ಹತ್ತು ವರ್ಷಗಳಿಂದ ಐಎಎಸ್ ಅಧಿಕಾರಿಯಾಗುವ ಕನಸು ಇಟ್ಟುಕೊಂಡು ಹಗಲು, ರಾತ್ರಿ ಓದುತ್ತಿದ್ದ ಹುಡುಗಿ ಈಗ ಇದ್ದಕ್ಕಿದ್ದಂತೆ ಸ್ಟಾರ್ ಆಗಿಜನಮನ್ನಣೆ ಗಳಿಸಿದ್ದಾರೆ. ಇದು ಕಥೆಯಲ್ಲ; ‘ಜೀ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ಅವರ ಬದುಕಿನ ಯಶೋಗಾಥೆ.
ಮೇಘಾ ಅವರಿಗೆ ಬಣ್ಣದ ಲೋಕವು ಹೊಸದು.ನಟನೆ ಗೊತ್ತಿರಲಿಲ್ಲ. ಕ್ಯಾಮೆರಾ ಎದುರಿಸುವ ಸಂದರ್ಭ ಎದುರಾಗಿದ್ದೇ ಮೊದಲ ಬಾರಿಗೆ. ಶಾಲೆಗೆ ಹೋಗುವ ದಿನಗಳಿಂದಲೂ ಐಎಎಸ್ ಅಧಿಕಾರಿಯಾಗುವ ಕನಸು ಇಟ್ಟುಕೊಂಡಿದ್ದರು. ಇನ್ನೇನು ಎಂಬಿಎ ಪರೀಕ್ಷೆ ಬರೆಯುವ ಉತ್ಸಾಹದಲ್ಲಿದ್ದರು. ಅಷ್ಟರಲ್ಲಿ ಅವರ ಜೀವನದ ದಿಕ್ಕೇ ಬದಲಾಯಿತು. ಈಗ ಅವರು ‘ಧಾರಾವಾಹಿ’ ಪ್ರೇಮಿಗಳ ನೆಚ್ಚಿನ ನಟಿ. ಅವರು ‘ಸಿನಿಮಾ ಪುರವಣಿ’ಯೊಂದಿಗೆ ತಮ್ಮ ಕಿರುತೆರೆಯ ಆಕಸ್ಮಿಕ ಜರ್ನಿಯ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
‘ನನಗೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಒಂದು ಆಕಸ್ಮಿಕ ಘಟನೆ ಎಂದು ಅವರು ಹೇಳುತ್ತಾರೆ. ‘ಜೀ ಕನ್ನಡದ ರಾಘವೇಂದ್ರ ಹುಣಸೂರು ಅವರು ನನ್ನ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ನೋಡಿ, ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರು, ನನಗೆ ಆ ಕ್ಷಣ ನಂಬಲೇ ಆಗಲಿಲ್ಲ. ಅನಿರುದ್ಧ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅಷ್ಟು ಒಳ್ಳೆಯ ನಟರೊಂದಿಗೆ ನಟಿಸುವ ಅವಕಾಶ ಒಂದು ಕಡೆಯಾದರೆ, ಇನ್ನೊಂದು ಕಡೆ ನನ್ನ ಪರೀಕ್ಷೆ ಹತ್ತಿರ ಇತ್ತು. ಹತ್ತಾರು ವರ್ಷಗಳಿಂದ ಕಂಡ ಕನಸನ್ನು ಬಿಡುವುದು ಹೇಗೆ ಎಂಬ ಗೊಂದಲದಲ್ಲಿದ್ದೆ. ಆದರೆ ಧಾರಾವಾಹಿಗಾಗಿ ಪರೀಕ್ಷೆ ಮುಗಿಯುವವರೆಗೆ ಕಾಯುವುದಾಗಿ ಹೇಳಿದ್ದರಿಂದ ನನಗೆ ಈ ಅವಕಾಶ ಒಲಿಯಿತು’ ಎನ್ನುತ್ತಾರೆ ಮೇಘಾ.
‘ಕ್ಯಾಮೆರಾ ಎದುರಿಸುವ ಅನುಭವ ಇಲ್ಲದಿದ್ದರೂ ಆತ್ಮವಿಶ್ವಾಸದಿಂದ ಕೆಲಸ ಮಾಡಿದೆ. ಧಾರಾವಾಹಿ ಹಾಗೂ ಜೀ ಕನ್ನಡ ತಂಡಕ್ಕೆ ನನ್ನ ಮೇಲಿದ್ದ ನಂಬಿಕೆಯೇ ಎಲ್ಲವನ್ನೂ ಮಾಡಿಸಿತು. ಪಾತ್ರಕ್ಕೆ ನಾನು ಸರಿಯಾಗಿ ಹೊಂದುತ್ತಿದ್ದೇನೆ ಎಂದು ಅವರು ನಂಬಿದ್ದರು. ಮುಗ್ಧತೆ ಇರುವ ಹೊಸ ಮುಖ ಹಾಗೂ ಧ್ವನಿಯ ಹುಡುಕಾಟದಲ್ಲಿ ಇದ್ದರು. ನಾನು ಇದನ್ನು ನಟನೆ ಎಂದುಕೊಳ್ಳದೇ ಸಹಜವಾಗಿ ಅಭಿನಯಿಸಿದೆ. ಈ ಧಾರಾವಾಹಿಯಲ್ಲಿ ನನ್ನದೇ ಧ್ವನಿ ಕೊಟ್ಟಿದ್ದೇನೆ ಎಂದು ಹೇಳಿದರೂ ತುಂಬಾ ಜನರು ನಂಬುತ್ತಿಲ್ಲ. ಎಲ್ಲರಿಗೂ ನನ್ನ ಧ್ವನಿ ತುಂಬಾ ಇಷ್ಟ ಆಗಿದೆ’ ಎಂದು ಸಂತಸ ಹಂಚಿಕೊಂಡರು.
