ಬೆಂಗಳೂರು: ಬಿಗ್ ಬಾಸ್ ಕನ್ನಡ 11 ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಸಂಜೆ 6ರಿಂದ ಕಲರ್ಸ್ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್, ಲಾಯರ್ ಜಗದೀಶ್, ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಮೂಲದ ಗೋಲ್ಡ್ ಸುರೇಶ್ ಅವರ ಹೆಸರನ್ನು ರಾಜ–ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿದೆ.
ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವುದು ಕಾರ್ಯಕ್ರಮ ಆರಂಭವಾದ ಬಳಿಕ ತಿಳಿದುಬರಬೇಕಿದೆ. ಈ ಬಾರಿ ಬಿಗ್‌ಬಾಸ್ ಸ್ವರ್ಗ–ನರಕ ಎನ್ನುವ ಹೊಸ ಪರಿಕಲ್ಪನೆಯಲ್ಲಿ ಪ್ರೇಕ್ಷಕರ ಎದುರು ತೆರೆದುಕೊಳ್ಳುತ್ತಿದೆ.
ಗೌತಮಿ ಜಾಧವ್, ಚೈತ್ರಾ ಕುಂದಾಪುರ, ವಕೀಲ ಜಗದೀಶ್ ಈಗಾಗಲೇ ಹಲವರಿಗೆ ಪರಿಚಿತ ಮುಖ. ಆದರೆ, ಗೋಲ್ಡ್ ಸುರೇಶ್ ಅವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.
ಗೋಲ್ಡ್ ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು. ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆರಂಭದಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ, ಬಳಿಕ ‘ಇಸ್ವಾ’ ಎಂಬ ತಮ್ಮದೇಯಾದ ಒಂದು ಇವೆಂಟ್ ಕಂಪನಿ ಸ್ಥಾಪಿಸಿದ್ದಾರೆ.
ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವ ಫ್ಯಾಷನ್ ಹೊಂದಿರುವ ಇವರನ್ನು, ವರ್ತೂರ್ ಸಂತೋಷ್ ಅವರ ಡ್ಯೂಪ್ ಎನ್ನುತ್ತಿದ್ದಾರೆ ಹಲವರು.
ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವುದರಿಂದಲ ಸುರೇಶ್ ಅವರನ್ನು ಗೋಲ್ಡ್ ಸುರೇಶ್ ಎಂದೇ ಕರೆಯಲಾಗುತ್ತಿದೆ.
ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.