ADVERTISEMENT

‘ಗಾಸಿಪ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದ ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್

ರೂಪಾ .ಕೆ.ಎಂ.
Published 9 ಫೆಬ್ರುವರಿ 2020, 19:30 IST
Last Updated 9 ಫೆಬ್ರುವರಿ 2020, 19:30 IST
ದೀಪಿಕಾ ದಾಸ್ 
ದೀಪಿಕಾ ದಾಸ್    

‍‘ಜನ ಹೇಗಿದ್ದರೂ ಮಾತಾಡ್ತಾರೆ.. ನಾನು ಗಾಸಿಪ್‌ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅದನ್ನು ನಿರ್ವಹಿಸುವುದು ಒಂದು ಕಲೆ. ಅದು ನನಗೆ ಕರಗತವಾಗಿದೆ...’ ಇದು ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ದೀಪಿಕಾ ದಾಸ್ ಅವರ ನೇರ ನುಡಿ.

‘ಬಿಗ್‌ಬಾಸ್‌’ ಮನೆಯಿಂದ ಹೊರ ಬಂದ ದೀಪಿಕಾ ದಾಸ್‌ ‘ಪ್ರಜಾ ಪ್ಲಸ್‌’ನೊಂದಿಗೆ ಮನೆಯೊಳಗೆ ಆದ ಅನುಭವವನ್ನು ಹೀಗೆ ಹಂಚಿಕೊಂಡರು.

ಶೈನ್ ಶೆಟ್ಟಿ ಜತೆಗಿನ ಬಾಂಧವ್ಯದ ಬಗ್ಗೆ ಕೇಳಿದರೆ, ‘ಅವರು ಒಬ್ಬ ಒಳ್ಳೆಯ ವ್ಯಕ್ತಿ’ ಎಂದು ಹೇಳುತ್ತಾರೆ. ಭವಿಷ್ಯದ ಯೋಚನೆಗಳ ಬಗ್ಗೆ ಪ್ರಶ್ನಿಸಿದರೆ, ‘ಸಿಕ್ಕಾಪಟ್ಟೆ ಅವಕಾಶಗಳು ಬರುತ್ತಿವೆ. ಸ್ಕ್ರಿಪ್ಟ್‌ ನೋಡಿ ಸಹಿ ಹಾಕುವ ನಿರ್ಧಾರ ಮಾಡಿದ್ದೇನೆ’ ಎನ್ನುವ ಮಾತು ಅವರದ್ದು.

ADVERTISEMENT

‘ಬಿಗ್‌ಬಾಸ್‌ನಲ್ಲಿ ಟ್ರೋಫಿ ಯಾಕೆಸಿಗಲಿಲ್ಲ ಎಂದು ಯೋಚಿಸಲು ಹೋಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಗಳಿಸಿದ್ದೇನೆ. ಅದಷ್ಟೇ ಮುಖ್ಯ’ ಎಂದು ನಸು ನಗುತ್ತಾರೆ. ನಟನೆ ಬಿಟ್ಟರೆ ನೃತ್ಯವೇ ನನ್ನ ಪಾಲಿನ ಆಮ್ಲಜನಕ. ಸಿನಿಮಾಕ್ಕೆ ಅವಕಾಶ ಬರುತ್ತಿವೆ. ಸ್ಕ್ರಿಪ್ಟ್‌ ನೋಡಿ ನಿರ್ಧಾರ ಮಾಡುತ್ತೇನೆ’ ಎನ್ನುತ್ತಾರೆ ಅವರು.

‘ನನ್ನ ಬದುಕಿನ ಬಹುದೊಡ್ಡ ತಿರುವುಗಳಲ್ಲಿ ‘ನಾಗಿಣಿ’ ಧಾರಾವಾಹಿಯಲ್ಲಿ ಅಭಿನಯಿಸಿದ್ದು ಒಂದಾದರೆ, ಬಿಗ್‌ಬಾಸ್‌ ಮನೆ ಹೊಕ್ಕಿದ್ದು ಮತ್ತೊಂದು. ನೂರು ದಿನಗಳಲ್ಲಿ ಅಪರಿಚಿತರೆಲ್ಲರೂ ಸ್ನೇಹಿತರಾದರು. ಕೆಲವರ ವ್ಯಕ್ತಿತ್ವಕ್ಕೆ ಸೋತು ಹೋಗಿದ್ದೆ. ಇದೊಂದು ಸುಂದರ ಅನುಭವ’ ಎಂದು ಬಿಗ್‌ಬಾಸ್‌ ಜರ್ನಿಯ ಬಗ್ಗೆ ಖುಷಿ ಹಂಚಿಕೊಂಡರು.

