ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿ ಆರಂಭವಾಗಿ 6 ವಾರ ಕಳೆದಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುವ ಜೊತೆಗೆ ನಿಜಬಣ್ಣ ಬಯಲಾಗುತ್ತಿದೆ.
ಇಲ್ಲಿಯವರೆಗೆ ಮನೆಯವರ ಬಾಯಲ್ಲಿ ಮುಗ್ಧನೆನಿಸಿಕೊಂಡಿದ್ದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಇದೀಗ ತಮ್ಮ ಹೊಸ ಅವತಾರ ಹೊರಗಿಟ್ಟಿದ್ದಾರೆ. ಸಿನಿಮಾ ಹೀರೊ ಶೈಲಿಯಲ್ಲಿ ಎಲ್ಲರಿಗೂ ಖಡಕ್ ಆಗಿ ಉತ್ತರಿಸುತ್ತಿರುವ ಅವರು ಒಂದರ್ಥದಲ್ಲಿ ಮನೆಯ ಸದಸ್ಯರಿಗೆ ಭಯ ಹುಟ್ಟಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ಉರುಡುಗ
ಮನೆಯಲ್ಲಿ ಯಾರು ಫೇಕ್ ಮತ್ತು ಯಾರು ರಿಯಲ್ ಎಂದು ಆಯ್ಕೆ ಮಾಡಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಗೆದ್ದ ಸದಸ್ಯ ಬಿಗ್ ಬಾಸ್ ನೀಡಿದ ಆಸನದಲ್ಲಿ ಕುಳಿತು ಐವರನ್ನು ಫೇಕ್ ಮತ್ತು ಐವರನ್ನು ರಿಯಲ್ ಎಂದು ಗುರುತಿಸಬೇಕು.
ಈ ಸಂದರ್ಭ ಎರಡನೇಯವರಾಗಿ ಟಾಸ್ಕ್ ಗೆದ್ದ ರಾಜಣ್ಣ, ಉರುಡುಗ ನನಗೆ ಫೇಕ್ ಆಗಿ ಕಾಣುತ್ತಾರೆ. ಏಕೆಂದರೆ, ನಾನು ಅವರಿಗೆ ಹಾಡು ಬರೆದುಕೊಟ್ಟಿದ್ದೆ. ಆದರೆ, ಅದನ್ನ ನಾನು ಬರೆದಿದ್ದು ಎಂದು ಅವರು ೆಲ್ಲಿಯೂ ಹೇಳಿಕೊಳ್ಳಲಿಲ್ಲ. ಸಮಯ ಸಾಧಕರಂತೆ ವರ್ತಿಸಿದರು. ಅಲ್ಲದೆ, ಅಡುಗೆ ಮನೆಯ ಗ್ಲಾಸ್ ಒಡೆದಾಗ ನನಗೆ ಶಿಕ್ಷೆ ಆಗುತ್ತಿದ್ದನ್ನು ಕಂಡು ಒಂದು ನಿಮಿಷ ಕಾದು ತೀರ್ಪು ನೀಡುವಂತೆ ಕ್ಯಾಪ್ಟನ್‌ಗೆ ಹೇಳುತ್ತಾರೆ. ಆದರೆ, ಆ ಗ್ಲಾಸ್ ಅನ್ನು ಉರುಡುಗ ಅವರೇ ಒಡೆದಿರಬಹುದು. ಅದನ್ನು ಒಪ್ಪಿಕೊಳ್ಳದೆ ನಾಟಕ ಮಾಡಿದರು ಎಂದು ಆಪಾದಿಸಿದರು.
ಇದರಿಂದ ತೀವ್ರ ನೊಂದುಕೊಂಡ ದಿವ್ಯಾ ಉರುಡುಗ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು. ಬಳಿಕ, ಆಸಕ್ತಿ ಕಳೆದುಕೊಮಡ ಉರುಡುಗ ಟಾಸ್ಕ್‌ಗಳಲ್ಲೂ ಅಷ್ಟಾಗಿ ಪ್ರದರ್ಶನ ತೋರಲಿಲ್ಲ. ಮನಸಲ್ಲಿ ಅಷ್ಟೊಂದು ಹುಳುಕು ಇಟ್ಟುಕೊಂಡು ನನ್ನ ಜೊತೆ ನಗುನಗುತ್ತಾ ಇದ್ದ ಅವರು ಎಷ್ಟು ಫೇಕ್ ಎಂದು ಕಣ್ಣೀರು ಹಾಕಿದರು.
ಇದೇ ವಿಚಾರವಾಗಿ ರಾಜಣ್ಣನ ಬಳಿ ಬಂದು ಅವರ ಮಾತಿನ ವೈಖರಿ ಬಗ್ಗೆ ರಾಕೇಶ್ ಅಡಿಗ ತಿಳಿ ಹೇಳಲು ಯತ್ನಿಸಿದರು. ಇದಕ್ಕೂ ಸೊಪ್ಪು ಹಾಕದ ರಾಜಣ್ಣ, ಹೆಣ್ಣುಮಕ್ಕಳು ಇದ್ದರೆ ಸಾಕು. ಸಹಾಯ ಮಾಡುವ ರೀತಿ ಬಂದುಬಿಡ್ತೀಯಾ ಎಂದು ಮೂದಲಿಸಿದರು. ಮನೆಯಿಂದ ಹೊರ ಹೋಗುವುದರೊಳಗೆ ಎಲ್ಲರ ಮುಖವಾಡ ಬಯಲು ಮಾಡುತ್ತೇನೆ ಎಂದು ರಾಜಣ್ಣ ಜೋರಾಗಿ ಕೂಗಿ ಹೇಳಿದ್ದಾರೆ.
