ADVERTISEMENT

Bigg Boss 8:ಇಂದು ಆಗುತ್ತಾ ಎಲಿಮಿನೇಶನ್? ಸುದೀಪ್ ಇಲ್ಲದೆ ಶನಿವಾರ ನಡೆದಿದ್ದೇನು?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 9:02 IST
Last Updated 18 ಏಪ್ರಿಲ್ 2021, 9:02 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್ 
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್    

ಬೆಂಗಳೂರು: ಸುದೀಪ್‌ಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ 7ನೇ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಶನಿವಾರ ಎಲಿಮಿನೇಶನ್ ಬಗ್ಗೆ ಪ್ರಸ್ತಾಪ ಆಗಿಲ್ಲ. ಎಂದಿನಂತೆ ಮನೆಯಲ್ಲಿ ನಡೆದ ಟಾಸ್ಕ್‌ಗಳ ಕಾರ್ಯಕ್ರಮವೇ ಪ್ರಸಾರವಾಗಿದೆ.

ಅನಾರೋಗ್ಯದ ಕಾರಣದಿಂದಾಗಿ, ಇದೇ ಮೊದಲ ಬಾರಿಗೆ ಬಿಗ್‌ಬಾಸ್‌ ರಿಯಾಲಿಟಿ ಶೋನ ವಾರಾಂತ್ಯದ ಸಂಚಿಕೆಗಳಿಗೆ ನಟ ಸುದೀಪ್ ಗೈರಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಈ ವಾರದ ಎಲಿಮಿನೇಶನ್ ಹೇಗೆ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂಮೂಡಿತ್ತು. ಆದರೆ, ಶನಿವಾರದ ಎಪಿಸೋಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಭಾನುವಾರ ಆಗುತ್ತಾ ಎಲಿಮಿನೇಶನ್?: ಕಿಚ್ಚ ಸುದೀಪ್‌ ಅವರು ಇಲ್ಲದೆಯೇ ವಾರಾಂತ್ಯದ ಎಪಿಸೋಡ್‌ಗಳನ್ನು ಚಿತ್ರೀಕರಿಸುವುದು ಸವಾಲು. ಈ ವಾರ ಎರಡೂ ಸಂಚಿಕೆಗಳು ಎಂದಿನಂತೆ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗಲಿವೆ. ಅತಿ ಕಡಿಮೆ ವೋಟ್‌ ಗಳಿಸಿದ ಒಬ್ಬ ಸ್ಪರ್ಧಿ ಮನೆಯಿಂದ ಹೊರಬೀಳುವುದು ಖಚಿತ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿದ್ದರು. ಹೀಗಾಗಿ, ಭಾನುವಾರ ಏನಾಗಲಿದೆ? ಎಂಬ ಕುತೂಹಲ ಮನೆ ಮಾಡಿದೆ.

ADVERTISEMENT

ದೊಡ್ಡದಿದೆ ನಾಮಿನೇಶನ್ ಪಟ್ಟಿ: 7ನೇ ವಾರದ ಎಲಿಮಿನೇಶನ್‌ಗೆ 8 ಮಂದಿ ನಾಮಿನೇಟ್ ಆಗಿದ್ದಾರೆ. ಅರವಿಂದ್, ಮಂಜು ಪಾವಗಡ, ರಾಜೀವ್, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್ ಮತ್ತು ಶಮಂತ್ ಈ ಪಟ್ಟಿಯಲ್ಲಿದ್ದಾರೆ.

ನಾಮಿನೇಟ್ ಆಗಿರುವ ಬಹುತೇಕ ಸದಸ್ಯರು ಮನೆಯ ಅತ್ಯುತ್ತಮ ಸ್ಪರ್ಧಿಗಳು. ಅರವಿಂದ್, ಮಂಜು ಪಾವಗಡ, ರಾಜೀವ್, ದಿವ್ಯಾ ಸುರೇಶ್ ಮನೆಯ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆ ಅವರು, ಅವರಿಗೆ ನಾವು ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ಪರಸ್ಪರ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ, ಇವರೆಲ್ಲರೂ ಈ ಬಾರಿ ವೀಕ್ಷಕರ ಮತಗಳ ಮೂಲಕ ಪರೀಕ್ಷೆ ಗೆದ್ದು ಮನೆಯಲ್ಲಿ ಮುಂದುವರಿಯಬೇಕಿದೆ.

ಇನ್ನು, 6ನೇ ವಾರ ಅಷ್ಟಾಗಿ ಆಕ್ಟಿವ್ ಆಗಿರದ ಸಿಂಗರ್ ವಿಶ್ವನಾಥ್ ಅವರ ಹೆಸರನ್ನು ಮನೆಯ ಹಲವು ಸದಸ್ಯರು ಸೂಚಿಸಿದರು. ನಾಯಕನ ಅಧಿಕಾರ ಬಳಸಿದ ಪ್ರಶಾಂತ್ ಸಂಬರಗಿ, ಈ ವಾರ ಮನೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಕಾರಣ ನೀಡಿ ದಿವ್ಯಾ ಉರುಡುಗ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಇತ್ತ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಿದ್ದ ಚಕ್ರವರ್ತಿ ಚಂದ್ರಚೂಡ್ ನಿರೀಕ್ಷೆಯಂತೆ ಎಲಿಮಿನೇಶನ್ ಅಗ್ನಿಪರೀಕ್ಷೆಗೆ ನಾಮಿನೇಟ್ ಆಗಿದ್ದಾರೆ. ಒಡೆದು ಆಳುವ ನೀತಿ, ನಗುತ್ತಲೆ ಬೇರೆಯವರ ಮನಸು ನೋಯಿಸುವ ಅವರ ವರ್ತನೆ ಬಗ್ಗೆ ಆಕ್ಷೇಪ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.