ಮುಂಬೈ: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯ (ಕೆಬಿಸಿ) 13 ನೇ ಆವೃತ್ತಿಯಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದ್ದ ರಾಜಸ್ತಾನದ ರೈಲ್ವೆ ಉದ್ಯೋಗಿ ದೇಶ್ ಬಂಧು ಪಾಂಡೆ ಅವರಿಗೆ ಸಂಕಷ್ಟ ಎದುರಾಗಿದೆ.
ಪಾಂಡೆ ಅವರು ಕೆಬಿಸಿಯಲ್ಲಿ ಭಾಗವಹಿಸಬೇಕು ಹಾಗೂ ಅಮಿತಾಭ್ ಬಚ್ಚನ್ಅವರನ್ನು ಭೇಟಿಯಾಗಬೇಕು ಎಂದು ಬಹಳ ದಿನಗಳ ಕನಸು ಹೊಂದಿದ್ದರಂತೆ. ಅದೃಷ್ಟಕ್ಕೆ ಕೆಬಿಸಿಯಲ್ಲಿ ಭಾಗವಹಿಸಲು ಅವರಿಗೆ ಅವಕಾಶ ಸಿಕ್ಕಿತ್ತು. ಸರ್ಕಾರಿ ಉದ್ಯೋಗಿಯಾಗಿದ್ದರಿಂದ ಅವರು ಕೆಬಿಸಿಯಲ್ಲಿ ಭಾಗವಹಿಸಲು ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ರಜೆ ಮಂಜೂರಾಗಿರಲಿಲ್ಲ.
ಅದಾಗ್ಯೂ ಪಾಂಡೆ ಅವರು ಕೆಬಿಸಿಯಲ್ಲಿ ಭಾಗವಹಿಸಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿ 3.40,000 ರೂಪಾಯಿ ಗೆದ್ದಿದ್ದರು. ಆದರೆ, ರೈಲ್ವೆ ಇಲಾಖೆ ಅಧಿಕಾರಿಗಳು ಇದೀಗ ಪಾಂಡೆ ಅವರಿಗೆ ನೋಟಿಸ್ ನೀಡಿದ್ದು, ಕೆಲಸದಲ್ಲಿ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ರೈಲ್ವೆಯ ಕೆಲ ಉದ್ಯೋಗಿಗಳು ಪ್ರತಿಭಟನೆ ಕೂಡ ನಡೆಸಿರುವುದು ವರದಿಯಾಗಿದೆ.
ಕಳೆದ ಆ 23 ರಿಂದ ಕೆಬಿಸಿಯ 13 ನೇ ಆವೃತ್ತಿ ಶುರುವಾಗಿದ್ದು, ಎಂದಿನಂತೆ ಅಮಿತಾಭ್ಬಚ್ಚನ್ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.