‘ಬಿಗ್‌ಬಾಸ್‌ ಮನೆಗೆ ಬಂದ ಮೇಲೆ ಕೆಲವು ಟೀಕೆಗಳು ಬಂದವು. ಆ ಬಗ್ಗೆ ನನ್ನ ಅಮ್ಮ ಒಬ್ಬ ತಾಯಿಯಾಗಿ ವ್ಯಕ್ತಪಡಿಸಿದ ಪ್ರತಿಕ್ರಿಯೆ, ನಡೆದುಕೊಂಡ ರೀತಿ ಪ್ರಾಮಾಣಿಕವಾಗಿತ್ತು. ಅದರಿಂದ ಗೊಂದಲ ಉಂಟಾಗಿದ್ದಿರಬಹುದು. ನಾನು ಬಿಗ್‌ಬಾಸ್‌ ಮನೆಯಲ್ಲಿದ್ದಾಗ ನನ್ನ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿದ್ದ ನನ್ನ ಗೆಳತಿ ಮತ್ತು ಅಮ್ಮನ ನಡುವೆಯೂ ಸಣ್ಣ ಮಟ್ಟಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು. ಅವರವರ ದೃಷ್ಟಿಕೋನದಿಂದ ನೋಡಿದಾಗ ಅದು ಸರಿಯಾಗಿಯೇ ಕಾಣುತ್ತದೆ. ಈಗ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲದ್ದಕ್ಕೂ ನನ್ನ ನಗುವೇ ಉತ್ತರ’ ಎಂದು ಹೇಳಲು ಅವರು ಮರೆಯುವುದಿಲ್ಲ.

‘ಖಡಕ್‌ ಆಗಿರುವುದು ನನ್ನ ವ್ಯಕ್ತಿತ್ವದ ಭಾಗ. ಅದು ಕೆಲವರಿಗೆ ಅಹಂಕಾರ ಅನಿಸಿದರೆ ಅದು ಅವರ ಅಭಿಪ್ರಾಯವಷ್ಟೆ. ಯಾರ ಜತೆ ಮತ್ತು ಎಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ ಯಾವುದರ ಬಗ್ಗೆಯೂ ತಪ್ಪಿತಸ್ಥ ಮನೋಭಾವ ಇಲ್ಲ. ಜೀವನದಲ್ಲಿ ಹಲವು ಏಳು ಬೀಳನ್ನು ಕಂಡವಳು ನಾನು. ಪ್ರಬುದ್ಧತೆಯೆಂಬುದು ನನ್ನಯೋಚನೆಯ ಭಾಗ’ ಎಂಬ ಖಡಕ್‌ ಉತ್ತರ ಅವರದ್ದು.

‘ಉಡುಗೆ ವಿಚಾರದಲ್ಲಿ ಭಿನ್ನ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಆ ಬಗ್ಗೆ ಒಳ್ಳೆಯ ಆಸಕ್ತಿ ಇದೆ. ನಾನು ಹಾಕಿಕೊಂಡ ಉಡುಗೆ, ಹಾಗೂ ನನ್ನ ಶೈಲಿಯನ್ನು ಜನ ಮೆಚ್ಚಿರುವುದಕ್ಕೆ ಖುಷಿ ಇದೆ’ ಎಂಬ ಸಂತಸ ದೀಪಿಕಾ ಅವರದ್ದು.

ಬಿಗ್‌ಬಾಸ್‌ ಮನೆಯಲ್ಲಿ ಇದ್ದಷ್ಟು ಕಾಲ ‘ಸೌಂದರ್ಯಕ್ಕೆ ಖಡಕ್‌ ವ್ಯಕ್ತಿತ್ವ ಸೇರಿಬಿಟ್ಟರೆ, ಹೊಸ ಬಗೆಯ ವರ್ಚಸ್ಸು ರೂಪುಗೊಳ್ಳುತ್ತದೆ’ ಎಂಬುದನ್ನು ದೀಪಿಕಾ ದಾಸ್‌ ತೋರಿಸಿಕೊಟ್ಟಿದ್ದರು. ಆಟದಲ್ಲಿ ಅಷ್ಟೇ ಅಲ್ಲ ಉಡುಗೆ ತೊಡುಗೆಯಲ್ಲಿಯೂ, ವ್ಯಕ್ತಿತ್ವದಲ್ಲಿಯೂ ಸ್ವತಂತ್ರ ಛಾಪು ಮೂಡಿಸುವ ಮೂಲಕ ಉಳಿದ ಸ್ಪರ್ಧಿಗಳಿಗಿಂತ ಭಿನ್ನ ಎಂಬುದನ್ನು ಸಾರಿದ್ದರು. ಅವರ ಈ ವ್ಯಕ್ತಿತ್ವವನ್ನು ಮೆಚ್ಚಿದ ಕೆಲವರು ‘ಹೆಣ್ಣುಮಗಳಿದ್ದರೆ ಹೀಗೆ, ಮಿಲಿಟರಿ ಆಫೀಸರ್ ತರಹ ಇರಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.