ADVERTISEMENT

Bigg Boss 9: ಒಂಬತ್ತು ನವೀನರು–ಒಂಬತ್ತು ಪ್ರವೀಣರು ಯಾರು?

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 14:11 IST
Last Updated 26 ಸೆಪ್ಟೆಂಬರ್ 2022, 14:11 IST
   

ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿ ಈ ಹಿಂದಿನ ಆವೃತ್ತಿಗಳಿಗಿಂತ ವಿಭಿನ್ನವಾಗಿದೆ. ಹಿಂದೆಲ್ಲ ಒಮ್ಮೆ ಬಂದುಹೋದವರಿಗೆ ಮತ್ತೆ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಈ ಹಿಂದಿನ ಸೀಸನ್‌ನಲ್ಲಿದ್ದ 5 ಮಂದಿಗೆ ಮತ್ತೆ ಅವಕಾಶ ಸಿಕ್ಕಿದೆ. ಜೊತೆಗೆ ಓಟಿಟಿಯಿಂದ ಅರ್ಹತೆ ಪಡೆದ ನಾಲ್ವರು ಮತ್ತು ಹೊಸದಾಗಿ 9 ಮಂದಿ ಪ್ರವೇಶ ಪಡೆದಿದ್ದಾರೆ. ಹೀಗಾಗಿ, ಮನೆಯಲ್ಲಿ ಪ್ರವೀಣರು ಮತ್ತು ನವೀನರ ನಡುವೆ ಆಟ ನಡೆಯುತ್ತಿದೆ.

ಪ್ರವೀಣರು ಯಾರು?

ದಿವ್ಯಾ ಉರುಡುಗ–ಪ್ರಶಾಂತ್ ಸಂಬರಗಿ

ADVERTISEMENT

ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಟಾಪ್‌ 5ರಲ್ಲಿದ್ದ ಪ್ರಶಾಂತ್ ಸಂಬರಗಿ ಮತ್ತು 2ನೇ ರನ್ನರ್ ಅಪ್ ದಿವ್ಯಾ ಉರುಡುಗ ಈ ಬಾರಿಯೂ ಅವಕಾಶ ಗಿಟ್ಟಿಸಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸಂಬರಗಿ ತಮ್ಮ ವಿವಾದಗಳ ಮೂಲಕವೇ ಹೆಸರುವಾಸಿಯಾಗಿದ್ದರು. ಸದಸ್ಯರ ಜೊತೆ ಕಿರಿಕ್, ಜೋರು ಜಗಳ, ಮಹಿಳಾ ಸದಸ್ಯರ ಲೇವಡಿ.. ಹೀಗೆ ಒಂದಲ್ಲ ಒಂದು ರೀತಿ ಸುದ್ದಿಗೆ ಗ್ರಾಸವಾಗುತ್ತಿದ್ದರು. ಈ ಬಾರಿಯೂ ಮೊದಲ ದಿನದಿಂದಲೇ ಅವರು ಮಾತಿನ ಬಾಣ ಹೂಡಲಾರಂಭಿಸಿದ್ದಾರೆ.

ಬೈಕ್ ರೇಸರ್ ಕೆ.ಪಿ. ಅರವಿಂದ್ ಜೊತೆ ಸ್ನೇಹದ ಮೂಲಕ ಗಮನ ಸೆಳೆದಿದ್ದ ನಟಿ ದಿವ್ಯಾ ಉರುಡುಗ ಎರಡನೇ ಅವಕಾಶ ಗಿಟ್ಟಿಸಿದ್ದಾರೆ. ಕಳೆದ ಬಾರಿ ಟಾಸ್ಕ್‌ಗಳಲ್ಲಿ ಅದ್ಬುತವಾಗಿ ಆಡಿದ್ದ ಅವರು ಈ ಬಾರಿಯೂ ಅದೇ ಪ್ರದರ್ಶನದ ಭರವಸೆ ನೀಡಿದ್ದಾರೆ.

