ಮುಂಬೈ: ಎಸಿಪಿ ಪ್ರಧ್ಯುಮ್ನ, ಇನ್‌ಸ್ಪೆಕ್ಟರ್ ಅಭಿಜಿತ್, ಇನ್‌ಸ್ಪೆಕ್ಟರ್ ದಯಾ, ಡಾ. ಸಾಳುಂಕೆ, ಇನ್‌ಸ್ಪೆಕ್ಟರ್ ಫ್ರೆಡ್ರಿಕ್ಸ್... 90ರ ದಶಕದ ಧಾರಾವಾಹಿ ವೀಕ್ಷಕರು ಈ ಹೆಸರುಗಳನ್ನು ಮರೆತಿರಲಾರರು. ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರೋಚಕ ಪತ್ತೆದಾರಿ ಕಥಾವಸ್ತುಗಳುಳ್ಳ ಸಿಐಡಿ ಈಗ ಹೊಸ ಅವತಾರದೊಂದಿಗೆ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
1998ರಲ್ಲಿ ಮೊದಲ ಬಾರಿಗೆ ಪ್ರಸಾರವಾಗಿದ್ದ ಸಿಐಡಿ ನಂತರ ಹಲವು ಕಂತುಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ 2018ರವರೆಗೂ ನಿರಂತರವಾಗಿ ಈ ಧಾರಾವಾಹಿ ಪ್ರಸಾರವಾಗುತ್ತಲೇ ಬಂದಿತು. ಇದೀಗ ಆರು ವರ್ಷಗಳ ಬಳಿಕ ಸಿಐಡಿ 2ನೇ ಆವೃತ್ತಿಯು ಅ. 26ರಿಂದ ಪ್ರಸಾರವಾಗಲಿದೆ. ಈ ವಿಷಯವನ್ನು ಸೋನಿ ಟಿವಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಸಿಐಡಿ ತಂಡದ ನಾಯಕ ಎಸಿಪಿ ಪ್ರದ್ಯುಮ್ನ ಪಾತ್ರದಲ್ಲಿ ಶಿವಾಜಿ ಸತಮ್ ಅವರು ಇಡೀ ಧಾರಾವಾಹಿಯ ಸೂತ್ರಧಾರ. ‘ದಯಾ, ದರ್ವಾಜಾ ತೋಡ್ ದೊ’ ಎಂಬ ಅವರ ಜನಪ್ರಿಯ ಸಂಭಾಷಣೆ ಇಂದಿಗೂ ಜನಮಾನಸದಲ್ಲಿದೆ. ಸಾಕಷ್ಟು ಸವಾಲಿನ ಪ್ರಕರಣಗಳನ್ನೇ ಕಥಾವಸ್ತುವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿಐಡಿ ತಂಡ, ಅದನ್ನು ಭೇದಿಸಲು ಹೂಡುವ ತಂತ್ರವೇ ಧಾರಾವಾಹಿಯ ಜೀವಾಳ.
ಇನ್‌ಸ್ಪೆಕ್ಟರ್ ಅಭಿಜಿತ್ ಪಾತ್ರದಲ್ಲಿ ಆದಿತ್ಯ ಶ್ರೀವಾತ್ಸವ ಅಭಿನಯಿಸಿದ್ದರು. ಅತ್ಯಂತ ಕುಶಲ ತನಿಖಾಧಿಕಾರಿಯಾದ ಇವರು ಶಾಂತ ಸ್ವಭಾವದ ಪಾತ್ರ. ಕೆಲವೊಮ್ಮೆ ಮರೆಗುಳಿ ಸಮಸ್ಯೆಯಿಂದ ಬಳಲುವ ಅಭಿಜಿತ್ ಈ ಧಾರಾವಾಹಿಯ ಭಾವನಾತ್ಮಕ ಪಾತ್ರ. ಶಿಸ್ತು ಮತ್ತು ವೃತ್ತಿಪರತೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸಿದ ಪಾತ್ರ.
ಇನ್‌ಸ್ಪೆಕ್ಟರ್ ದಯಾ ಪಾತ್ರದಲ್ಲಿ ದಯಾನಂದ ಶೆಟ್ಟಿ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಗಿಲು ಒಡೆಯುವ, ಕೃತ್ಯ ಎಸಗಿದವರನ್ನು ಹೆಡೆಮುರಿ ಕಟ್ಟುವ ಪಾತ್ರದಲ್ಲಿ ದಯಾ ಅವರದ್ದು ಅದ್ಭುತ ನಟನೆ. ದೈಹಿಕವಾಗಿ ಬಲಶಾಲಿಯಾದ ಇನ್‌ಸ್ಪೆಕ್ಟರ್ ದಯಾ, ಒಳಗೆ ಕರುಣಾಮಯಿ.
ಡಾ. ಸಾಳುಂಕೆ ಪಾತ್ರದಲ್ಲಿ ನರೇಂದ್ರ ಗುಪ್ತಾ ಅವರು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಾಗಿ ಜನಮನ ಗೆದ್ದಿದ್ದರು. ಧಾರಾವಾಹಿಯಲ್ಲಿ ಆಗಾಗ್ಗ ಎಸಿಪಿ ಪ್ರದ್ಯುಮ್ನ ಹಾಗೂ ಇವರ ನಡುವೆ ನಡೆಯುತ್ತಿದ್ದ ಸಣ್ಣ ಜಗಳ ಸಾಮಾನ್ಯ ನೋಡುಗರಿಗೆ ಕುತೂಹಲ ಮೂಡಿಸುತ್ತಿತ್ತು.
ಇನ್‌ಸ್ಪೆಕ್ಟರ್ ಫ್ರೆಡ್ರಿಕ್ ಪಾತ್ರದಲ್ಲಿ ನಟಿಸಿದ್ದ ದಿನೇಶ್ ಫಡ್ನಿಸ್ ಅವರು 2023ರಲ್ಲಿ ನಿಧನರಾದರು. ಸಿಐಡಿಯಂತ ಗಂಭೀರ ಸ್ವರೂಪದ ಧಾರಾವಾಹಿಯಲ್ಲಿ ಫ್ರೆಡ್ರಿಕ್ ಎಂಬ ಪಾತ್ರ ಹಾಸ್ಯದ ಮೂಲಕ ಕಚಗುಳಿ ಇಟ್ಟಿತ್ತು. 2ನೇ ಆವೃತ್ತಿಯಲ್ಲಿ ಅವರು ಇಲ್ಲ ಎಂಬ ಬೇಸರವನ್ನು ಕೆಲ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಪುನೀತ್ ಗಾಂಧಿ, ಕಾರ್ಯಪ್ಪ ಅಪ್ಪಯ್ಯ ಹಾಗೂ ಸಂತೋಷ್ ಶೆಟ್ಟಿ ಅವರನ್ನೊಳಗೊಂಡ ನಿರ್ದೇಶನ ತಂಡವು ಸಿಐಡಿ 2ನೇ ಆವೃತ್ತಿಯ ಅಂತಿಮ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿಐಡಿಯ 21 ವರ್ಷಗಳು ಎಂಬ ಪೇಜ್‌ನಲ್ಲಿ ಧಾರಾವಾಹಿಯ 2ನೇ ಆವೃತ್ತಿಯ ಚಿತ್ರಗಳನ್ನು ಈ ತಂಡ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.