ಬೆಂಗಳೂರು: ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ ಭರ್ಜರಿಯಾಗೇ ಆರಂಭವಾಗಿದೆ. ಮೊದಲ ವಾರ ನಾಮಿನೇಶನ್ ಆದರೂ ಎಲಿಮಿನೆಶನ್ ಆಗಿಲ್ಲ. ಆದರೆ, ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ತಮ್ಮ ರೌದ್ರವತಾರ ಪ್ರದರ್ಶಿಸುವ ಮೂಲಕ ಮನೆಯ ಸದಸ್ಯರು ಬೆಚ್ಚಿಬೀಳುವಂತೆ ಮಾಡಿದ್ದಾರೆ.
ಹೌದು, ವೈಲ್ಡ್ ಕಾರ್ಡ್ ಎಂಟ್ರಿ ದಿನವೇ ಮನೆಯವರಿಗೆ ಕಸಿವಿಸಿ ಉಂಟುಮಾಡಿದ್ದ ಚಕ್ರವರ್ತಿ ಚಂದ್ರಚೂಡ್ ಬಳಿಕ ಸ್ವಲ್ಪ ತಣ್ಣಗಾಗಿದ್ದರು. ಆದರೆ, ಬಿಗ್ ಬಾಸ್ ಇನಿಂಗ್ಸ್ ಎರಡರ ಮೊದಲ ವೀಕೆಂಡ್‌ನಲ್ಲಿ ಅವರು ರೊಚ್ಚಿಗೇಳುವ ಮೂಲಕ ಗಾಬರಿ ಹುಟ್ಟಿಸಿದರು.
ಆಗಿದ್ದಿಷ್ಟು.. ಕೊರೊನಾದಿಂದಾಗಿ ಬಿಗ್ ಬಾಸ್ ಸ್ಥಗಿತಗೊಂಡಾಗ 43 ದಿನ ಮನೆಯಲ್ಲಿದ್ದ ಸದಸ್ಯರಿಗೆ ಅವರ ಮನೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ತಿಳಿಸಲು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮಂಜು, ಚಕ್ರವರ್ತಿ ಮತ್ತು ಪ್ರಶಾಂತ್ ಜೊತೆ ಸೇರಬೇಡ ಎಂದು ಮನೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ ಬುಸುಗುಡುತ್ತಾ ಹಾಗಯೇ ಕುಳಿತಿದ್ದರು. ಇದನ್ನು ಗಮನಿಸಿದ ಸುದೀಪ್ ಹೇಳುವುದೇನಾದರು ಇದ್ದರೆ ಹೇಳಬಹುದು ಎಂದು ಅವಕಾಶ ನೀಡಿದರು. ಕೂಡಲೇ ರೊಚ್ಚಿಗೆದ್ದ ಚಂದ್ರಚೂಡ್ ಅವರು, ಮಂಜು ಒಬ್ಬ ಹೆಣ್ಣುಮಗಳನ್ನು ಮಲಗು ಬಾ, ನುಗ್ಗೆಕಾಯಿ, ಮಾವಿನಕಾಯಿ ಎಂದೆಲ್ಲ ಮಾತನಾಡುತ್ತಾನೆ. ಪತ್ರವಳ್ಳಿ ಎಂಬ ಪದ ಬಳಸುತ್ತಾನೆ. ಹಾಗೆಂದರೆ, ಅರ್ಥವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿದರು. ಕಿರುಚಾಡಿ ಮನೆಯ ಸದಸ್ಯರನ್ನು ನಿಬ್ಬೆರಗಾಗಿಸಿದರು. ನನ್ನನ್ನು ಇನ್ನುಮುಂದೆ ಅಣ್ಣ ಎಂದು ಕರೆಯಬಾರದು ಎಂದರು. ಸ್ವತಃ ಸುದೀಪ್ ಸಹ ಒಂದು ಕ್ಷಣ ದಂಗಾದಂತೆ ಕಂಡು ಬಂದಿತು.