ಅನುಪಮಾ ಗೌಡ–ದೀಪಿಕಾ ದಾಸ್–ಅರುಣ್ ಸಾಗರ್

ಬಿಗ್ ಬಾಸ್ 6ನೇ ಆವೃತ್ತಿಯಲ್ಲಿ ಹೆಚ್ಚು ಗಮನ ಸೆಳೆದಿದ್ದ ಅನುಪಮಾ ಗೌಡ 99ನೇ ದಿನ ಮನೆಯಿಂದ ಹೊರ ನಡೆದಿದ್ದರು. ಟಾಸ್ಕ್ ಮತ್ತು ಭಾವನಾತ್ಮಕ ವಿಷಯಗಳಿಂದ ಗಮನ ಸೆಳೆದಿದ್ದರು. ಈಗ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಮತ್ತಷ್ಟು ಉತ್ತಮವಾಗಿ ಆಡುವ ಭರವಸೆ ನೀಡಿದ್ದಾರೆ. 18ನೇ ಸ್ಪರ್ಧಿಯಾಗಿ ಅವರು ಮನೆ ಸೇರಿದರು.

7ನೇ ಆವೃತ್ತಿಯಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದಿದ್ದ ದೀಪಿಕಾ ದಾಸ್, ಈ ಬಾರಿಯೂ ಅದೇ ಓಟ ಮುಂದುವರಿಸುವ ಸೂಚನೆ ನೀಡಿದ್ದಾರೆ. 6ನೇ ಸ್ಪರ್ಧಿಯಾಗಿ ಅವರು ಮನೆ ಪ್ರವೇಶಿಸಿದ್ದಾರೆ..

ಇನ್ನು, ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟ ಅರುಣ್ ಸಾಗರ್ ಈ ಬಾರಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವಿಶಿಷ್ಟ ಮಾತಿನ ವೈಖರಿ, ಕವನಗಳ ವಾಚನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಓಟಿಟಿಯಿಂದ ನಾಲ್ವರು

ಈ ವರ್ಷ ಆರಂಭವಾದ ಬಿಗ್‌ಬಾಸ್ ಓಟಿಟಿ ಮೊದಲ ಆವೃತ್ತಿಯಲ್ಲಿ ಅಂತಿಮ ಹಂತಕ್ಕೆ ಬಂದಿದ್ದ ನಾಲ್ವರು 9ನೇ ಆವೃತ್ತಿಗೆ ಪದಗ್ರಹಣ ಮಾಡಿದ್ದಾರೆ.

ನಟ ಮತ್ತು ನಿರ್ದೇಶಕ ರೂಪೇಶ್ ಶೆಟ್ಟಿ ಓಟಿಟಿ ಆವೃತ್ತಿಯ ಟಾಪರ್ ಆಗಿದ್ದರು. ಪ್ರಾಮಾಣಿಕರಾಗಿ ಜನಮೆಚ್ಚುಗೆ ಗಳಿಸಿದ್ದ ಅವರು ಅರ್ಹತೆ ಪಡೆದು ದೊಡ್ಡ ಮನೆ ಆಗಮಿಸಿದ್ದಾರೆ. ರೂಪೆಶ್ ಜೊತೆಗಿನ ಸ್ನೇಹದ ಮೂಲಕ ಗುರುತಿಸಿಕೊಂಡಿದ್ದ ಸಾನ್ಯಾ ಅಯ್ಯರ್ ಸಹ ಬಂದಿದ್ದಾರೆ. ಇದರ ಜೊತೆಗೆ ಓಟಿಟಿ ಆವೃತ್ತಿಯ ಅಂತಿಮ ನಾಲ್ಕರಲ್ಲಿದ್ದ ರಾಕೇಶ್ ಅಡಿಗ ಮತ್ತು ಆರ್ಯವರ್ಧನ್ ಗುರೂಜಿ ಸಹ ಮನೆ ಪ್ರವೇಶಿಸಿದ್ದಾರೆ. ಎಲ್ಲರ ಆಪ್ತಮಿತ್ರನಂತೆ ರಾಕೇಶ್ ಗುರುತಿಸಿಕೊಂಡಿದ್ದರೆ, ಆರ್ಯವರ್ಧನ್ ಮಗುವಿನ ಮನಸ್ಸಿನ ಮನುಷ್ಯ ಎಂದು ಹೆಸರಾಗಿದ್ದಾರೆ.

