ADVERTISEMENT

ಮೌನ ಭೇದಿಸುವ ಕಣ್ಮಣಿಗಳು

ಶರತ್‌ ಹೆಗ್ಡೆ
Published 9 ಮೇ 2019, 19:45 IST
Last Updated 9 ಮೇ 2019, 19:45 IST
ಕನ್ನಡದ ಕಣ್ಮಣಿ ಕಾರ್ಯಕ್ರಮದ ಚಿತ್ರ
ಕನ್ನಡದ ಕಣ್ಮಣಿ ಕಾರ್ಯಕ್ರಮದ ಚಿತ್ರ   

ಮಕ್ಕಳ ಮೌನವನ್ನು ಮಾತಾಗಿಸುವ ಪ್ರಯತ್ನದಲ್ಲಿ ಸಾಗಿದೆ ಜೀ ಕನ್ನಡ ವಾಹಿನಿಯ ಕನ್ನಡದ ಕಣ್ಮಣಿ. ನಾಡಿನ ಜ್ವಲಂತ ವಿಷಯಗಳ ಬಗ್ಗೆ ವ್ಯವಸ್ಥೆ ತಾಳಿರುವ ಮೌನವನ್ನು ಈ ಮಕ್ಕಳು ತಮ್ಮ ಮಾತಿನಿಂದ ಭೇದಿಸಿದ್ದಾರೆ.

ನಾಡಿನ ಉತ್ತರ ಧ್ರುವದಿಂದ ಗಡಿನಾಡು ಕಾಸರಗೋಡಿನವರೆಗೆ ಈ ಪುಟಾಣಿಗಳು ವೈವಿಧ್ಯಮಯ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5ರಿಂದ 6ರವರೆಗೆ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

‘ನಮ್ಮ ಮಾತು ನಿಮಗ ಕೇಳಿಸವಲ್ದು ರೀ... ಬೆಂಗಳೂರಿನ ಟ್ರಾಫಿಕ್‌ ಗದ್ದಲದಾಗೆ ನಮ್ಮ ಮಾತು ಎಲ್ಲಿ ಕೇಳಬೇಕ್ರಿ ನಿಮಗ....’ ಎಂದು ಪ್ರಶ್ನಿಸಿದ್ದ ಶ್ರೇಯಾ, ಮಹಾದಾಯಿ ಯೋಜನೆ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಮಾತಿನ ಚಾಟಿ ಬೀಸಿದ್ದಳು. ‘ನದಿಗಳು ನಮ್ಮ ಜೀವನಾಡಿ, ನೀವೇನೂ ಮಾಡುವುದು ಬೇಡ. ನಮ್ಮ ಕೂಡ ಕೈ ಜೋಡಿಸ್ರಿ ಅಷ್ಟೇ ಸಾಕು’ ಎಂದು ಮನವಿ ಮಾಡಿದ್ದಳು. ಅವಳ ಮಾತು ಉತ್ತರ ಕರ್ನಾಟಕದ ಜನಜೀವನ, ಸಂಕಟಗಳನ್ನೆಲ್ಲಾ ತೆರೆದಿಟ್ಟಿತ್ತು. ಇದು ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ನಲ್ಲೂ ವೈರಲ್‌ ಆಗಿತ್ತು.

ADVERTISEMENT

ಬಂಡೀಪುರದ ಕಾಳ್ಗಿಚ್ಚಿನ ಬಗ್ಗೆ ಚಿತ್ರದುರ್ಗದ ನಿನಾದ್‌ ಮಾತನಾಡಿದ್ದ. ಅದರಿಂದ ಸ್ಫೂರ್ತಿಗೊಂಡವರೊಬ್ಬರು ಆ ಪ್ರದೇಶದಲ್ಲಿ ಸ್ವಂತ ಖರ್ಚಿನಲ್ಲಿ ಸಸಿ ನೆಟ್ಟು ಪೋಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಾತ್ರವಲ್ಲ ಬೇಸಿಗೆ ಶಿಬಿರಗಳ ಸಮಾರಂಭದಲ್ಲಿ ನಿನಾದ್‌ ಸಸಿ ಹಂಚುವ ಕಾಯಕದಲ್ಲಿ ತೊಡಗಿದ್ದಾನೆ.

‘ನನ್ನ ಅಪ್ಪ ಅಮ್ಮ ಮೀಸಲಾತಿಯ ಫಲಾನುಭವಿಗಳು. ಅವರ ಸಂಪಾದನೆಯಿಂದ ನಾನು ಚೆನ್ನಾಗಿ ಓದುವಂತಾಯಿತು. ಇನ್ನು ನನಗೆ ಮೀಸಲಾತಿ ಬೇಡ. ಅಗತ್ಯವುಳ್ಳವರಿಗಷ್ಟೇ ಸಿಗಲಿ. ಮೀಸಲಾತಿಯ ಪ್ರಯೋಜನ ಪಡೆದವರು ಉಳಿದವರಿಗೆ ಬಿಟ್ಟುಕೊಡಿ’ ಎಂದು ವರದಾ ನೀರಮಣಿಗಾರ್‌ ನೀಡಿದ ಕರೆ ಹಲವರಿಗೆ ಬಿಸಿ ಮುಟ್ಟಿಸಿತ್ತು.

ಇವು ಸ್ಯಾಂಪಲ್‌ಗಳು ಮಾತ್ರ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ 14 ಮಕ್ಕಳದ್ದೂ ಒಂದೊಂದು ವಿಷಯ ವೈವಿಧ್ಯ ಇದೆ.

