ADVERTISEMENT

ಕೋವಿಡ್‌ ತೀವ್ರತೆಗೆ ಬಿಗ್‌ಬಾಸ್‌ ಅರ್ಧಕ್ಕೇ ರದ್ದು

​ಪ್ರಜಾವಾಣಿ ವಾರ್ತೆ
Published 8 ಮೇ 2021, 13:42 IST
Last Updated 8 ಮೇ 2021, 13:42 IST
ಬಿಗ್‌ ಬಾಸ್‌
ಬಿಗ್‌ ಬಾಸ್‌   

ಬೆಂಗಳೂರು: ಕೋವಿಡ್‌ ಎರಡನೇ ಅಲೆಯು ತೀವ್ರವಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಬಿಗ್‌ಬಾಸ್‌ ರಿಯಾಲಿಟಿ ಷೋವನ್ನು ಭಾನುವಾರದಿಂದ ಸ್ಥಗಿತಗೊಳಿಸಲು ಕಲರ್ಸ್‌ ಕನ್ನಡ ನಿರ್ಧರಿಸಿದೆ.

ಹೀಗಾಗಿ, ಸೋಮವಾರದಿಂದ ಬಿಗ್‌ಬಾಸ್‌ ಸಂಚಿಕೆ ಇರುವುದಿಲ್ಲ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್, ‘ಬಿಗ್ ಬಾಸ್ ಶುರುವಾಗಿ ಇವತ್ತಿಗೆ (ಮೇ 8) ಎಪ್ಪತ್ತೊಂದನೇ ದಿನ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೊಲೇಷನ್‌ನಲ್ಲಿ ಇರುವುದರಿಂದ ಅವರೆಲ್ಲರೂ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ’

‘ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ’ ಎಂದು ಪರಮೇಶ್ವರ ಗುಂಡ್ಕಲ್‌ ಉಲ್ಲೇಖಿಸಿದ್ದಾರೆ.

ADVERTISEMENT

ಈ ವರ್ಷ ಎರಡನೇ ಆವೃತ್ತಿ ಅನುಮಾನ: ಕೋವಿಡ್‌ ಕಾರಣದಿಂದಾಗಿ ಕಳೆದ ವರ್ಷ ಬಿಗ್‌ಬಾಸ್‌ ನಡೆದಿರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಎಂಟನೇ ಆವೃತ್ತಿ ಪೂರ್ಣಗೊಂಡ ಕೂಡಲೇ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ 9ನೇ ಆವೃತ್ತಿ ನಡೆಸುವುದಕ್ಕೆ ಕಲರ್ಸ್‌ ಕನ್ನಡ ಚಿಂತನೆ ನಡೆಸಿತ್ತು. ಈ ಕುರಿತು ಪರಮೇಶ್ವರ್‌ ಗುಂಡ್ಕಲ್‌ ಅವರೂ ಮಾಹಿತಿ ನೀಡಿದ್ದರು. ಈಗ, ಎಂಟನೇ ಆವೃತ್ತಿಯೇ ಅರ್ಧಕ್ಕೆ ಸ್ಥಗಿತವಾಗಿರುವ ಕಾರಣ ಈ ವರ್ಷ ಮತ್ತೊಂದು ಆವೃತ್ತಿ ನಡೆಸುವುದು ಅನುಮಾನವಾಗಿದೆ. ಜೊತೆಗೆ ಈ ಆವೃತ್ತಿಯಲ್ಲಿ ಭಾಗವಹಿಸಿದ ಸ್ಪರ್ಧಿಗಳೆಲ್ಲರೂ ಮನೆಯಿಂದ ಹೊರಗೆ ಬರುವ ಕಾರಣ, ಸ್ಥಗಿತಗೊಂಡಿರುವ ಸಂದರ್ಭದಿಂದಲೇ ಮತ್ತೆ ಈ ಆವೃತ್ತಿಯನ್ನು ಪುನರಾರಂಭಿಸುವುದೂ ಅನುಮಾನವಾಗಿದೆ ಎಂದು ಚಾನೆಲ್‌ನ ಮೂಲಗಳು ತಿಳಿಸಿವೆ.

ಕಳೆದ ವಾರವೇ ಸಂಚಿಕೆ ರದ್ದು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ವಾರಾಂತ್ಯದ ಎರಡು ಸಂಚಿಕೆಗಳಲ್ಲಿ ಭಾಗವಹಿಸಿರಲಿಲ್ಲ. ನಂತರ ಅವರು ಚೇತರಿಸಿಕೊಂಡರೂ, ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಕಳೆದ ವಾರ ವಾರಾಂತ್ಯದ ಸಂಚಿಕೆಗಳನ್ನು ಸುದೀಪ್‌ ಅವರ ಅನುಪಸ್ಥಿತಿಯಲ್ಲೇ ನಡೆಸಲಾಗಿತ್ತು.

ಚಿತ್ರೀಕರಣ ಸ್ಥಗಿತ: ‘ಕೋವಿಡ್‌ –19ನ ಎರಡನೇ ಅಲೆಯ ಹಾವಳಿಯಿಂದಾಗಿ ಚಿತ್ರರಂಗವು ಹಲವಾರು ಕಲಾವಿದರು, ತಂತ್ರಜ್ಞರನ್ನು ಕಳೆದುಕೊಂಡಿದೆ. ರಾಜ್ಯ ಸರ್ಕಾರ ಮೇ 10ರಿಂದ ಲಾಕ್‌ಡೌನ್‌ ಘೋಷಣೆ ಮಾಡಿರುವ ಕಾರಣ ಧಾರಾವಾಹಿ, ರಿಯಾಲಿಟಿ ಷೋ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ’ ಎಂದು ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ವಿ. ಶಿವಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.