ಬೆಂಗಳೂರು: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ.
ಕನ್ನಡದ ಖ್ಯಾತ ನಟ ಸುದೀಪ್ 10 ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, 11ನೇ ಆವೃತ್ತಿಗೂ ತಯಾರಿ ಮಾಡಿಕೊಂಡಿದ್ದಾರೆ. ಹೊಸ ಆವೃತ್ತಿಯ ಲೋಗೊವನ್ನು ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ.
ಕಿರುತೆರೆಯಲ್ಲಿ ಸುದ್ದಿಯಲ್ಲಿರುವ ಕೆಲ ನಟ, ನಟಿಯರು, ಸದ್ದು ಮಾಡುತ್ತಿರುವ ಪತ್ರಕರ್ತರು ಮತ್ತು ಇತರರ ಹೆಸರುಗಳು 11ನೇ ಆವೃತ್ತಿಗೆ ಕೇಳಿಬರುತ್ತಿದೆ. ಶೋ ಆರಂಭವಾದ ಬಳಿಕವಷ್ಟೇ ಕುತೂಹಲಕ್ಕೆ ತೆರೆಬೀಳಲಿದೆ.
ಸೀಸನ್ 10ರಲ್ಲಿ ಟ್ರೋಫಿ ಗೆದ್ದಿದ್ದ ಕಿರುತೆರೆ ನಟ ಕಾರ್ತಿಕ್
ಹೌದು, ಸೀಸನ್ 10ರಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ಅಭಿಮಾನಿಗಳಿಂದ ಭಾರಿ ಮತಗಳನ್ನು ಪಡೆಯುವ ಮೂಲಕ ಟ್ರೋಫಿ ಜೊತೆ ₹50 ಲಕ್ಷ ಜೇಬಿಗಿಳಿಸಿದ್ದರು. ರನ್ನರ್ ಆಗಿ ಡ್ರೋನ್ ಪ್ರತಾಪ್, ಎರಡನೇ ರನ್ನರ್ ಆಗಿ ಸಂಗೀತಾ ಶೃಂಗೇರಿ, ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ, ನಾಲ್ಕನೇ ರನ್ನರ್ ಅಪ್ ಆಗಿ ವರ್ತೂರ್ ಸಂತೋಷ್ ಆಯ್ಕೆಯಾಗಿದ್ದರು.
ಸ್ಪರ್ಧಿಗಳ ನಡುವಿನ ಸಂಘರ್ಷದಿಂದಾಗಿ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯು ಈ ಹಿಂದಿನ ಎಲ್ಲಾ ಆವೃತ್ತಿಗಳಿಗಿಂತಲೂ ಹೆಚ್ಚು ಸದ್ದು ಮಾಡಿತ್ತು. ವಿನಯ್–ಸಂಗೀತಾ ನಡುವಿನ ಬಳೆ ಜಗಳ, ಆವೃತ್ತಿಯ ಆರಂಭದಲ್ಲಿ ಜೋಡಿಹಕ್ಕಿಗಳಂತಿದ್ದ ಕಾರ್ತಿಕ್ ಮತ್ತು ಸಂಗೀತಾ ಶೃಂಗೇರಿ ಕೊನೆಯ ವೇಳೆಗೆ ಶತ್ರುಗಳಂತಾಗಿದ್ದರು. ಹೊರಗಡೆ ಡ್ರೋನ್ ಮೂಲಕ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ತಂತ್ರಗಳು, ತುಕಾಲಿ ಸಂತೋಷ್- ವರ್ತೂರು ಸಂತೋಷ್ ಅವರ ಗಾಸಿಪ್ ಒಳಗೊಂಡ ಕಾಮಿಡಿ, ಮಧ್ಯಭಾಗದಲ್ಲಿ ಹಳ್ಳಿ ಹೈದ ವರ್ತೂರ್ ಸಂತೋಷ್ ಬಂಧನ ಮತ್ತು ಮನೆಗೆ ಮರು ಪ್ರವೇಶ, ವರ್ತೂರು–ತನಿಶಾ ಕುಪ್ಪಂಡ ಸ್ನೇಹ ಹೀಗೆ ಹತ್ತು ಹಲವು ಸಂಗತಿಗಳು ಗಮನ ಸೆಳೆದಿದ್ದವು.
100 ದಿನಗಳ ಶೋ 112 ದಿನಗಳ ಕಾಲ ನಡೆದಿತ್ತು.
ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಸದ್ದು ಮಾಡಿರುವ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲು ತಂಡ ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.