಗೆದ್ದು ಬಹುತೇಕ ಸಮಬಲ ಸಾಧಿಸಿದ್ದವು. ಆದರೆ, ಕೊನೆಯ ಹಂತದ ಬೆಂಕಿಕಡ್ಡಿಗಳನ್ನು ಜೋಡಿಸಿ ಮೇಣದ ಬತ್ತಿ ಹಚ್ಚುವ ಟಾಸ್ಕ್‌ನಲ್ಲಿ ಮಂಜು ಪಾವಗಡ ನೇತೃತ್ವದ ನಿಂಗೈತೆ ಇರು ತಂಡ ಗೆಲುವಿನ ಪತಾಕೆ ಹಾರಿಸಿತು. ಈ ಮೂಲಕ 6ನೇ ದಂಡ ಪಡೆದು ಎಲಿಮಿನೇಶನ್‌ನಿಂದ ಪಾರಾಯಿತು.
‘ವಿಜಯಯಾತ್ರೆ’ ತಂಡದ ನಾಲ್ವರಿಗೆ ವೀಕ್ಷಕರ ಅಗ್ನಿಪರೀಕ್ಷೆ: 5 ದಂಡ ಗಳಿಸಿದ ಕೆ.ಪಿ. ಅರವಿಂದ್ ನೇತೃತ್ವದ ವಿಜಯಯಾತ್ರೆ ತಂಡದ ನಾಲ್ವರು ಸದಸ್ಯರು ಈ ವಾರ ಎಲಿಮಿನೇಶನ್ ಎದುರಿಸಬೇಕಿದೆ. ಮನೆಯ ಕ್ಯಾಪ್ಟನ್ ಆಗುವ ಮೂಲಕ ಇಮ್ಯುನಿಟಿ ಪಡೆದಿರುವ ಅರವಿಂದ್ ನಾಮಿನೇಟ್ ಆಗಿಲ್ಲ. ಹಾಗಾಗಿ, ತಂಡದ ಉಳಿದ ಸದಸ್ಯರಾದ ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ವೈಷ್ಣವಿ ಮತ್ತು ಪ್ರಿಯಾಂಕಾ ತಿಮ್ಮೇಶ್ ಅವರು ಎಲಿಮಿನೇಶನ್ ಎದುರಿಸಬೇಕಿದೆ. ವೀಕ್ಷಕರ ಮತಗಳ ಮೇಲೆ ಇವರ ಬಿಗ್ ಬಾಸ್ ಮನೆಯ ಭವಿಷ್ಯ ನಿರ್ಧಾರವಾಗಲಿದೆ.
ಇನ್ನು, ಮಂಜು ಸೇರಿ ಅವರತಂಡದಲ್ಲಿದ್ದ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿಚಂದ್ರಚೂಡ್ ಸೇಫ್ ಆಗಿದ್ದಾರೆ. ಶಮಂತ್ ಈ ಮೊದಲೇ ಸೇಫ್ ಆಗಿದ್ದರು.
ತಂಡ ಸೋಲುತ್ತಿದ್ದಂತೆ ಸಂಬರಗಿ, ಶುಭಾ ಪೂಂಜಾ ಅವರ ಮುಖದಲ್ಲಿ ದುಗುಡ ಎದ್ದು ಕಾಣುತ್ತಿತ್ತು. ಹೋಗುವುದಾದರೆ, ಎಂಟಿರಲಿ, ನಾಲ್ಕು ಮಂದಿ ಇರಲಿ ಹೋಗೇ ಹೋಗುತ್ತೇವೆ. ಅದು ನಮ್ಮ ಹಣೆಬರಹ ಎಂಬ ವೇದಾಂತದ ಮಾತುಗಳು ಶುಭಾ ಪೂಂಜಾ ಅವರಿಂದ ಬಂದಿವೆ.
ಚಕ್ರವರ್ತಿಗೆ ಒಲಿದ ಅದೃಷ್ಟ: ಕಳೆದ ಎರಡು ವಾರಗಳಿಂದ ಪ್ರತೀ ವಾರ ನಾಮಿನೇಟ್ ಆಗಿರುವ ಚಕ್ರವರ್ತಿ ಚಂದ್ರಚೂಡ್ ಕೊನೆಯವರಾಗಿ ಸೇಫ್ ಆಗಿದ್ದಾರೆ. ಈ ಬಾರಿಯೂ ಅವರು ಡೇಂಜರ್ ಲೈನ್‌ಗೆ ಹೋಗುವ ಸಾಧ್ಯತೆ ಇತ್ತು. ಆದರೆ, ಮಂಜು ತಂಡದಲ್ಲಿದ್ದ ಚಕ್ರವರ್ತಿ ಈಗ ಸೇಫ್ ಆಗಿದ್ದು, ಮನೆಯಲ್ಲಿ ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.