ನವೀನರು ಯಾರು?

1. ನಟಿ ಮಯೂರಿ: ಕನ್ನಡದ 15ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಮಯೂರಿ, ಒಂದೂವರೆ ವರ್ಷದ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

2. ನವಾಜ್: ತಮ್ಮದೇ ಆದ ವಿಶಿಷ್ಟ ಶೈಲಿಯ ಸಿನಿಮಾ ವಿಶ್ಲೇಷಣೆ ಮೂಲಕ ಗಮನ ಸೆಳೆದಿರುವ ನವಾಜ್, ಇದೀಗ ದೊಡ್ಡ ಮನೆಗೆ ಕಾಲಿಟ್ಟಿದ್ದಾರೆ.

3. ದರ್ಶ್ ಚಂದ್ರಪ್ಪ: ನಟ ಮತ್ತು ಉದ್ಯಮಿ ದರ್ಸ್ ಚಂದ್ರಪ್ಪ ವೇದಿಕೆ ಮೇಲೆಯೇ ಅತ್ಯಂತ ಉತ್ಸಾಹ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

4. ಅಮೂಲ್ಯ ಗೌಡ: ಕಮಲಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಅಮೂಲ್ಯ ಗೌಡ ದೊಡ್ಡ ಮನೆಗೆ ಪ್ರವೇಶ ಪಡೆದಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡುವ ಭರವಸೆ ನೀಡಿದ್ದಾರೆ.

5. ಕಾವ್ಯಶ್ರೀ ಗೌಡ: 3 ಸಾವಿರ ಎಪಿಸೋಡ್ ಪೂರೈಸಿರುವ ‘ಮಂಗಳಗೌರಿ ಮದುವೆ’ಧಾರಾವಾಹಿಯ ಅಳುಮುಂಜಿ ಪಾತ್ರದಿಂದ ಮನೆ ಮಾತಾಗಿದ್ದ ಕಾವ್ಯಶ್ರೀ ಗೌಡ, ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಧಾರಾವಾಹಿಯಲ್ಲಿ ಮಾತ್ರ ಅಳುಮುಂಜಿ ತಂಟೆಗೆ ಬಂದರೆ ತಕ್ಕ ಉತ್ತರ ಕೊಡುವುದಾಗಿ ಎಚ್ಚರಿಸಿದ್ದಾರೆ.

6. ವಿನೋದ್ ಗೊಬ್ಬರಗಾಲ: ಮಜಾಭಾರತ ಖ್ಯಾತಿಯ ವಿನೋದ್ ಗೊಬ್ಬರಗಾಲ ಹಾಸ್ಯ ಚಟಾಕಿ ಮೂಲಕವೇ ಪ್ರವೇಶ ಪಡೆದಿದ್ದಾರೆ. ತನ್ನನ್ನು ತಾನು ಹಳ್ಳಿಮೇಷ್ಟ್ರು ಕಪ್ಪೆರಾಯ ಎಂದು ಹೇಳಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

7. ನೇಹಾ ಗೌಡ: ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿದ್ದ ನೇಹಾ ಗೌಡ ಅದೇ ಹುಮ್ಮಸ್ಸಿನಲ್ಲಿ ಈ ವೇದಿಕೆ ಪ್ರವೇಶ ಪಡೆದಿದ್ಧಾರೆ.

8. ರೂಪೇಶ್ ರಾಜಣ್ಣ: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ವಿಶಿಷ್ಟ ಸ್ಪರ್ಧಿಯಾಗಿದ್ದು, ಗಮನ ಸೆಳೆದಿದ್ದಾರೆ.

9. ಐಶ್ವರ್ಯ ಪಿಸೆ. ಕಳೆದ ಆವೃತ್ತಿಯಂತೆ ಈ ಬಾರಿಯೂ ಒಬ್ಬರು ಬೈಕ್ ರೇಸರ್ ಮನೆಗೆ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬೈಕ್ ರೇಸರ್ ಐಶ್ವರ್ಯ ಪಿಸೆ ಬಲಿಷ್ಠ ಸ್ಪರ್ಧಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.