ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಬಿಗ್ ಬಾಸ್ ಓಟಿಟಿ ಆವೃತ್ತಿಯಿಂದ ಅರ್ಹತೆ ಪಡೆದ ನಾಲ್ವರು, ಈ ಹಿಂದಿನ ಆವೃತ್ತಿಗಳಲ್ಲಿ ಗಮನ ಸೆಳೆದಿದ್ದ 5 ಮಂದಿ ಹಾಗೂ ಹೊಸದಾಗಿ 9 ಮಂದಿ ಸೇರಿ 18 ಸ್ಪರ್ಧಿಗಳು ಮನೆಗೆ ಪ್ರವೇಶ ಪಡೆದಿದ್ದಾರೆ.
9 ಪ್ರವೀಣರು ಮತ್ತು 9 ನವೀನರ ಆಟ ಶನಿವಾರ ರಾತ್ರಿಯಿಂದಲೇ ಶುರುವಾಗಿದೆ. ಕಳೆದ ಆವೃತ್ತಿಯಲ್ಲಿದ್ದ ಪ್ರಶಾಂತ್ ಸಂಬರಗಿ ಮತ್ತೆ ಈ ಬಾರಿಯೂ ಮನೆ ಪ್ರವೇಶಿಸಿದ್ದು, ಮೊದಲ ದಿನವೇ ಮನೆಯ ಸದಸ್ಯರ ಕೋಪ ಎದುರಿಸಿದ್ದಾರೆ.
ಆರ್ಯವರ್ಧನ್ ಅವರನ್ನು ಕೆಣಕಿದ ಪ್ರಶಾಂತ್
ಆರ್ಯವರ್ಧನ್ ಅವರು ನಾನು ಇಲ್ಲಿಯವರೆಗೆ 10 ಲಕ್ಷಕ್ಕೂ ಅಧಿಕ ಜನರಿಗೆ ಜೋತಿಷ್ಯ ಹೇಳಿರುವೆ ಎಂದು ಹೇಳುತ್ತಿದ್ದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಸಂಬರಗಿ, ಅಷ್ಟು ಮಂದಿಗೆ ಜೋತಿಷ್ಯ ಹೇಳಲು ನಿಮ್ಮ ಇಲ್ಲಿಯವರೆಗಿನ ಜೀವಿತಾವಧಿಯಲ್ಲಿ ಸಾಧ್ಯವೇ ಇಲ್ಲ. ಸುಳ್ಳು ಹೇಳಬೇಡಿ ಎಂದು ಮೂದಲಿಸಿದರು. ನಿಮ್ಮ ಅಸಲಿ ಹೆಸರು ಏನೆಂಬುದೂ ನನಗೆ ತಿಳಿದಿದೆ. ಸಮಯ ಬಂದಾಗ ಹೇಳುತ್ತೇನೆ. ಆರ್ಯವರ್ಧನ್ ಉರುಫ್.. ಉರುಫ್.. ಎಂದು ಕ್ಯಾತೆ ತೆಗೆದರು.
ಉರುಫ್ ಪದ ಅರ್ಥ ತಿಳಿಯದ ಆರ್ಯವರ್ಧನ್, ಕೋಪದಿಂದ ಯಾರು ನಿನಗೆ ಹೇಳಿದ್ದು ಉರುಫ್ ಎಂದು ಅಶ್ಲೀಲ ಪದ ಬಳಸಿದರು. ಇದು ಮನೆಯ ಸದಸ್ಯರಿಗೆ ಕಸಿವಿಸಿ ಉಂಟುಮಾಡಿತು.
ಆರ್ಯವರ್ಧನ್ ಅವರನ್ನು ಕೆಣಕಿದ ಸಂಬರಗಿಗೆ ತರಾಟೆಗೆ ತೆಗೆದುಕೊಂಡ ನಟ, ಉದ್ಯಮಿ ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ ಏನೆಂದು ಎಲ್ಲರಿಗೂ ತಿಳಿದಿದೆ. ಕಳೆದ ಆವೃತ್ತಿಯಲ್ಲೂ ಮನೆಯಲ್ಲಿದ್ದ ಅವರು, ಹೊರಗೆ ಹೋಗಿ ಹೆಣ್ಣುಮಕ್ಕಳ ಬಗ್ಗೆ ಟಿ.ವಿಯಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದರು. ಈ ರೀತಿ ಮಾಡುವುದು ತಪ್ಪು. ಬೆನ್ನಿಗೆ ಚೂರಿ ಇರಿಯುವ ಕೆಲಸ ಇದು ಎಂದು ಕಿಡಿಕಾರಿದರು.
ಸುಮ್ಮನೆ ಏನೇನೋ ಹೇಳಬೇಡ, ಉದಾಹರಣೆ ಕೊಡು ಎಂದು ಸಂಬರಗಿ ಪ್ರಶ್ನಿಸಿದರು. ಅದಕ್ಕೆ ಸ್ಪರ್ಧಿ ದಿವ್ಯಾ ಉರುಡುಗ ಅವರನ್ನು ಕರೆದು ಈ ಬಗ್ಗೆ ಪ್ರಶ್ನಿಸಿದಾಗ, ಹೌದು ಅವರು ಮಾತನಾಡಿರುತ್ತಾರೆ ಎಂದು ಉರುಡುಗ ಉತ್ತರಿಸಿದರು. ಈ ಸಂದರ್ಭ ಮುಜುಗರಕ್ಕೊಳಗಾದ ಪ್ರಶಾಂತ್ ಅಲ್ಲಿಂದ ಕಾಲ್ಕಿತ್ತರು.
ಆರ್ಯವರ್ಧನ್ ಹೆಸರೇನು?
ತಮ್ಮನ್ನು ಮೂದಲಿಸುತ್ತಿದ್ದ ಸಂಬರಗಿ ಮಾತಿಗೆ ಪ್ರತಿಕ್ರಿಯಿಸಿದ ಆರ್ಯವರ್ಧನ್, ನನ್ನ ಹೆಸರು ಸುಬ್ರಹ್ಮಣ್ಯ. ಆರ್ಯವರ್ಧನ್ ನನ್ನ ಮೂಲ ಹೆಸರಲ್ಲ ಎಂದು ಈಗಾಗಲೇ ಹೇಳಿರುವೆ. ನನ್ನ ಅಮ್ಮ ನನ್ನನ್ನು ಸುಬ್ರಹ್ಮಣ್ಯ ಎಂದು ಕರೆಯುತ್ತಿದ್ದರುಎಂದು ಉತ್ತರ ಕೊಟ್ಟರು.
ಒಟ್ಟಿನಲ್ಲಿ, ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ಚರ್ಚೆಗಳು ನಡೆದವು. ಇದರ ಜೊತೆಗೆ ಹಾಸ್ಯಚಟಾಕಿಗಳು ಬಂದುಹೋದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.