ನವದೆಹಲಿ: ತಬ್ಲೀಗಿ ಜಮಾತ್ ಸಂಘಟನೆಯನ್ನು ಗುರಿಯಾಗಿಸಿ ಸುದ್ದಿ ಪ್ರಸಾರ ಮಾಡಿರುವ ಕನ್ನಡದ ಎರಡು ಖಾಸಗಿ ಸುದ್ದಿ ವಾಹಿನಿಗಳ ಆಡಳಿತ ಮಂಡಳಿಗಳಿಗೆ ದಂಡ ವಿಧಿಸಿ ಆದೇಶ ಹೊರಡಿಸಿರುವ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್ಎ), ಈ ಸಂಬಂಧ ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ಎಚ್ಚರಿಕೆ ನೀಡಿದೆ.
ಇಲ್ಲಿನ ನಿಜಾಮುದ್ದಿನ್ ಮರ್ಕಜ್‌ನಲ್ಲಿ 2020ರ ಮಾರ್ಚ್ ತಿಂಗಳು ನಡೆದಿದ್ದ ತಬ್ಲೀಗಿ ಜಮಾತ್‌ನ ಸಮಾವೇಶ ಹಾಗೂ ಅದರಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಸದಸ್ಯರೇ ದೇಶದಾದ್ಯಂತ ಕೊರೊನಾ ಸೋಂಕು ಹರಡಲು ಕಾರಣ ಎಂಬ ಧಾಟಿಯಲ್ಲಿ ಬಿಂಬಿಸಲಾದ ಸುದ್ದಿಯನ್ನು ಪ್ರಸಾರ ಮಾಡಿರುವ ಕನ್ನಡದ ‘ನ್ಯೂಸ್–18’ ಸುದ್ದಿ ವಾಹಿನಿಗೆ ₹ 1 ಲಕ್ಷ, ‘ಸುವರ್ಣ ನ್ಯೂಸ್’ ವಾಹಿನಿಗೆ ₹ 50,000 ದಂಡ ವಿಧಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪ್ರಾಧಿಕಾರವು ಜೂನ್ 16ರಂದು ಈ ಆದೇಶ ಹೊರಡಿಸಿದ್ದು, 7 ದಿನಗಳೊಳಗೆ ದಂಡ ಪಾವತಿಸುವಂತೆ ಎರಡೂ ಸಂಸ್ಥೆಗಳಿಗೆ ಸೂಚಿಸಿದೆ.
ಆಧಾರರಹಿತ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಜೂನ್ 23ರಂದು ರಾತ್ರಿ 9ಕ್ಕೆ ಪ್ರಧಾನ ಸುದ್ದಿ ಪ್ರಸಾರವಾಗುವ ಮುನ್ನ ಬೇಷರತ್ ಕ್ಷಮೆ ಯಾಚಿಸುವಂತೆಯೂ ‘ನ್ಯೂಸ್–18’ ವಾಹಿನಿಗೆ ಸೂಚಿಸಲಾಗಿದೆ.
ಯೂಟ್ಯೂಬ್, ವೆಬ್‌ಸೈಟ್ ಮತ್ತಿತರ ಕೊಂಡಿಗಳಲ್ಲಿ ಈ ಸುದ್ದಿಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ವಿಡಿಯೋ ಮತ್ತು ಸುದ್ದಿ ತುಣುಕುಗಳನ್ನು ತೆಗೆದು ಹಾಕುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ.
ತಬ್ಲೀಗಿ ಜಮಾತ್ ಸಂಘಟನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಲು ಬಂದಿದ್ದ ವ್ಯಕ್ತಿಗಳು ಆಕ್ಷೇಪಾರ್ಹ ಅಭಿಪ್ರಾಯ ಮಂಡಿಸಿದ್ದು, ಅಂಥ ವ್ಯಕ್ತಿಗಳನ್ನು ಮತ್ತೆ ಚರ್ಚೆಗೆ ಆಹ್ವಾನಿಸದಂತೆ ಇಂಗ್ಲಿಷ್‌ನ ‘ಟೈಮ್ಸ್ ನೌ’ ಸುದ್ದಿ ವಾಹಿನಿಗೆ ಎಚ್ಚರಿಕೆ ನೀಡಲಾಗಿದೆ.
ತಬ್ಲೀಗಿ ಜಮಾತ್ ಕುರಿತು ಪ್ರಸಾರವಾದ ಸುದ್ದಿ ಹಾಗೂ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿಯು ಆಕ್ಷೇಪಾರ್ಹವಾಗಿತ್ತು. ವರದಿಯಲ್ಲಿ ಬಳಸಲಾದ ಭಾಷೆ ಪೂರ್ವಗ್ರಹದಿಂದ ಕೂಡಿತ್ತು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮೂಲದ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ (ಸಿಎಎಚ್ಎಸ್) ಸಂಸ್ಥೆಯು ಈ ಮೂರೂ ಖಾಸಗಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದ ದ್ವೇಷಪೂರಿತ ಸುದ್ದಿಗಳ ವಿರುದ್ಧ ಎನ್‌ಬಿಎಸ್ಎಗೆ ದೂರು ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.