ADVERTISEMENT

Bigg Boss 8: ರಾಜೀವ್‌ಗೆ ಸಿಕ್ಕಿದೆ ನಾಮಿನೇಶನ್‌ನಿಂದ ಪಾರಾಗುವ ಗೋಲ್ಡನ್ ಪಾಸ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 6:35 IST
Last Updated 18 ಏಪ್ರಿಲ್ 2021, 6:35 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್: ರಾಜೀವ್ (ಬಲಭಾಗದಲ್ಲಿ)
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್: ರಾಜೀವ್ (ಬಲಭಾಗದಲ್ಲಿ)   

ಬೆಂಗಳೂರು: ಬಿಗ್ ಬಾಸ್ ಮನೆಯ 7ನೇ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಸದಸ್ಯರಿಗೆ ಗೋಲ್ಡನ್ ಪಾಸ್ ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು. ಟಾಸ್ಕ್‌ನಲ್ಲಿ ತಂತ್ರ–ಪ್ರತಿತಂತ್ರಗಳನ್ನು ಯಶಸ್ವಿಯಾಗಿ ಬಳಸಿದ ರಾಜೀವ್ ಪಾಸ್ ಪಡೆದುಕೊಂಡರು.

ಅಂತಿಂಥದ್ದಲ್ಲ ಈ ಗೋಲ್ಡನ್ ಪಾಸ್: ಬಿಗ್ ಬಾಸ್ ಹೇಳಿದ ಹಾಗೆ, ಎಲಿಮಿನೇಶನ್‌ಗೆ ನಾಮಿನೇಟ್ ಆದ ಸಂದರ್ಭ ಸದಸ್ಯ ಈ ಗೋಲ್ಡನ್ ಪಾಸ್ ಬಳಸಿ ತನ್ನನ್ನು ತಾನು ಸೇಫ್ ಮಾಡಿಕೊಳ್ಳಬಹುದು. ಒಮ್ಮೆ ಮಾತ್ರ ಪಾಸ್ ಬಳಸಲು ಅವಕಾಶವಿರುತ್ತದೆ. ಹೀಗಾಗಿ, ಮನೆಯಿಂದ ಹೊರಹೋಗುವ ಸಂದರ್ಭ ಬಂದಾಗ ಈ ಪಾಸ್ ಹೊಂದಿರುವ ವ್ಯಕ್ತಿ ಅದನ್ನು ಬಳಸಿ ಸೇಫ್ ಆಗಬಹುದು. ಇದರ ಮತ್ತೊಂದು ಚಮತ್ಕಾರಿ ಗುಣವೆಂದರೆ, ಪಾಸ್ ಗೆದ್ದಿರುವ ವ್ಯಕ್ತಿ ಮರೆತು ಅದನ್ನು ಎಲ್ಲಿಯಾದರೂ ಇಟ್ಟಿದ್ದರೆ. ಬೇರೆಯವರು ಅದನ್ನು ಕದ್ದು ತಾವು ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ, ಗೋಲ್ಡನ್ ಪಾಸ್ ಹೊಂದಿರುವ ರಾಜೀವ್ ಮೇಲೆ ಇಡೀ ಮನೆಯ ಸದಸ್ಯರ ಕಣ್ಣು ಬಿದ್ದಿದೆ.

