ಬೆಂಗಳೂರು: ಈ ಬಾರಿಯ ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ಅಭಿಮಾನಿಯೊಬ್ಬರು ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಫಿನಾಲೆಗೂ ಮುನ್ನ ಈ ಬಾರಿ ಯಾರು ಗೆಲ್ಲಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು. ಅನೇಕರು ವಿನಯ್ ಗೆಲ್ಲುತ್ತಾರೆ ಎಂದರೆ ಇನ್ನೂ ಕೆಲವರು ಡ್ರೋನ್ ಪ್ರತಾಪ್ ಗೆದ್ದೇ ಗೆಲ್ಲುತ್ತಾರೆ ಎಂದಿದ್ದರು. ಆದರೆ ಅವರ ಲೆಕ್ಕಾಚಾರ ಉಲ್ಟಾ ಆಗಿ ಕಾರ್ತಿಕ್ ಗೆದ್ದಿದ್ದಾರೆ.
ಇಲ್ಲೊಬ್ಬರು ಅಭಿಮಾನಿ ಈ ಬಾರಿ ಡ್ರೋನ್ ಪ್ರತಾಪ್ ಅವರೇ ಗೆಲ್ಲುವುದು ಬೇಕಾದರೆ ಸವಾಲು ಹಾಕುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಮಾಡಿ ಹಾಕಿದ್ದರು. ಅಲ್ಲದೆ ಪ್ರತಾಪ್ ಸೋತರೆ ನಾಲ್ಕು ಹಸಿ ಮೆಣಸಿನಕಾಯಿ ತಿನ್ನುವುದಾಗಿಯೂ, ಅರ್ಧ ಮೀಸೆ ಮತ್ತು ಅರ್ಧ ಗಡ್ಡ ಬೋಳಿಸಿಕೊಳ್ಳುವುದಾಗಿಯೂ ಸವಾಲು ಹಾಕಿದ್ದರು.
ಅವರ ದುರಾದೃಷ್ಟಕ್ಕೆ ಪ್ರತಾಪ್ ವಿನ್ನರ್ ಆಗದೆ ರನ್ನರ್ ಅಪ್ ಆಗಿದ್ದಾರೆ. ಸವಾಲು ಎಸೆದು ಪೇಚಿಗೆ ಸಿಲುಕಿ ಅರ್ಧ ಗಡ್ಡ ಮತ್ತು ಅರ್ಧ ಮೀಸೆಯನ್ನೂ ಬೋಳಿಸಿಕೊಂಡಿದ್ದಾರೆ. ಜತೆಗೆ ನಾಲ್ಕು ಹಸಿ ಮೆಣಸಿನ ಕಾಯಿಯನ್ನೂ ತಿಂದಿದ್ದಾರೆ. ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅರ್ಧ ಮೀಸೆ–ಗಡ್ಡ ತೆಗೆದ ಮೇಲೆ ವಿವಿಧ ರೀತಿಯ ಪೋಸ್ ಕೊಟ್ಟು ಫೋಟೊಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಎಲ್ಲೆಡೆ ಹರಿದಾಡುತ್ತಿದೆ.
ಅಂದಹಾಗೆ ಈ ರೀತಿ ಸವಾಲೆಸೆದು ಪೇಚಿಗೆ ಸಿಲುಕಿದ ವ್ಯಕ್ತಿ ಹೆಸರು ಝೈನುಲ್ ಅಬಿದ್. ಇವರು ಮಂಗಳೂರಿನ ಮೂಲದವರೆಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.