ಇಲ್ಲಿ ಸಿದ್ಧಪಡಿಸಿದ ಸ್ಕ್ರಿಪ್ಟ್‌ ಇರುವುದಿಲ್ಲ. ಮಕ್ಕಳೇ ತಮ್ಮ ಆಯ್ಕೆಯ ವಿಷಯ ಸಿದ್ಧಪಡಿಸಬೇಕು. ಸ್ವಂತಿಕೆ, ಅನುಭವ ಕಥನಗಳಿಗೆ ಆದ್ಯತೆಯಿದೆ. ಸಾಮಾನ್ಯ ಜ್ಞಾನ, ವಿಷಯ ಪ್ರಸ್ತುತಿ ನೋಡಿಕೊಂಡೇ ಆಯ್ಕೆ ಮಾಡುತ್ತೇವೆ ಎಂದರು ಕಣ್ಮಣಿ ತಂಡದ ಮೂರ್ತಿ.

ಏನೇನು ವಿಷಯಗಳಿವೆ?

ಕವಿ, ಸಾಹಿತಿಗಳು, ಸಂತರು, ಶರಣರ ಹೇಳಿಕೆಗಳ ಮೇಲೆ ವಿಷಯ ಮಂಡನೆ, ವಿಜ್ಞಾನ, ಪರಿಸರ, ಕಲೆ, ಸಂಸ್ಕೃತಿ, ತಂದೆ ತಾಯಿ ಮತ್ತು ಸಾಮಾಜಿಕ ಸಂಬಂಧಗಳ ಮೇಲಿನ ಮಾತು, ಹಾಸ್ಯ, ಸಿನಿಮಾ... ಹೀಗೆ ವಿಷಯಕ್ಕೆ ಎಲ್ಲೆ ಇಲ್ಲ.

ತೀರ್ಪುಗಾರರಾದ ಜಯಂತ ಕಾಯ್ಕಿಣಿ ಪ್ರೀತಿಯ ಮೇಷ್ಟ್ರು. ಮಕ್ಕಳು ಪ್ರಸ್ತುತಪಡಿಸುವ ವಿಷಯದ ಮೇಲೆ ಅವರ ಮಟ್ಟಕ್ಕಿಳಿದು ಇನ್ನಷ್ಟು ವಿಸ್ತರಿಸಿ ಮಾತನಾಡುತ್ತಾರೆ. ಜಗ್ಗೇಶ್‌ ಇಲ್ಲಿ ‘ದೊಡ್ಡಪ್ಪ’. ಮಕ್ಕಳು ಎಲ್ಲೆ ಮೀರುತ್ತಾರೆ ಎಂದಾದಾಗ ಸಣ್ಣಗೆ ಗದರುವುದುಂಟು. ಇಲ್ಲಿನ ಮಕ್ಕಳ ಹಿನ್ನೆಲೆ ನೋಡಿದ ಜಗ್ಗೇಶ್‌ ಕೆಲವರಿಗೆ ಆರ್ಥಿಕ ನೆರವೂ ನೀಡಿದ್ದಾರೆ ಎನ್ನುತ್ತಾರೆ ತಂಡದವರು.

ಗಂಗಾವತಿ ಪ್ರಾಣೇಶ್‌ ಮಕ್ಕಳ ಪಾಲಿಗೆ ‘ಕಾಕಾ’. ಆಗಾಗ ಚಟಾಕಿ ಹಾರಿಸುತ್ತಾ ಮಕ್ಕಳು ವಿಚಲಿತರಾಗದಂತೆ ನೋಡಿಕೊಳ್ಳುತ್ತಾರೆ. ಸ್ಪರ್ಧಿಗಳು ತೀರ್ಪುಗಾರರನ್ನು ಮೇಷ್ಟ್ರೇ, ದೊಡ್ಡಪ್ಪ, ಕಾಕಾ ಎಂದೇ ಕರೆಯಬೇಕು. ಕೀರ್ತಿ ಶಂಕರಘಟ್ಟ ಅವರ ಸ್ಪಷ್ಟ ಕನ್ನಡದ ನಿರೂಪಣೆ ಕಾರ್ಯಕ್ರಮವನ್ನು ಕನ್ನಡದ ಪರಿಸರಕ್ಕೆ ಇನ್ನಷ್ಟು ಹತ್ತಿರವಾಗಿಸಿದೆ.

ಕಾಯ್ಕಿಣಿ ಮಾತಿನಲ್ಲಿ ಶಿವರಾಮ ಕಾರಂತರು, ಕಯ್ಯಾರ ಕಿಞಣ್ಣ ರೈ ಸಹಿತ ಹಲವರ ಜೀವನಗಾಥೆಗಳು ಇಲ್ಲಿ ಹಾದುಹೋಗಿವೆ.

ಇಲ್ಲಿ ಯಾವುದೇ ಗಿಮಿಕ್‌ ಮಾಡಲೂ ಅಸಾಧ್ಯ. ಕೇವಲ ಮಾತು ವಿಷಯ ಪ್ರಸ್ತುತಿಯ ಮೇಲೆ ನಿಲ್ಲುವ ಷೋ ಇದು. ಈಗ ಪೋಷಕರು, ಶಿಕ್ಷಕರಿಂದಲೇ ಬೇಡಿಕೆ ಬಂದಿದೆ ಎಂದರು ತಂಡದ ಅವಿನಾಶ್‌. ಕಾರ್ಯಕ್ರಮದ ಮುಖ್ಯಸ್ಥ ಆ್ಯಂಟನಿ ದಾಸ್‌, ನಿರ್ದೇಶಕ ನರಸಿಂಹ ಸ್ವಾಮಿ ಅವರ ವಿಶೇಷ ಆಸಕ್ತಿ ಇಲ್ಲಿ ಕೆಲಸ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.