ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮ ಹತ್ತಿರದ ಯುವ ಗಾಯಕ ನಿಹಾಲ್ ತಾವ್ರೊ ಸೋನಿ ಟಿ.ವಿ ನಡೆಸುತ್ತಿರುವ ‘ಇಂಡಿಯನ್ ಐಡಲ್’ ರಿಯಾಲಿಟಿ ಶೋನಲ್ಲಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಿಯಾಲಿಟಿ ಶೋ ಆಡಿಷನ್‌ನಲ್ಲಿ ದೇಶದ ವಿವಿಧೆಡೆಯ ಸುಮಾರು 3 ಲಕ್ಷ ಯುವ ಗಾಯಕರ ನಡುವೆ, ಸುಮಧುರ ಕಂಠಸಿರಿಯ ಮೂಲಕ ಅಸಾಧರಣ ಪೈಪೋಟಿ ನೀಡಿ ಅಂತಿಮ ಸುತ್ತಿಗೆ ತಲುಪಿದ 6 ಮಂದಿ ಗಾಯಕರ ಪೈಕಿ ನಿಹಾಲ್ ತಾವ್ರೊ ಕೂಡ ಒಬ್ಬರು. ಸ್ಪರ್ಧೆಯಲ್ಲಿರುವ ಏಕೈಕ ಕನ್ನಡಿಗ ಕೂಡ ಹೌದು. ಆಗಸ್ಟ್ 15ರಂದು ನಡೆಯುವ ಫೈನಲ್ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ.
9ನೇ ವಯಸ್ಸಿನಲ್ಲಿ ಗಮನ ಸೆಳೆದಿದ್ದ: ಕಡಲಕೆರೆ ಹೆರಾಲ್ಡ್ ತಾವ್ರೊ-ಪ್ರೆಸಿಲ್ಲಾ ದಂಪತಿ ಪುತ್ರ ನಿಹಾಲ್ ಅಲಂಗಾರಿನ ಸೇಂಟ್ ಥೋಮಸ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಆಲ್ಬಂ ಹಾಡಿಗೆ ಯಾವುದೇ ತರಬೇತಿ ಇಲ್ಲದೆ ಹಾಡಿ ಭೇಷ್ ಅನ್ನಿಸಿಕೊಂಡಿದ್ದ. ಅಲ್ಲಿಂದ ಪ್ರೇರಣೆಗೊಂಡು ಆರಂಭವಾದ ಸಂಗೀತ ಪಯಣದಲ್ಲಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಪ್ರತಿಭಾ ಕಾರಂಜಿ, ‘ನಮ್ಮ ಟಿವಿ’ಯ ಸೂಪರ್ ಸಿಂಗರ್, ವಾಯ್ಸ್ ಆಫ್ ಉಡುಪಿ, ದಾಯ್ಜಿ ವಲ್ಡ್ ವಾಯ್ಸ್, ಝೀ ಕನ್ನಡದ ಸರಿಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ.
ಪ್ರಸ್ತುತ ಆಳ್ವಾಸ್‌ನಲ್ಲಿ ಮೊದಲ ವರ್ಷದ ಬಿ.ಎ ವಿದ್ಯಾರ್ಥಿ. ಇವರ ತಂದೆ ಎಂಸಿಎಸ್ ಬ್ಯಾಂಕ್ ಉದ್ಯೋಗಿ, ಇವರು ಕೂಡ ಗಾಯಕ.
ನಿಹಾಲ್ ಹಾಡಿಗೆ ಸಂಗೀತ ಕ್ಷೇತ್ರದ ದಿಗ್ಗಜರಾದ ಕುಮಾರ್‌ಸಾನು, ಉದಿತ್ ನಾರಾಯಣ್, ಎ.ಆರ್ ರೆಹಮಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಇಂಡಿಯನ್ ಐಡಲ್ ಫೈನಲ್ ಹಂತದ ಫಲಿತಾಂಶ ಪ್ರಕಟವಾಗಲಿದೆ. ನಿಹಾಲ್ ಗೆದ್ದರೆ ಸಂಗೀತ ಕ್ಷೇತ್ರದಲ್ಲಿ ಕರಾವಳಿಗೆ ಹೊಸ ಗರಿ ಸೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.