ನಿರೀಕ್ಷೆ ಚಿಕ್ಕದು: ‘ಧಾರಾವಾಹಿಯಿಂದ ನನ್ನ ನಿರೀಕ್ಷೆ ದೊಡ್ಡದಿಲ್ಲ. ಆರಂಭದಲ್ಲಿ ನಾನು ನಟಿಸುತ್ತೀನಾ ಎಂಬ ಪ್ರಶ್ನೆ ಕಾಡಿತ್ತು. ಒಂದೆರಡು ಸಂಚಿಕೆ ಪ್ರಸಾರವಾಗುವವರೆಗೂ ನನ್ನ ನಟನೆ ಹೇಗಿರಬಹುದು ಎಂಬ ಕುತೂಹಲ ನನಗೆ ಇತ್ತು. ಜನರು ಸ್ವೀಕರಿಸಿದ ರೀತಿ ಖುಷಿಯಾಯಿತು. ಎಲ್ಲವೂ ಒಂದೇ ಕ್ಷಣದಲ್ಲಿ ಆಗಿಹೋಯಿತು ಎನಿಸುತ್ತಿದೆ. ನಿನ್ನೆ ನಾನು ಕೇವಲ ಎಂಬಿಎ ವಿದ್ಯಾರ್ಥಿ, ಆದರೆ ಇವತ್ತು ನನ್ನ ಹೆಸರಿನಲ್ಲಿ ಹತ್ತಾರು ಫ್ಯಾನ್ ಪೇಜ್‌ಗಳು ಇವೆ. ಸಾವಿರಾರು ಅಭಿಮಾನಿಗಳು ಇದ್ದಾರೆ ಎನ್ನುವುದು ರಾತ್ರಿ ಕಂಡ ಕನಸಿನಂತೆ ಕಾಣುತ್ತಿದೆ’ ಎನ್ನುತ್ತಾರೆ ಮೇಘಾ.
ಪೋಷಕರ ಬೆಂಬಲ ದೊಡ್ಡದು: ‘ಮೊದಲಿಗೆ ಅಪ್ಪ, ಅಮ್ಮನಿಗೂ ಗೊಂದಲ ಇತ್ತು. ಓದನ್ನು ಬಿಟ್ಟು ಧಾರಾವಾಹಿ ಮಾಡುವುದು ಹೇಗೆ ಎಂಬ ಯೋಚನೆ ಇತ್ತು. ಆದರೆ ಪರೀಕ್ಷೆ ಮುಗಿದ ಮೇಲೆ ಶೂಟಿಂಗ್ ಇದ್ದಿದ್ದರಿಂದ ಒಪ್ಪಿದರು. ಅಲ್ಲದೇ ನಾನು ನಟಿಸಬಲ್ಲೆ ಎಂಬುದು ಅವರಿಗೂ ಗೊತ್ತಿರಲಿಲ್ಲ. ಈಗ ಎಲ್ಲರೂ ‘ಜೊತೆ ಜೊತೆಯಲಿ’ ಅನು ಎಂದು ಕರೆದಾಗ ಅವರೂ ಖುಷಿಪಡುತ್ತಾರೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಐಎಎಸ್ ಕನಸು: ‘ಹತ್ತು ವರ್ಷಗಳಿಂದ ಕಂಡ ಐಎಎಸ್ ಕನಸನ್ನು ಇಷ್ಟು ಬೇಗ ಮರೆಯಲು ಸಾಧ್ಯವೇ ಇಲ್ಲ. ಬಿಡುವಾದಾಗಲೆಲ್ಲ ಓದುತ್ತಿದ್ದೇನೆ. ಖಂಡಿತಾ ಪರೀಕ್ಷೆ ಬರೆದು ಅಧಿಕಾರಿಯಾಗುವ ಹಂಬಲ ಇದೆ. ನಟಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಜೊತೆಗೆ ನನ್ನ ಕನಸುಗಳನ್ನೂ ಕೈಬಿಡುವುದಿಲ್ಲ’ ಎಂಬ ಆತ್ಮವಿಶ್ವಾಸದ ನುಡಿ ಮೇಘಾ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.