ಅಲ್ಲದೆ, ಬಿಗ್ ಬಾಸ್ ನೀಡಿದ ಕುರ್ಚಿ ಮೇಲೆ ಕುಳಿತು ರಾಜಣ್ಣ, ಸರ್ವಾಧಿಕಾರಿಯಂತೆ ವರ್ತನೆ ತೋರಿದ್ದಾರೆ. ಒಬ್ಬೊಬ್ಬರನ್ನು ಜೋರು ಧ್ವನಿಯಲ್ಲಿ ಫೇಕ್, ರಿಯಲ್ ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಅಮೂಲ್ಯ ಜೊತೆ ಮಾತಿನ ಸಮರ..
ಕಳೆದ ವಾರ ಕಳಪೆ ಕೊಡುವ ಸಂದರ್ಭ ಅಮೂಲ್ಯ ಅವರನ್ನು ರಾಜಣ್ಣ, ನೀವು ದೊಡ್ಡ ಕಳಪೆ ಎಂದು ಹೇಳಿದ್ದರು. ಇದನ್ನೇ ನೆಪ ಮಾಡಿಕೊಂಡ ಅಮೂಲ್ಯ ಈ ವಾರ ನೀವೊಬ್ಬ ದೊಡ್ಡ ಫೇಕ್ ಎಂದು ಕೂಗಿ ಹೇಳಿದರು. ಅಲ್ಲದೆ, ಉರುಡುಗ ಅವರ ಜೊತೆಗಿನ ವರ್ತನೆಯನ್ನು ಉಲ್ಲೇಖಿಸಿದ ಅಮೂಲ್ಯ, ಘಟನೆ ನಡೆದ ಕೂಡಲೇ ಉರುಡುಗ ಅವರಿಗೆ ರಾಜಣ್ಣ ಅವರ ತಪ್ಪಿನ ಬಗ್ಗೆ ಹೇಳಬಹುದಿತ್ತು. ಅದನ್ನು ಬಿಟ್ಟು ಅವರಿಗೆ ಬೇಕಾದಾಗ ಬಳಸಿಕೊಂಡರು. ಇದು ಅವರ ಫೇಕ್ ಮನಸ್ಥಿತಿಗೆ ಸಾಕ್ಷಿ ಎಂದು ಕಿಡಿ ಕಾರಿದರು.
ಮನೆಯ ತುಂಬೆಲ್ಲ, ನಾನು ಯಾರಿಗೂ ಹೆದರಲ್ಲ. ನನ್ನ ಅಭಿಪ್ರಾಯ ನಾನು ಹೇಳಿದ್ದೀನಿ. ಅದನ್ನು ಸ್ವೀಕರಿಸೋಕೂ ತಾಕತ್ತು ಬೇಕು ಎಂದೆಲ್ಲ ಹಾರಾಡಿದ್ದಾರೆ. ಅಷ್ಟೇ ಅಲ್ಲದೆ, ಕಿರುಚಾಡುತ್ತಾ.. ಸ್ಪರ್ಧಿಗಳನ್ನು ಕಿಚಾಯಿಸುತ್ತಾ ಅವರು ಮಾಡುತ್ತಿರುವ ವರ್ತನೆ ಅಕ್ಷರಶಃ ಕೆಲವರಿಗೆ ಭಯ ಹುಟ್ಟಿಸಿದೆ.
ಬಿಗ್ ಬಾಸ್ ರಾಜಣ್ಣನನ್ನು ನೋಡಿದರೆ ಭಯವಾಗುತ್ತೆ ಎಂದು ಅರುಣ್ ಸಾಗರ್ ಕ್ಯಾಮರಾ ಬಳಿ ಬಂದು ಹೇಳಿದ್ದೂ ಇದೆ. ಮುಗ್ದನಂತೆ ವರ್ತಿಸುತ್ತಿದ್ದ ರಾಜಣ್ಣ, ಈಗ ತಮ್ಮ ನಿಜವಾದ ರುಪ ಹೊರಗಿಟ್ಟಿದ್ದಾರೆ ಎಂಬ ಮಾತುಗಳೂ ಮನೆಯ ಸದಸ್ಯರಲ್ಲಿ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಬಹುತೇಕ ಸದಸ್ಯರನ್ನು ಎದುರು ಹಾಕಿಕೊಮಡಿರುವ ರೂಪೇಶ್ ರಾಜಣ್ಣನ ಮುಂದಿನ ಗೇಮ್ ಪ್ಲಾನ್ ಏನು ಎಂಬುದು ಎಲ್ಲರ ಕುತೂಹನಕ್ಕೆ ಎಡೆಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.