ಮುಂಬೈ: ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್‌ಗೆ ಸೇರಿದ ವಾಹಿನಿಯಲ್ಲಿ ಪ್ರಸಾರವಾದ ನೃತ್ಯ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರು ಮಗುವಿಗೆ ಅಸಭ್ಯ ಮತ್ತು ಅಶ್ಲೀಲ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ವಾಹಿನಿಗೆ ನೋಟಿಸ್ ನೀಡಿದೆ.
2019ರಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ 'ಸೂಪರ್ ಡ್ಯಾನ್ಸರ್–3' ಶೋ ಪ್ರಸಾರವಾಗಿತ್ತು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಈ ಶೋನ ಸಂಚಿಕೆಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸ್ಪರ್ಧಿಗೆ ಸೂಕ್ತವಲ್ಲದ ಪ್ರಶ್ನೆ ಕೇಳಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ, 'ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನ 'ಸೂಪರ್ ಡ್ಯಾನ್ಸರ್ –3' ಎಂಬ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು 'ಜೆಮ್ಸ್ ಆಫ್ ಬಾಲಿವುಡ್' ಎಂಬ ಸಂಸ್ಥೆ ಆಯೋಗಕ್ಕೆ ದೂರು ನೀಡಿತ್ತು. ಪರಿಶೀಲನೆ ವೇಳೆ ಎನ್‌ಸಿಪಿಸಿಆರ್‌ನ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ನೋಟಿಸ್ ನೀಡಿದ್ದೇವೆ' ಎಂದು ಹೇಳಿದರು.
ಆಯೋಗದ ನೋಟಿಸ್‌ನಲ್ಲಿ ಏನಿದೆ?
ಟ್ವಿಟರ್‌ನಲ್ಲಿ ಹಂಚಿಕೆಯಾದ ವಿಡಿಯೊವೊಂದರಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾದ 'ಸೂಪರ್ ಡ್ಯಾನ್ಸರ್ –3' ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಯ ಬಳಿ ತೀರ್ಪುಗಾರರು, ಆತನ ಪೋಷಕರ ಬಗ್ಗೆ ಅಸಭ್ಯ ಮತ್ತು ಅಶ್ಲೀಲ ಪ್ರಶ್ನೆಗಳನ್ನು ಕೇಳಿರಿವುದು ಕಂಡುಬಂದಿದೆ.
ಮಗುವಿಗೆ ಕೇಳಲಾದ ಎಲ್ಲ ಪ್ರಶ್ನೆಗಳು ಅಸಭ್ಯ ಮತ್ತು ಮಕ್ಕಳಿಗೆ ಕೇಳುವಂತಹ ಪ್ರಶ್ನೆಗಳಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ– 2000 ಹಾಗೂ ಮನರಂಜನಾ ಉದ್ಯಮದಲ್ಲಿ ಮಕ್ಕಳ ಮತ್ತು ಹದಿಹರೆಯದವರ ಭಾಗವಹಿಸುವಿಕೆ ಕುರಿತ ಎನ್‌ಸಿಪಿಸಿಆರ್ ಆಯೋಗದ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ನೋಟಿಸ್ ನೀಡಿದ ಏಳು ದಿನಗಳಲ್ಲಿ ಈ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಆಯೋಗಗಕ್ಕೆ ತಿಳಿಸಬೇಕು. ಇಂತಹ ಸೂಕ್ತವಲ್ಲದ ವಿಷಯಗಳು ಪ್ರಸಾರವಾಗದಂತೆ ಎಚ್ಚರಿಕೆವಹಿಸಬೇಕು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.