ADVERTISEMENT

ಇನ್ನು ಎರಡು ವಾರ ಅಷ್ಟೇ ಕಣ್ರೀ...!

ಮನೇಲಿ ಪಾತ್ರೆ ತೊಳೆಯೋದು ನಿಲ್ಸಲ್ಲ!

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಟಿ.ಎನ್‌. ಸೀತಾರಾಮ್‌
ಟಿ.ಎನ್‌. ಸೀತಾರಾಮ್‌   

‘ಮೂರು ವಾರಗಳ ಕ್ವಾರಂಟೈನ್‌ನಲ್ಲಿ ಒಂದು ವಾರ ಮುಗಿದೇಹೋಯಿತು. ಇನ್ನು ಎರಡು ವಾರ ಅಷ್ಟೆ. ಜನರಿಗೆ ಹರ್ಡ್‌ ಇಮ್ಯುನಿಟಿ ಬಂದು ಬಿಡುತ್ತದೆ. ಅಂದರೆ ನೈಸರ್ಗಿಕವಾಗಿ ನಮ್ಮ ರೋಗಪ್ರತಿರೋಧ ಶಕ್ತಿ ಹೆಚ್ಚಾಗುತ್ತದೆ. ಅದು ಹೆಚ್ಚಾದರೆ ಕೊರೊನಾ ವೈರಸ್‌ ತಗುಲಿದರೂ ಏನೂ ಅಪಾಯ ಆಗೋದಿಲ್ಲ. ಎಲ್ಲ ವೈರಸ್‌ಗಳಿಗೂ ಒಂದು ಅಂತ್ಯ ಎನ್ನುವುದು ಇರುತ್ತದೆ. ಕೋವಿಡ್‌ 19 ಕೂಡಾ ಶಕ್ತಿಗುಂದಿ ಹೋಗುತ್ತದೆ’ ಎಂದರು ಟಿ.ಎನ್‌.ಸೀತಾರಾಮ್‌. ‘ಮಗಳು ಜಾನಕಿ’ಯ ವಕೀಲ ಪಾತ್ರದಲ್ಲಿ ನಿಸೂರಾಗಿ ಮಾತನಾಡಿದಂತೆಯೇ ಅವರ ಮಾತು ಮುಂದುವರಿದಿತ್ತು.

‘ಲಾಕ್‌ಡೌನ್‌ ಅನ್ನು ನಮ್ಮ ಜನ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಕೆಲವು ಲೋಪದೋಷಗಳು ಇರಬಹುದು. ಮೊದಲ ಬಾರಿ ಇಂಥದ್ದೊಂದು ಬಿಕ್ಕಟ್ಟು ಎದುರಿಸುವಾಗ ಇದು ಸಹಜವೇ. ಈ ಲಾಕ್‌ಡೌನ್‌ನಿಂದ ಸ್ವಂತದ ಆರೋಗ್ಯವೂ ಸುಧಾರಿಸುತ್ತದೆ, ಸಮಾಜದ ಆರೋಗ್ಯವೂ. ಬೆಂಗಳೂರಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ. ಗ್ಲೋಬಲ್‌ ವಾರ್ಮಿಂಗ್‌ ಕೂಡಾ ಗಮನಾರ್ಹವಾಗಿ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ತಿಂಗಳೂ ಹೀಗೆ ಮೂರು ದಿನ ಲಾಕ್‌ಡೌನ್‌ ಮಾಡಿದರೆ ಇಲ್ಲಿನ ಪರಿಸರ ಖಂಡಿತಾ ಸುಧಾರಿಸಬಹುದು.’

‘ಹೌದು, ಹೀಗೆ ಎಂಟು ದಿನ ಮನೆಯೊಳಗೇ ಇದ್ದರೆ ಡಿಪ್ರೆಷನ್‌ ಶುರುವಾಗುತ್ತದೆ. ಏಕಾಂತದಲ್ಲಿ ಮೊದಲು ಹೆದರಿಕೆ ಆದರೂ ಮನುಷ್ಯ ತನ್ನ ಒಳಗಿನ ಜಗತ್ತಿಗೆ ಮುಖಾಮುಖಿ ಆಗುತ್ತಾನೆ, ನಮ್ಮ ಮೇಲೆ ನಮಗೆ ವಿಶ್ವಾಸ ಹೆಚ್ಚಾಗುತ್ತದೆ. ಒಂದು ದೃಷ್ಟಿಯಲ್ಲಿ ಅದೂ ಒಳ್ಳೆಯದೇ..’

ADVERTISEMENT

ಟಿಎನ್ನೆಸ್‌ ಪ್ರಕಾರ, ಕೊರೊನಾದ ಒಟ್ಟಾರೆ ಸಾವುನೋವುಗಳನ್ನು ಗಮನಿಸಿದಾಗ ಅದೇನೂ ಅಂತಹ ಗಾಬರಿ ಹುಟ್ಟಿಸುವ ಸಂಗತಿಯಲ್ಲ. ‘ಒಂದು ಲಕ್ಷದ 63 ಸಾವಿರ ಜನ ಗುಣಮುಖರಾಗಿ ಬಂದಿರುವುದನ್ನು ನಾವು ಗಮನಿಸುವುದೇ ಇಲ್ಲ. ಸತ್ತಿರೋದು ಮೂವತ್ತು ಸಾವಿರ ಜನ. ಒಟ್ಟು 5–6 ಲಕ್ಷ ಜನರಿಗೆ ಸೋಂಕು ತಗುಲಿದರೂ ಅದನ್ನು ಎದುರಿಸುವಲ್ಲಿ ಜಗತ್ತು ಮುನ್ನಡೆದಿದೆ’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

ಟಿಎನ್ನೆಸ್‌ ಮಾತು ಮುಂದುವರಿದೇ ಇತ್ತು. ಅಮೆರಿಕ, ಡೊನಾಲ್ಡ್‌ ಟ್ರಂಪ್‌, ಕೊರೊನಾ...! ಅದೇನೇ ಇದ್ದರೂ ‘ಕುಛ್‌ ಕರೋನಾ’ ಎನ್ನುವ ಅವರ ಧೋರಣೆ ಮಾತ್ರ ಹಾಗೆಯೇ ಇದೆ.