ನೀನು ಹೇಗೆ ಬಂದೆ ಎಂಬುದು ಗೊತ್ತಿದೆ: ಚಂದ್ರಚೂಡ್ ಆರೋಪಕ್ಕೆ ಉತ್ತರಿಸಿದ ಮಂಜು, ಅದು ತಮಾಷೆ ಎಂದು ಎಲ್ಲರಿಗೂ ತಿಳಿದಿದೆ. ಆಗ ಚೆನ್ನಾಗಿ ನಕ್ಕು ಈಗ ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಆಗಲೇ ಹೇಳಬಹುದಿತ್ತಲ್ಲ ಎಂದು ಮರುಪ್ರಶ್ನೆ ಹಾಕಿದ್ದಾರೆ. ಹೆಣ್ಣು ಮಕ್ಕಳು ಅಂತಾ ಹೇಳ್ತೀಯಲ್ಲ, ನೀನು ಇಲ್ಲಿಗೆ ಹೇಗೆ ಬಂದೆ ಎಂಬುದು ಗೊತ್ತಿದೆ ಎಂದು ಹೇಳುವ ಮೂಲಕ ಚಂದ್ರಚೂಡ್ ಅವರ ವೈಯಕ್ತಿಕ ಜೀವನವನ್ನು ಕೆದಕಿ ಮಂಜು ಮತ್ತೆ ಪೇಚಿಗೆ ಸಿಲುಕಿದರು. ನಾನು ಹೇಗೆ ಬಂದಿರುವೆ ಹೇಳು ಎಂದು ಚಂದ್ರಚೂಡ್, ಮಂಜು ವಿರುದ್ಧ ಮತ್ತೆ ಸೆಟೆದು ನಿಂತರು. ಇದಕ್ಕೆ ಮಂಜು ಬಳಿ ಉತ್ತರವೇ ಇರಲಿಲ್ಲ. ಇದಕ್ಕೆ ಉತ್ತರಿಸಿದ ಸುದೀಪ್, ನೀವು ಏನಾದರು ಹೇಳಿದರೆ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ತಿಳಿ ಹೇಳಿದರು.
ನನಗೆ ಎರಡು ವಿಚ್ಛೇದನ ಆಗಿದೆ: ಮಂಜು ಮಾತಿಗೆ ಮತ್ತೆ ಎಗರಾಡಿದ ಚಂದ್ರಚೂಡ್ ನನಗೆ ಎರಡು ವಿಚ್ಛೇದನ ಆಗಿದೆ. ಭಾರತೀಯ ಸಂವಿಧಾನದ ಮೂಲಕ ವಿಚ್ಛೇದನ ಪಡೆದಿದ್ದೇನೆ. ಮಂಜು ಸಂವಿಧಾನಕ್ಕಿಂತ ದೊಡ್ಡವನಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾನೆ ಎಂದು ಕಿರುಚಾಡಿದರು.
ವೀಕೆಂಡ್ ಎಪಿಸೋಡ್ ಜಗಳ ಗದ್ದಲಕ್ಕೆ ಸಿಲುಕಿ ಹಾದಿ ತಪ್ಪುತ್ತಿದ್ದನ್ನು ಗಮನಿಸಿದ ಸುದೀಪ್ ಅಲ್ಲಿಗೆ ಬ್ರೇಕ್ ಹಾಕಿದರು. ಮಂಜು ಮೇಲೆ ಹರಿಹಾಯಲು ಮುಂದಾದ ಪ್ರಶಾಂತ್ ಸಂಬರಗಿ ಮಾತಿಗೆ ಫುಲ್ ಸ್ಟಾಪ್ ಇಟ್ಟ ಕಿಚ್ಚ, ಒಬ್ಬರ ಮೇಲೆ ಈ ರೀತಿ ದಾಳಿ ನಡೆಸುವುದಕ್ಕೆ ನಾನು ಬಿಡುವುದಿಲ್ಲ. ಸೌಹಾರ್ದತೆ ಕಾಯ್ದುಕೊಳ್ಳುವಂತೆ ಬುದ್ದಿ ಹೇಳಿ ಬ್ರೇಕ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.