ADVERTISEMENT

Bigg Boss 8: ಶುಭಾ ಪೂಂಜಾ ಹೊರಹೋಗಿದ್ದಾಯ್ತು. ಈ ವಾರ ಮತ್ತಿಬ್ಬರು ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2021, 17:06 IST
Last Updated 1 ಆಗಸ್ಟ್ 2021, 17:06 IST
ಶುಭಾ ಪೂಂಜಾ (ಚಿತ್ರ ಕೃಪೆ: ಕಲರ್ಸ್ ಕನ್ನಡ ವಿಡಿಯೋ ಸ್ಕ್ರೀನ್ ಗ್ರ್ಯಾಬ್)
ಶುಭಾ ಪೂಂಜಾ (ಚಿತ್ರ ಕೃಪೆ: ಕಲರ್ಸ್ ಕನ್ನಡ ವಿಡಿಯೋ ಸ್ಕ್ರೀನ್ ಗ್ರ್ಯಾಬ್)   

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ರೋಚಕ ಘಟ್ಟ ತಲುಪಿದೆ. ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದ್ದು, ಶನಿವಾರದ ಎಲಿಮಿನೇಶನ್‌ನಲ್ಲಿ ನಟಿ ಶುಭಾ ಪೂಂಜಾ ಹೊರಬಿದ್ದಿದ್ದಾರೆ.

ಹೌದು, ಮನೆಯಲ್ಲಿ ಟಾಸ್ಕ್‌ಗಳ ಮೂಲಕ ಅಷ್ಟಾಗಿ ಗಮನ ಸೆಳೆಯದ ಶುಭಾ, ಮನರಂಜನಾ ಕಾರಣದಿಂದ 113 ದಿನ ಮನೆಯಲ್ಲಿ ಕಳೆದಿದ್ದಾರೆ. ಆದರೆ, ಈ ವಾರ ವೀಕ್ಷಕರ ತೀರ್ಪು ಬೇರೆಯಾಗಿತ್ತು.

ಕಣ್ಣೀರು ಹಾಕಿದ ಮಂಜು: ಮನೆಯಿಂದ ಹಲವು ಸದಸ್ಯರು ಹೊರಹೋಗಿದ್ದಾರೆ. ಎಂದೂ ಕಣ್ಣೀರು ಹಾಕದ ಮಂಜು ಪಾವಗಡ ಅವರು ಶುಭಾ ಪೂಂಜಾ ಎಲಿಮಿನೇಟ್ ಆದ ವೇಳೆ ಕಣ್ಣೀರು ಹಾಕಿದರು. ಶುಭಾ ಸಮಾಧಾನ ಮಾಡಿದರೂ ಮಂಜು ಅವರ ನೋವು ಕಡಿಮೆ ಆಗಲಿಲ್ಲ. ಮನೆಯಲ್ಲಿ ತನ್ನ ಜೊತೆ ಆಪ್ತವಾಗಿದ್ದ ಶುಭಾ ಹೊರಹೋಗಿದ್ದು, ಲ್ಯಾಗ್ ಮಂಜುಗೆ ಅತೀವ ನೋವು ತಂದಿತ್ತು. ಮಂಜು–ಶುಭಾ ಪೂಂಜಾ ಅವರ ಕಾಮಿಡಿ ತುಣುಕುಗಳು ಮನೆಯಲ್ಲಿ ಹೈಲೆಟ್ ಆಗಿದ್ದವು.

ADVERTISEMENT

ಈ ವಾರ ಮತ್ತಿಬ್ಬರು ಹೊರಕ್ಕೆ: ಮುಂದಿನ ವಾರ ಫಿನಾಲೆ ವಾರವಾಗಿದ್ದು, ಅಂತಿಮ ದಿನಕ್ಕೆ ಐವರು ಮಾತ್ರ ಇರಲಿದ್ದಾರೆ. ಹೀಗಾಗಿ, ಮನೆಯಲ್ಲಿದ್ದ 8 ಸದಸ್ಯರ ಪೈಕಿ ಒಬ್ಬರನ್ನು ಶನಿವಾರವೇ ಎಲಿಮಿನೇಟ್ ಮಾಡಲಾಗಿದ್ದು, ಭಾನುವಾರ ಮತ್ತೊಬ್ಬರು ಹಾಗೂ ಈ ವಾರದ ಮಧ್ಯಭಾಗದಲ್ಲಿ ಮಗದೊಬ್ಬರು ಮನೆಯಿಂದ ಹೊರಹೋಗುತ್ತಾರೆ ಎಂದು ನಿರೂಪಕ ಸುದೀಪ್ ಹೇಳಿದ್ದಾರೆ. ಹಾಗಾಗಿ, ಇಮ್ಯುನಿಟಿ ಪಡೆದಿರುವ ದಿವ್ಯಾ ಉರುಡುಗ ಅವರನ್ನು ಬಿಟ್ಟು ಮಂಜು ಪಾವಗಡ, ಅರವಿಂದ್, ಶಮಂತ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಮತ್ತು ವೈಷ್ಣವಿ ಪೈಕಿ ಮನೆಯಿಂದ ಹೊರ ಹೋಗುವ ಇನ್ನಿಬ್ಬರು ಸದಸ್ಯರು ಯಾರು? ಎಂಬ ಕುತೂಹಲ ಮನೆ ಮಾಡಿದೆ.

ಭವಿಷ್ಯ ನುಡಿದ ಚಂದ್ರಚೂಡ್: ಕಳೆದ ವಾರದ ಮಧ್ಯಭಾಗದಲ್ಲಿ ಸದ್ದಿಲ್ಲದೆ ಹೊರಹೋಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರನ್ನು ಶನಿವಾರ ವೇದಿಕೆಗೆ ಕರೆದು ಮಾತನಾಡಿಸಲಾಯ್ತು. ಈ ವೇಳೆ ಪ್ರತಿಯೊಬ್ಬ ಸ್ಪರ್ಧಿಯನ್ನು ಒಂದೊಂದು ಕಾಡು ಪ್ರಾಣಿಗೆ ಹೋಲಿಸಿ ಸುದೀಪ್‌ಗೆ ವಿವರಣೆ ಕೊಟ್ಟರು. ಬಳಿಕ, ಫಿನಾಲೆಯಲ್ಲಿ ಮಂಜು ಪಾವಗಡ, ಅರವಿಂದ್, ದಿವ್ಯಾ ಸುರೇಶ್, ವೈಷ್ಣವಿ ಮತ್ತು ದಿವ್ಯಾ ಉರುಡುಗ ಇರಲಿದ್ದಾರೆ ಎಂದು ಭವಿಷ್ಯ ನುಡಿದರು. ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಅರವಿಂದ್ ಮತ್ತು ಮಂಜು ಪಾವಗಡ ನಡುವೆ ಪೈಪೋಟಿ ಇದೆ. ಮೊದಲ ಮತ್ತು ಎರಡನೇ ಇನಿಂಗ್ಸ್ ನೋಡಿದರೆ ಮಂಜು ಗೆದ್ದುಬಿಡಬಹುದು ಎಂದು ಹೇಳಿದರು. ಪ್ರಿಯಾಂಕಾ ತಿಮ್ಮೇಶ್ ವಿಚಾರದಲ್ಲಿ ನಡೆದುಕೊಂಡ ರೀತಿ ಬಗ್ಗೆ ಮತ್ತೆ ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.