ಚಂದನವನದಲ್ಲಿ ಪ್ರಸ್ತುತ ಮಿಂಚುತ್ತಿರುವ ಬಹುಪಾಲು ನಟಿಯರಲ್ಲಿ ಬಹುತೇಕರು ಕಿರುತೆರೆ ಮೂಲದಿಂದ ಬಂದವರು. ಈ ಸಾಲಿಗೆ ಇದೀಗ ಮತ್ತೋರ್ವ ನಟಿ ಸೇರ್ಪಡೆಯಾಗಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ‘ರೌಡಿ ಬೇಬಿ’ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿ ಬೆಳೆದ ನಿಶಾ ಇದೀಗ ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ಅಂದೊಂದಿತ್ತು ಕಾಲ’ದಲ್ಲಿ ನಾಯಕಿಯಾಗಿ ಚಂದನವನಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ನಟ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದು, ತಮ್ಮ ಅನುಭವ, ಪಾತ್ರದ ಕುರಿತು ನಿಶಾ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.
‘ಕಿರುತೆರೆಗೂ ಹಿರಿತೆರೆಗೂ ಬಹಳಷ್ಟು ವ್ಯತ್ಯಾಸವಿದೆ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಳ್ಳೆಯ ಕಥೆ ಬಂದಾಗ ಖಂಡಿತವಾಗಿಯೂ ಚಂದನವನಕ್ಕೆ ಕಾಲಿಡಲು ಸಿದ್ಧವಾಗಿದ್ದೆ. ಇದೀಗ ವಿನಯ್ ರಾಜ್‌ಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತೋಷದ ವಿಷಯ’ ಎನ್ನುತ್ತಾರೆ.
‘ಹಿಂದೆಯೂ ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿತ್ತು. ಬೆಳ್ಳಿ ತೆರೆಗೆ ಬರುವಾಗ ಒಂದು ಒಳ್ಳೆಯ ಅವಕಾಶದೊಂದಿಗೆ ಬಂದರೆ ಯಶಸ್ಸು ಕಾಣುತ್ತೇವೆ ಎಂಬ ಯೋಚನೆ ಎಲ್ಲರಿಗೂ ಇರುತ್ತದೆ. ಇದು ನನಗೂ ಇತ್ತು. ಇದೀಗ ಆ ಸಮಯ ಬಂದಿದೆ. ಮೊದಲಿಗೆ ಸಿನಿಮಾದ ನಾಯಕ ಯಾರು ಎಂದು ನನಗೆ ತಿಳಿದಿರಲಿಲ್ಲ. ಮಾತುಕತೆಗೆ ಹೋದಾಗಲೇ ವಿನಯ್ ರಾಜ್‌ಕುಮಾರ್ ಅವರಿಗೆ ನಟಿಯಾಗಿ ಪಾತ್ರ ನಿರ್ವಹಿಸುವ ವಿಷಯದ ಬಗ್ಗೆ ತಿಳಿಯಿತು. ಇಂತಹ ಅವಕಾಶ ದೊರೆತಾಗ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಇವರ ಜೊತೆ ನಟಿಸುವ ಅವಕಾಶ ದೊರೆತಿರುವುದಕ್ಕೆ ಲಕ್ಕಿ ಎಂದುಕೊಳ್ಳುತ್ತೇನೆ. ರಾಜ್‌ಕುಮಾರ್ ಅವರ ಕುಟುಂಬಕ್ಕೇ ನಾನು ದೊಡ್ಡ ಅಭಿಮಾನಿ’ ಎನ್ನುತ್ತಾರೆ ನಿಶಾ.
