ಪಟ ಪಟ ಅಂತ ಮಾತನಾಡುತ್ತಾ, ತುಟಿ ಅಂಚಲ್ಲೇ ನಗು ಸೂಸುತ್ತಾ, ಕಣ್ಣಲ್ಲೇ ಅಭಿನಯಿಸುತ್ತಾ, ಸದಾ ಚಟುವಟಿಕೆಯೊಂದಿಗೆ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಎಂಥವರನ್ನೂ ತನ್ನ ನಟನೆಯ ಮೂಲಕವೇ ಕಟ್ಟಿ ಹಾಕುವ ಹುಡುಗಿ ಲೀಲಾ. ಈಕೆ ಇತ್ತೀಚೆಗೆ ಕಿರುತೆರೆಯಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದಾರೆ. ಕಿರುತೆರೆ ವೀಕ್ಷಕರಿಗೂ ಇವರೆಂದರೆ ಬಹಳ ಅಚ್ಚುಮೆಚ್ಚು. ಯಾರು ಈ ಲೀಲಾ?
ಲೀಲಾ, ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಾಯಕಿ. ಇವರ ನಿಜ ಹೆಸರು ಮಲೈಕಾ ಟಿ. ವಸುಪಾಲ್. ಇವರನ್ನು ಸದ್ಯದ ಕಿರುತೆರೆ ಕ್ರಷ್ ಎಂದರೂ ತಪ್ಪಾಗಲಿಕ್ಕಿಲ್ಲ.
ಮೂಲತಃ ದಾವಣಗೆರೆಯವರಾದ ಇವರು ನಟನೆಯ ಕನಸು ಹೊತ್ತು ಬಂದವರು. ನೃತ್ಯದ ಮೇಲೆ ಅಪಾರ ಒಲವು. ಕಥಕ್ ನೃತ್ಯ ಪ್ರಕಾರವನ್ನೂ ಅಭ್ಯಸಿಸಿದ್ದಾರೆ. ಆದರೆ ತಂದೆ–ತಾಯಿಗೆ ಮಗಳು ಓದಿನಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲ. ಈ ಹಂಬಲಕ್ಕೆ ಒಲ್ಲೆ ಎನ್ನದ ಮಲೈಕಾ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ.
ಕಾಲೇಜು ದಿನಗಳಿಂದಲೂ ಇವರಿಗೆ ಆಡಿಷನ್‌ಗಳಿಗೆ ಕರೆ ಬರುತ್ತಲೇ ಇತ್ತು. ‘ಆದರೆ ಓದು ಮುಖ್ಯವಾದ ಕಾರಣ ಯಾವುದೇ ಪ್ರಾಜೆಕ್ಟ್‌ಗಳನ್ನು ನಾನು ಒಪ್ಪಿರಲಿಲ್ಲ. ಕಾಲೇಜು ಮುಗಿದ ಮೇಲೆ ಹಿಟ್ಲರ್ ಕಲ್ಯಾಣಕ್ಕೆ ಆಯ್ಕೆಯಾದೆ. ನಟನೆ, ಕ್ಯಾಮೆರಾ ಎದುರಿಸುವುದು ನನಗೆ ತಿಳಿದಿರಲಿಲ್ಲ. ಆದರೆ ಮೊದಲ ಧಾರಾವಾಹಿಯಲ್ಲೇ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದೇನೆ. ಅತೀ ಕಡಿಮೆ ಸಮಯದಲ್ಲಿ ಬಹಳಷ್ಟು ಅಭಿಮಾನಿ ಬಳಗವನ್ನು ಗಳಿಸಿದ್ದು ನನಗೆ ತುಂಬಾನೇ ಖುಷಿ ಕೊಟ್ಟಿದೆ’ ಎನ್ನುತ್ತಾ ಸಂಭ್ರಮ ಹಂಚಿಕೊಳ್ಳುತ್ತಾರೆ.
ಲೀಲಾ ಪಾತ್ರಕ್ಕೂ ಮಲೈಕಾರ ವೈಯಕ್ತಿಕ ಜೀವನಕ್ಕೂ ಸಾಕಷ್ಟು ಹೋಲಿಕೆ ಇದೆ ಎನ್ನುವ ಈ ಬೆಡಗಿ ಮುಂದಿನಗಳಲ್ಲಿ ನಟನೆಯಲ್ಲೇ ಮುಂದುವರಿಯವ ಭರವಸೆ ಮಾತುಗಳನ್ನಾಡುತ್ತಾರೆ. ತೆಲುಗು ಧಾರಾವಾಹಿ ಕ್ಷೇತ್ರದಿಂದಲೂ ಇವರಿಗೆ ಅವಕಾಶ ಬಂದಿದ್ದು ಸದ್ಯ ಹಿಟ್ಲರ್ ಕಲ್ಯಾಣದಲ್ಲೇ ಮುಂದುವರಿಯುತ್ತೇನೆ ಎನ್ನುತ್ತಾರೆ.
ಸಿನಿಮಾ ನಟನೆಯ ಕುರಿತೂ ಮಾತನಾಡುವ ಇವರು ‘ಸದ್ಯ ನಾನು ಧಾರಾವಾಹಿಯ ಮೇಲೆ ಸಂಪೂರ್ಣ ಗಮನ ಹರಿಸಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಚಿತ್ರಕತೆ ಸಿಕ್ಕೂ ನಟಿಸುವ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ’ ಎನ್ನುತ್ತಾ ಮಾತು ಮುಗಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.