ಭಿನ್ನವಾದ ಕಥೆಯೊಂದನ್ನು ಹೊತ್ತು ಉದಯ ಟಿವಿಯಲ್ಲಿ ‘ಗಂಗೆ ಗೌರಿ’ ಎನ್ನುವ ಹೊಸ ಧಾರಾವಾಹಿಯೊಂದು ಡಿ.11ರಿಂದ ಆರಂಭವಾಗಲಿದೆ.
ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಇರುವವರು ‘ಗಂಗೆ ಗೌರಿ’ ಎನ್ನುವ ಅಕ್ಕತಂಗಿ. ಯಾರಿಗೂ ಜಗ್ಗದ, ಬಗ್ಗದ, ಮಾತಿಗಿಂತ ಏಟೇ ಸರಿ ಎನ್ನುವ ಹುಡುಗಿ ತಂಗಿ ‘ಗಂಗೆ’ಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಸ್ವಭಾವದ ಅಕ್ಕ ‘ಗೌರಿ’. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಪ್ರೀತಿ. ಇವರ ನಡುವೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಆಗುವ ಬದಲಾವಣೆಗಳು ಏನು? ಎನ್ನುವುದೇ ಕಥಾಹಂದರ ಎಂದಿದೆ ತಂಡ. ಕಳಸದ ಹಸಿರಿನ ನಡುವೆ, ಮಲೆನಾಡ ಸುಂದರ ಹಳ್ಳಿಯಲ್ಲಿ ಇದರ ಚಿತ್ರೀಕರಣ ನಡೆದಿದೆ. ಧಾರಾವಾಹಿಯಲ್ಲಿ ಕನ್ನಡ ಭಾವಗೀತೆಗಳನ್ನು ಬಳಸಿದ್ದು, ಕನ್ನಡತನವೇ ಇದರ ವಿಶೇಷ ಎಂದಿದೆ ತಂಡ.
ಡಿಸೆಂಬರ್ 11ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಇದು ಪ್ರಸಾರವಾಗಲಿದೆ. ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣ ಮಾಡುತ್ತಿದ್ದು, ವಿನೋದ್ ದೋಂಡಾಳೆ ನಿರ್ದೇಶನದಲ್ಲಿ ಇದು ಮೂಡಿಬರುತ್ತಿದೆ. ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ, ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಹೀಗೆ ದೊಡ್ಡ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.