ಧಾರಾವಾಹಿ, ಸಿನಿಮಾ ಸವಾಲು
‘ಟಿವಿಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಬೃಹತ್ ಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಬಹಳಷ್ಟು ಸವಾಲುಗಳಿವೆ. ಧಾರಾವಾಹಿಯಲ್ಲಿ ಇರುವ ನನ್ನ ಪಾತ್ರಕ್ಕೆ ನನಗೇ ಆದ ಅಭಿಮಾನಿಗಳ ಬಳಗವಿದೆ. ಅವರಿಗೆ ಹಿಡಿಸುವಂತೆ ಹಾಗೂ ಇತರೆ ಪ್ರೇಕ್ಷಕರಿಗೂ ಹಿಡಿಸುವಂತೆ ಪಾತ್ರವನ್ನು ನಿಭಾಯಿಸುವುದು ಮುಖ್ಯ. ಧಾರಾವಾಹಿಯಲ್ಲಿ ಪ್ರತಿದಿನವೂ ಪಾತ್ರವನ್ನು ನಿರ್ವಹಿಸಿಕೊಂಡು ಹೋಗುವುದು ಬೇರೆ ಹಾಗೂ ಸಿನಿಮಾದಲ್ಲಿ ಬಹಳ ಕಡಿಮೆ ಅವಧಿಯಲ್ಲಿ ನಮ್ಮ ಪಾತ್ರವನ್ನು ಜನರಿಗೆ ಮುಟ್ಟಿಸುವುದು ಕಠಿಣ. ಚಿತ್ರವು ಎರಡೂವರೆ ಗಂಟೆ ಇರುತ್ತದೆ. ಇದರಲ್ಲಿ ನನ್ನ ಪಾತ್ರಕ್ಕೆ ಇಂತಿಷ್ಟೇ ಅವಧಿ ಎಂದು ಇರುತ್ತದೆ. ಅದಕ್ಕೆ ತಕ್ಕ ನ್ಯಾಯವನ್ನು ನೀಡಬೇಕು ಎನ್ನುವುದು ನನ್ನ ಗುರಿ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಜನರ ಮನಸ್ಸು ಮುಟ್ಟುವಂತೆ ವಹಿಸುತ್ತೇನೆ’ ಎಂದು ಹೇಳುತ್ತಾರೆ ನಿಶಾ.
ಬಾಯ್‌ಬಡ್ಕಿ ಅಲ್ಲ!
ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡ ನಿಶಾ, ‘ಅಂದೊಂದಿತ್ತು ಕಾಲದಲ್ಲಿ ನಾನು ಶಾಲಾ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಎರಡು ಲುಕ್‌ಗಳಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೀವನದ ಹಲವು ಹಂತಗಳ ಕುರಿತು ಚಿತ್ರಕಥೆ ಇರುವುದರಿಂದ ಒಂದು ಹಂತದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ನನಗೆ ಇದೊಂದು ವಿಭಿನ್ನವಾದ ಪಾತ್ರ. ಇಷ್ಟು ದಿನ ಟಿವಿಯಲ್ಲಿ ಬಾಯ್‌ಬಡ್ಕಿಯಾಗಿ ಕಾಣಿಸಿಕೊಳ್ಳುತ್ತಿದ್ದೆ. ನಿಜ ಜೀವನದಲ್ಲಿ ನಾನು ಬಾಯ್‌ಬಡ್ಕಿ ಅಲ್ಲ. ಚಿತ್ರದಲ್ಲೂ ಇದೇ ರೀತಿ ಪಾತ್ರ ದೊರಕಿದೆ’ ಎನ್ನುತ್ತಾರೆ.
ಕಿರುತೆರೆ ಮರೆಯಲ್ಲ
‘ಚಂದನವನಕ್ಕೆ ಕಾಲಿಟ್ಟ ತಕ್ಷಣ, ಕಿರುತೆರೆಯನ್ನು ಮರೆಯುತ್ತೇನೆ ಎನ್ನುವುದಿಲ್ಲ.ಬಂದ ದಾರಿಯನ್ನು ಮರೆಯಬಾರದು ಎನ್ನುತ್ತಾರೆ. ಹೀಗಾಗಿ, ಎರಡನ್ನೂ ಜೊತೆಯಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ. ಮುಂದೆಯೂ ಕೆಲ ಚಿತ್ರಗಳ ಅವಕಾಶ ಬಂದಿದ್ದು, ಅವು ಚರ್ಚೆಯ ಹಂತದಲ್ಲಿವೆ’ ಎಂದು ಭವಿಷ್ಯದ ನಡೆಯನ್ನು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.