ಮನೆಯಲ್ಲಿ ಕುಳಿತು ಏನೇನು ಮಾಡುತ್ತಿದ್ದೀರಿ..?

l‘ಮಗಳು ಜಾನಕಿ’ಯ ಈಗಾಗಲೆ ಶೂಟ್‌ ಮಾಡಿರೋ ಎಪಿಸೋಡ್‌ಗಳು ಇನ್ನಷ್ಟಿವೆ. ಅದನ್ನು ಎಡಿಟ್‌ ಮಾಡುವ ಕೆಲಸ ಬೆಳಿಗ್ಗೆ ಎರಡು ಗಂಟೆ ನಡೆಯುತ್ತದೆ. ಆದರೆ ಟಿವಿ ಯವರು ಶುಕ್ರವಾರದಿಂದ ಹೊಸ ಎಪಿಸೋಡ್‌ಗಳ ಬದಲು ಹಳೆಯ ಕೆಲವು ಎಪಿಸೋಡ್‌ಗಳನ್ನೇ ತೋರಿಸಲಿದ್ದಾರೆ. ಅವರಿಗೂ ಜಾಹೀರಾತು ಮತ್ತಿತರ ತಾಪತ್ರಯಗಳು ಇವೆಯಲ್ಲ.. ಲಾಕ್‌ಡೌನ್‌ ಮುಗಿದ ಬಳಿಕ ಹೊಸ ಎಪಿಸೋಡ್‌ ಕಂಟಿನ್ಯೂ ಮಾಡುತ್ತೇವೆ. ಅದರ ಮುಂದಿನ ಸೀನ್‌ಗಳನ್ನು ಬರೆಯುವ ಕೆಲಸವನ್ನೂ ಈಗ ರಜೆಯಲ್ಲಿ ಮಾಡುತ್ತೇನೆ.

lಮನೇಲಿ ಈಗ ನಾನೇ ಪಾತ್ರೆ ತೊಳೆಯುತ್ತಿದ್ದೇನೆ ಸ್ವಾಮೀ! ಮನೆಯಾಕೆಗೆ ಎಷ್ಟೊಂದು ಕೆಲಸ ಇದೆ ನೋಡಿ! ಲಾಕ್‌ಡೌನ್‌ ಮುಗಿದ ಬಳಿಕ ಕೆಲಸದವರು ಬಂದರೂ ಪಾತ್ರೆ ತೊಳೆಯುವುದನ್ನು ನಾನೇ ಮುಂದುವರಿಸಬೇಕು ಅಂತಿದ್ದೇನೆ.

lರಜೆಯಲ್ಲಿ ಕುಳಿತು ಹಲವಾರು ಸಿನಿಮಾಗಳನ್ನು ನೋಡಿದೆ. ತಮಿಳಿನ ಅಸುರನ್‌ ನೋಡಿದೆ. ಮಲಯಾಳದಲ್ಲಿ ಎಷ್ಟೊಂದು ಒಳ್ಳೆಯ ಸಿನಿಮಾಗಳಿವೆ. ಹೆಲನ್‌ ನಿಜಕ್ಕೂ ಚೆನ್ನಾಗಿದೆ. ಯೂರೋಪಿಯನ್‌ ಕಾನ್ಸೆಪ್ಟ್‌. ಆಕೆ ದೊಡ್ಡ ಫ್ರಿಜ್‌ ಒಂದರಲ್ಲಿ ಸಿಕ್ಕುಬೀಳುತ್ತಾಳೆ. ಅಪ್ಪ–ಮಗಳ ಬಾಂಧವ್ಯವನ್ನು ನಿರ್ದೇಶಕ ಉತ್ತಮವಾಗಿ ತೋರಿಸಿದ್ದಾನೆ. ದಿ ಫ್ಯಾಮಿಲಿ ಮ್ಯಾನ್‌ ಅಂತ ಒಂದು ಸರಣಿ. ಅಮೆಜಾನ್‌ ಪ್ರೈಮ್‌ನಲ್ಲಿ... ಮನೋಜ್‌ ಬಾಜಪೇಯಿ ಮತ್ತು ಪ್ರಿಯಾಮಣಿ ಅಭಿನಯ. ಹತ್ತು ಎಪಿಸೋಡ್‌ ಅದ್ಭುತವಾಗಿದೆ. ಆತನೊಬ್ಬ ಸ್ಪೈ. ಗೂಢಚರ್ಯೆ ಸಂಸ್ಥೆ ರಾ ದ ಏಜೆಂಟ್‌. ಮನೆಯವರಿಗೆ ಗೊತ್ತಿಲ್ಲ. ರಹಸ್ಯ ಹೇಳೋ ಹಾಗಿಲ್ಲ.. ಮನೆಯ ತಾಪತ್ರಯಗಳ ಮಧ್ಯೆ ಕುಟುಂಬ ನಾಶವಾಗುತ್ತದೆ.

lಪುಸ್ತಕ ಓದೋದಂತೂ ಇದ್ದೇ ಇದೆ. ಈಗ ವಸುಧೇಂದ್ರ ಬರೆದಿರುವ ಕಾದಂಬರಿ ‘ತೇಜೋ ತುಂಗಭದ್ರಾ’ ಓದುತ್ತಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.