ADVERTISEMENT

ವೆಬ್‌ಸರಣಿಯಾಗಿ ಬರಲಿದೆ ಕನ್ನಡದ ಪ್ರಥಮ ಧಾರಾವಾಹಿ ‘ಮಾಯಾಮೃಗ’

​ಪ್ರಜಾವಾಣಿ ವಾರ್ತೆ
Published 27 ಮೇ 2021, 13:38 IST
Last Updated 27 ಮೇ 2021, 13:38 IST
ಮಾಯಾಮೃಗ ವೆಬ್‌ಸರಣಿ ಪೋಸ್ಟರ್‌
ಮಾಯಾಮೃಗ ವೆಬ್‌ಸರಣಿ ಪೋಸ್ಟರ್‌   

‘ಮಾಯಾಮೃಗ... ಮಾಯಾಮೃಗ..ಮಾಯಾಮೃಗವೆಲ್ಲಿ...’ ಹೀಗೆ ಎರಡು ದಶಕದ ಹಿಂದೆ ಬಹುತೇಕ ಎಲ್ಲ ಮನೆಗಳಿಂದ ದೂರದರ್ಶನ/ಚಂದನದಲ್ಲಿ ಸಂಜೆ 4.30 ಈ ಹಾಡು ಕೇಳಿಬರುತ್ತಿತ್ತು. ಹೀಗೆ ಕನ್ನಡಿಗರ ಮನೆ ಮಾತಾಗಿದ್ದ, ಕನ್ನಡ ಕಿರುತೆರೆಯಲ್ಲೇ ಮೋಡಿ ಮಾಡಿದ್ದ ಟಿ.ಎನ್‌.ಸೀತಾರಾಮ್‌, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿ ಇದೀಗ ವೆಬ್‌ಸೀರೀಸ್‌ ರೂಪದಲ್ಲಿ ಬರಲಿದೆ.

ಕನ್ನಡದ ಪ್ರಥಮ ಧಾರಾವಾಹಿಯಾಗಿ ಮೂಡಿಬಂದ ‘ಮಾಯಾಮೃಗ’ದ ಪಾತ್ರಗಳನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ‘ಮಾಯಾಮೃಗ ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. ಅದೊಂದು ದಂತ ಕಥೆ. ಅಂಥ ಮಾಯಾಮೃಗ
ಇನ್ನೊಂದು ವಾರದಲ್ಲಿ ವೆಬ್‌ಸೀರೀಸ್‌ ರೀತಿಯಲ್ಲಿ ನಿಮ್ಮ ಮುಂದೆ’ ಎಂದು ಸ್ವತಃ ಟಿ.ಎನ್‌.ಸೀತಾರಾಮ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

‘ಇಗೋ! ಮತ್ತೆ ಬಂತು ನೋಡಿ! 90ರ ದಶಕದ, ಕನ್ನಡಿಗರ ಮನ ಮಿಡಿತ, ದೂರದರ್ಶನ ಮಾಧ್ಯಮದಲ್ಲೇ ಇತಿಹಾಸ ನಿರ್ಮಿಸಿದ ಕನ್ನಡ ಪ್ರಥಮ ಮೆಗಾ ಧಾರಾವಾಹಿ ‘ಮಾಯಾಮೃಗ’, ಈಗ ವೆಬ್ ಸರಣಿಯ ರೂಪದಲ್ಲಿ ಯುಟ್ಯೂಬ್ ಮುಖಾಂತರ ಪ್ರಸಾರಗೊಳ್ಳಲು ಸಿದ್ಧವಾಗಿದೆ’ ಎಂದು ಭೂಮಿಕಾ ಟಾಕೀಸ್‌ ಯೂಟ್ಯೂಬ್‌ ಚಾನೆಲ್‌ ಉಲ್ಲೇಖಿಸಿದೆ.

ADVERTISEMENT

ಈಗಾಗಲೇ ‘ಮಾಯಾಮೃಗ ನಡೆದು ಬಂದ ಹಾದಿ’ ಎಂಬ ನಾಲ್ಕು ಸಂಚಿಕೆಗಳು ಭೂಮಿಕಾ ಟಾಕೀಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಟಿ.ಎನ್‌.ಸೀತಾರಾಮ್‌, ನಟರಾದ ಅವಿನಾಶ್‌, ಮಾಳವಿಕ ಅವಿನಾಶ್‌, ಎಚ್‌.ಜಿ.ದತ್ತಾತ್ರೇಯ(ದತ್ತಣ್ಣ), ಎಂ.ಡಿ.ಪಲ್ಲವಿ, ಮುಖ್ಯಮಂತ್ರಿ ಚಂದ್ರು ಹೀಗೆ ಹತ್ತಾರು ಕಲಾವಿದರು ಮಾಯಾಮೃಗದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.