ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್‌ಬಾಸ್’ 9ನೇ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ. ಇದಕ್ಕೆ ಪೂರಕವೆಂಬಂತೆ ನಟ ಸುದೀಪ್ 9ನೇ ಆವೃತ್ತಿಯ ಪ್ರೊಮೊದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುದೀಪ್, ‘ಬಿಗ್‌ಬಾಸ್ ಹೊಸ ಆವೃತ್ತಿಯ ಪ್ರೊಮೊ ಶೂಟಿಂಗ್ ಎಕ್ಸೈಟಿಂಗ್ ಆಗಿತ್ತು. ಪ್ರೊಮೊಗಾಗಿ ಕಾಯುತ್ತಿರಿ’ ಎಂದಿದ್ದಾರೆ. ಜುಲೈ 28ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರಚಾರ ಕಾರ್ಯದ ನಡುವೆಯೇ ಬಿಗ್‌ಬಾಸ್ ಶೂಟಿಂಗ್‌ನಲ್ಲೂಸುದೀಪ್‌ಪಾಲ್ಗೊಂಡಿದ್ದಾರೆ. 8ನೇ ಆವೃತ್ತಿಯ ಪ್ರೊಮೊದಲ್ಲಿ ಜ್ಯೋತಿಷಿಯಾಗಿ ಕಾಣಿಸಿಕೊಂಡಿದ್ದ ಸುದೀಪ್ ಈ ವರ್ಷ ಯಾವ ಅವತಾರವೆತ್ತಲಿದ್ದಾರೆ ಎನ್ನುವ ಪ್ರಶ್ನೆ ಪ್ರೇಕ್ಷಕರದ್ದು. ಈಗಾಗಲೇ ಬಿಗ್‌ಬಾಸ್ ಮನೆಯ ನಿರ್ಮಾಣ ಕಾರ್ಯ ಆರಂಭವಾಗಿದೆ. ‘ಅಂಡರ್ ಕನ್‌ಸ್ಟ್ರಕ್ಷನ್’ ಎನ್ನುವ ಅಡಿಬರಹ ನೀಡಿ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಫೊಟೊ ಒಂದನ್ನು ಪೋಸ್ಟ್ ಮಾಡಿದ್ದರು.
2020ರಲ್ಲಿ ಕೋವಿಡ್ ಕಾರಣದಿಂದಾಗಿ 2020ರಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ನಡೆದಿರಲಿಲ್ಲ. ಹೀಗಾಗಿ2021ರಲ್ಲೇ 8 ಹಾಗೂ 9ನೇ ಆವೃತ್ತಿಯನ್ನು ನಡೆಸಲು ಕಲರ್ಸ್ ಕನ್ನಡ ಮೊದಲು ಚಿಂತನೆ ನಡೆಸಿತ್ತು. ಕೋವಿಡ್ ಪಿಡುಗಿನ ನಡುವೆ ವಿಳಂಬವಾದರೂ 2021ರ ಫೆ.28ರಂದು 8ನೇ ಆವೃತ್ತಿಯು ಭರ್ಜರಿಯಾಗಿ ಸೆಟ್ಟೇರಿತ್ತು.
ಸೆಲೆಬ್ರಿಟಿ ಆವೃತ್ತಿಯಾಗಿದ್ದ 8ನೇ ಆವೃತ್ತಿಯಲ್ಲಿ ಹಿರಿಯ ನಟ ಶಂಕರ್ ಅಶ್ವತ್ಥ್, ನಟಿಯರಾದ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಗೀತಾ ಭಾರತಿ ಭಟ್, ಮಜಾಭಾರತ ಖ್ಯಾತಿಯ ಮಂಜು ಪಾವಗಡ ಹೀಗೆ 17 ಖ್ಯಾತನಾಮ ಸ್ಪರ್ಧಿಗಳೇ ಇದ್ದರು. 2021ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ, ಮೇ 8ರಂದು ಶೋ ಸ್ಥಗಿತಗೊಳಿಸುವ ನಿರ್ಧಾರವನ್ನು ಕಲರ್ಸ್ ಕನ್ನಡ ತೆಗೆದುಕೊಂಡಿತ್ತು. ಬಿಗ್‌ಬಾಸ್ ಕನ್ನಡ ಆವೃತ್ತಿಯ ಇತಿಹಾಸದಲ್ಲೇ ಈ ರೀತಿ ಶೋ ಅರ್ಧಕ್ಕೇ ನಿಂತಿರುವ ಘಟನೆ ಇದೇ ಮೊದಲಾಗಿತ್ತು. ಬಿಗ್‌ಬಾಸ್ 8ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್ ಜೂ.23ಕ್ಕೆ ಪುನರಾರಂಭಗೊಂಡಿತ್ತು. ಈ ಸಂದರ್ಭದಲ್ಲಿ ವೈಷ್ಣವಿ, ಅರವಿಂದ್, ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಶಮಂತ್, ರಘು ಗೌಡ, ಮಂಜು ಪಾವಗಡ, ಶುಭಾ ಪೂಂಜ, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ ಮತ್ತು ಪ್ರಿಯಾಂಕ ತಿಮ್ಮೇಶ್ ಮನೆಯೊಳಗೆ ಮತ್ತೆ ಪ್ರವೇಶ ಮಾಡಿದ್ದರು. ಮಂಜು ಪಾವಗಡ 8ನೇ ಆವೃತ್ತಿಯ ವಿಜೇತರಾಗಿದ್ದರು. ಅರವಿಂದ್ ರನ್ನರ್ ಅಪ್ ಆಗಿದ್ದರು.
9ನೇ ಆವೃತ್ತಿಯಲ್ಲಿ ಜನಸಾಮಾನ್ಯರಿರುತ್ತಾರೆಯೇ ಅಥವಾ ಸೆಲೆಬ್ರಿಟಿಗಳಷ್ಟೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ‘ವಿಕ್ರಾಂತ್ ರೋಣ’ ರಿಲೀಸ್ ಆದ ಬಳಿಕ, ಎಂದರೆ ಆಗಸ್ಟ್ ಮೊದಲ ಅಥವಾ ಎರಡನೇ ವಾರದಿಂದ ಹೊಸ ಆವೃತ್ತಿ ಆರಂಭವಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.