ಗೋಲ್ಡನ್ ಟಾಸ್ಕ್ ವೇಳೆ ಗದ್ದಲ, ಕೋಲಾಹಲ: ಗೋಲ್ಡನ್ ಪಾಸ್ ಗೆಲ್ಲಲು ಸದಸ್ಯರಿಗೆ ಬಿಗ್ ಬಾಸ್ ಬೇರೆಯವರ ಲಗೇಜ್ ಹಿಡಿದು ಬಸ್ ಹತ್ತುವ ಟಾಸ್ಕ್ ನೀಡಿದ್ದರು. ಲಿವಿಂಗ್ ಏರಿಯಾದಲ್ಲಿ ಬಸ್ ನಿಲ್ಲಿಸಲಾಗಿದ್ದು, ಹಾಲ್‌ನಲ್ಲಿ ಎಲ್ಲಾ ಸದಸ್ಯರ ಲಗೇಜ್ ಬ್ಯಾಗ್‌ಗಳನ್ನು ಜೋಡಿಸಲಾಗಿತ್ತು. ಬಸ್ ಹಾರ್ನ್ ಆದ ಕೂಡಲೇ ಮನೆಯ ಸದಸ್ಯರು ತಮ್ಮ ಲಗೇಜ್ ಬಿಟ್ಟು ಬೇರೊಬ್ಬರ ಲಗೇಜ್ ಎತ್ತಿಕೊಂಡು ಬಸ್ ಹತ್ತಬೇಕು. ಕೊನೆಯಲ್ಲಿ ಬಸ್ ಹತ್ತುವ ಸದಸ್ಯನ ಕೈಯಲ್ಲಿರುವ ಬ್ಯಾಗ್ ಮೇಲಿರುವ ಚಿತ್ರದಲ್ಲಿರುವ ವ್ಯಕ್ತಿ ಟಾಸ್ಕ್‌ನಿಂದ ಹೊರಬೀಳುತ್ತಾರೆ ಎಂಬ ನಿಯಮವಿತ್ತು. ಮ್ಯೂಸಿಕಲ್ ಚೇರ್ ಮಾದರಿಯ ಈ ಆಟದಲ್ಲಿ ಪ್ರಶಾಂತ್ ಸಂಬರಗಿಯಿಂದ ಹಿಡಿದು ಅರವಿಂದ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಸೇರಿ ಹಲವು ಸದಸ್ಯರು ಹೊರಹೋದರು.

ADVERTISEMENT

ಟಾಸ್ಕ್‌ನಲ್ಲಿ ಪ್ರಿಯಾಂಕಾ 3 ಬಾರಿ ತನ್ನದೇ ಬ್ಯಾಗ್ ಜೊತೆ ಉಳಿದಿದ್ದರಿಂದ ಫೌಲ್ ಎಂದು ಮತ್ತೊಮ್ಮೆ ಆಡಿಸಲಾಯಿತು. ಬಳಿಕ, ಬಿಗ್ ಬಾಸ್ ನಾನು ಇನ್ಮುಂದೆ ಫೌಲ್ ಘೋಷಣೆ ಮಾಡುವುದಿಲ್ಲ. ನೀವೇ ಚರ್ಚಿಸಿ ನಿರ್ಧಾರ ಮಾಡಬೇಕು. ಫೌಲ್ ಆದಾಗ ಮತ್ತೆ ಅದೇ ಸುತ್ತು ಆಡಬೇಕು ಎಂದರು.

ಕೊನೆಯಲ್ಲಿ ಶಮಂತ್, ರಾಜೀವ್, ವಿಶ್ವನಾಥ್ ಮತ್ತು ಶುಭಾ ಪೂಂಜಾ ಉಳಿದಿದ್ದರು. ಈ ಸಂದರ್ಭ, ನಡೆದ ಬಸ್ ಹತ್ತುವ ಟಾಸ್ಕ್ ವೇಳೆ ಶಮಂತ್ ತಮ್ಮ ಬ್ಯಾಗ್ ಜೊತೆ ಉಳಿದಿದ್ದರಿಂದ ಫೌಲ್ ಆಗಿತ್ತು. ಆದರೆ, ಮತ್ತೊಮ್ಮೆ ಆಡಲು ರಾಜೀವ್ ನಿರಾಕರಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ಮನೆಯ ಬಹುತೇಕ ಸದಸ್ಯರು ಹೇಳಿದರೂ ರಾಜೀವ್, ಶಮಂತ್‌ಗೆ ಮತ್ತೊಮ್ಮೆ ಅವಕಾಶ ನೀಡಲು ಒಪ್ಪಲಿಲ್ಲ. ಬಳಿಕ, ವಿಶ್ವನಾಥ್ ಮತ್ತು ಶಮಂತ್ ಮಾತ್ರ ಆಟ ಆಡಿದರು. ಕೊನೆಯವರಾಗಿ ಬಸ್ ಹತ್ತಿದ ವಿಶ್ವನಾಥ್ ಕೈಯಲ್ಲಿದ್ದ ಬ್ಯಾಗ್‌ ಮೇಲೆ ಶಮಂತ್ ಫೊಟೊ ಇದ್ದಿದ್ದರಿಂದ ಅವರು ಆಟದಿಂದ ಹೊರಹೋದರು. ಅಂತಿಮ ಸುತ್ತಿನವರೆಗೂ ಓಡದೇ ನಿಧಾನಗತಿಯ ತಂತ್ರ ಅನುಸರಿಸಿದ ರಾಜೀವ್, ಗೋಲ್ಡನ್ ಪಾಸ್ ಗೆದ್ದು ಬೀಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.