ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ಅಖಿಲ ಭಾರತೀಯ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಸಂತೋಷ್ ತಮ್ಮ ಕೊರಳಿನಲ್ಲಿ ಹುಲಿ ಉಗುರು ಧರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿರುವ ಬಿಗ್ ಬಾಸ್ ಮನೆಗೆ ಭಾನುವಾರ ರಾತ್ರಿ ಹೋಗಿದ್ದ ಅರಣ್ಯ ಅಧಿಕಾರಿಗಳು, ಸಂತೋಷ್ ಅವರನ್ನು ವಶಕ್ಕೆ ಪಡೆದು ಹೊರಗೆ ಕರೆತಂದಿದ್ದಾರೆ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಬಿಗ್ ಬಾಸ್ ರಿಯಾಲಿಟಿ ಶೋ ಸದ್ಯ 10ನೇ ಆವೃತ್ತಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಮನೆಯಲ್ಲಿಯೇ ಬಂಧಿಸಿ ಕರೆದೊಯ್ಯಲಾಗಿದೆ.
'ಹುಲಿ ಕೊಂದು ಅದರ ಉಗುರು ಹೊರಗೆ ತೆಗೆದು ಮಾರಿರುವ ಶಂಕೆ ಇದೆ. ಅದೇ ಉಗುರನ್ನು ಸಂತೋಷ್ ಧರಿಸಿರಬಹುದು. ಹೀಗಾಗಿ, ಪ್ರಕರಣ ದಾಖಲಿಸಿಕೊಂಡು ಸಂತೋಷ್ ಅವರನ್ನು ಬಂಧಿಸಲಾಗಿದೆ' ಎಂದು ಮೂಲಗಳು ಹೇಳಿವೆ.
'ಸಂತೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ, ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು' ಎಂದು ಮೂಲಗಳು ತಿಳಿಸಿವೆ.
'ಸಂತೋಷ್ ಅವರಿಂದ ಉಗುರುಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಅವುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ' ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.