ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ಜೀ ಕನ್ನಡ ವಾಹಿನಿಯರಿಯಾಲಿಟಿ ಷೋ ಸರಿಗಮಪದಿಂದ ಒಂದು ವಾರ ದೂರ ಉಳಿದಿದ್ದರು. ಇದೀಗ ಅವರು ಮತ್ತೆ ಆ ಕಾರ್ಯಕ್ರಮಕ್ಕೆ ಮರಳುತ್ತಿದ್ದಾರೆ.
ಹಂಸಲೇಖ ಅವರು ಇತ್ತೀಚೆಗೆ ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.ಹೀಗಾಗಿ ಹಂಸಲೇಖ ಅವರನ್ನು ಸರಿಗಮಪದಿಂದ ಜೀ ವಾಹಿನಿಯೇ ದೂರ ಇಟ್ಟಿದೆ ಎಂಬ ಚರ್ಚೆಗಳು ಅಲ್ಲಲ್ಲಿ ನಡೆದಿದ್ದವು.
ಆದರೆ, ಈ ಬಗ್ಗೆ ಸ್ವತಃ ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಇಂದು ಸ್ಷಷ್ಟನೇ ನೀಡಿದ್ದು, ‘ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಸರಿಗಮಪದಿಂದ ಒಂದು ವಾರ ದೂರ ಉಳಿಯಲು ನಿರ್ಧರಿಸಿದ್ದರು. ನಾವು ಅವರ ನಿರ್ಧಾರವನ್ನು ಗೌರವಿಸಿ ವಿರಾಮ ತೆಗೆದುಕೊಳ್ಳಲುಒಪ್ಪಿಕೊಂಡಿದ್ದೆವು. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗೆ ಇರುತ್ತಾರೆ’ ಎಂದು ಹೇಳಿದ್ದಾರೆ.
ಸಂಗೀತ ಕಲಹಗಳನ್ನು ತಪ್ಪಿಸುತ್ತದೆ
‘ರಾಘವೇಂದ್ರ ಹುಣಸೂರು ಅವರಿಗೆ ಪ್ರತಿಕ್ರಿಯೆ ನೀಡಿರುವ ಹಂಸಲೇಖ ಅವರು, ಡಿಯರ್ ರಘು, ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರುತ್ತೇನೆ. ಸಂಗೀತ ಕಲಹಗಳನ್ನು ತಪ್ಪಿಸುತ್ತದೆ’ ಎಂದು ಹೇಳಿದ್ದಾರೆ.
‘ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗಬಹುದು, ಆದರೆ, ಅವರು ಕೊಟ್ಟ ಮಾಂಸಾಹಾರ ಸೇವಿಸುವುದಕ್ಕೆ ಆಗುತ್ತದಾ? ಎಂಬ ಹೇಳಿಕೆಯನ್ನು ಕಳೆದ ವಾರ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ನೀಡಿದ್ದರು. ಇದು ಸಾಕಷ್ಟು ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತಲ್ಲದೇ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕೆಲವರು ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು.
ಜೀ ಕನ್ನಡದಲ್ಲಿ ಕಳೆದ ಸೆಪ್ಟೆಂಬರ್ 18 ರಿಂದ ಪ್ರಸ್ತುತ ಸರಿಗಮಪ ಸೀಸನ್ ಶುರುವಾಗಿದೆ. ಹಂಸಲೇಖ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.