ಭೋಪಾಲ್: ಕಿರುತೆರೆ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಶ್ವೇತಾ ತಿವಾರಿ ಅವರು 'ದೇವರು ಮತ್ತು ಬ್ರಾ' ಕುರಿತು ನೀಡಿರುವ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯ ಪ್ರದೇಶದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಭೋಪಾಲ್‌ನ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಬುಧವಾರ (ಜ.26) ಭೋಪಾಲ್‌ನಲ್ಲಿ ನಡೆದ 'ಶೋ ಸ್ಟಾಪರ್' ವೆಬ್ ಸರಣಿಯ ಪ್ರಚಾರ ಸಂದರ್ಭದಲ್ಲಿ ಶ್ವೇತಾ ತಿವಾರಿ ಅವರು ಒಳ ಉಡುಪಿಗೆ ಸಂಬಂಧಿಸಿದಂತೆ ಮಾತನಾಡಿದ್ದರು. 'ನನ್ನ ಬ್ರಾ ಅಳತೆಯನ್ನು ಭಗವಾನ್ (ದೇವರು) ತೆಗೆದುಕೊಳ್ಳುತ್ತಿದ್ದಾನೆ...' ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸ್ಥಳೀಯ ವ್ಯಕ್ತಿ ಸೋನು ಪ್ರಜಾಪತಿ ಎಂಬುವವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಶ್ವೇತಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶ್ವೇತಾ ಹೇಳಿಕೆಯು ಸಾಮಾಜಿಕ ಮಾಧ್ಯಮಗಳ ಮೂಲಕ ವಿವಾದದ ರೂಪ ಪಡೆಯುತ್ತಿದ್ದಂತೆ, ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತನಿಖೆಗೆ ಆದೇಶಿಸಿದ್ದರು. ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಶ್ವೇತಾ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ವೇತಾ ಹೇಳಿದ್ದೇನು..?
ಮುಂಬರಲಿರುವ ವೆಬ್ ಸಿರೀಸ್‌ನ ಪ್ರಚಾರಕ್ಕಾಗಿ ನಟಿ ಶ್ವೇತಾ ತಿವಾರಿ ಭೋಪಾಲ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ಶೋ ಸ್ಟಾಪರ್' ವೆಬ್ ಸರಣಿಯು ಫ್ಯಾಷನ್ ಜಗತ್ತಿಗೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ. ಹಿಂದಿಯ 'ಮಹಾಭಾರತ್' ಧಾರಾವಾಹಿಯಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದ ಸೌರಭ್ ರಾಜ್ ಜೈನ್ ಸಹ ಈ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆಯೇ ಮಾತನಾಡುತ್ತ, ಶ್ವೇತ ಅವರು 'ನನ್ನ ಬ್ರಾ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಿದ್ದಾನೆ (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೈ)' ಎಂದಿದ್ದರು. ದೇವರ ಬಗ್ಗೆ ಹಗುರವಾಗಿ ಮಾತನಾಡಿರುವುದು, ಹಾಸ್ಯ ಮಾಡಿರುವ ಬಗ್ಗೆ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.