ADVERTISEMENT

‘ಕಾಸ್ಟಿಂಗ್‌ ಕೌಚ್‌’ ಅನುಭವದ ಬಗ್ಗೆ ಕಿರುತೆರೆ ನಟಿ ದಿವ್ಯಾಂಕ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2022, 10:25 IST
Last Updated 30 ಜನವರಿ 2022, 10:25 IST
ದಿವ್ಯಾಂಕ ತ್ರಿಪಾಠಿ (ಇನ್‌ಸ್ಟಾಗ್ರಾಂ ಚಿತ್ರ)
ದಿವ್ಯಾಂಕ ತ್ರಿಪಾಠಿ (ಇನ್‌ಸ್ಟಾಗ್ರಾಂ ಚಿತ್ರ)   

ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ (ಪಾತ್ರಕ್ಕಾಗಿ ಪಲ್ಲಂಗ) ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.

‘ಖತ್ರೋನ್ ಕೆ ಕಿಲಾಡಿ’ ಟಿವಿ ಶೋನಲ್ಲಿ ಕಾಣಿಸಿಕೊಂಡಿರುವ ದಿವ್ಯಾಂಕ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನೀವು ನಿರ್ದೇಶಕರೊಬ್ಬರ ಜೊತೆ ಸಮಯ ಕಳೆಯಬೇಕು. ಇದರಿಂದ ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದು ವ್ಯಕ್ತಿಯೊಬ್ಬರು ತಮಗೆ ಆಫರ್‌ ನೀಡಿದ್ದರು’ ಎಂದು ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ.

ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಉದ್ಯಮದಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು ಹೇಳುವ ಮೂಲಕ ಕೆಲವರು ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತದೆ. ನನ್ನ ಬಳಿ ಹಣವೇ ಇಲ್ಲದ ಕಾಲವೊಂದಿತ್ತು. ಆದರೂ ನನ್ನ ಬಿಲ್‍ಗಳು, ಇಎಂಐಗಳನ್ನು ಇತ್ಯಾದಿಗಳನ್ನು ಪಾವತಿಸಬೇಕಾಗಿತ್ತು. ಆ ಸಮಯದಲ್ಲಿ ನನಗೆ ಸಾಕಷ್ಟು ಒತ್ತಡವಿತ್ತು. ಆಗ ನನಗೊಂದು ದೊಡ್ಡ ಆಫರ್‌ವೊಂದು ಬಂತು. ನೀವು ಈ ನಿರ್ದೇಶಕರ ಜೊತೆ ಸಮಯ ಕಳೆದರೆ, ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದರು. ಆದರೆ, ನಾನು ಯಾಕೆ ಇರಬೇಕು? ಎಂದು ಪ್ರಶ್ನಿಸಿಕೊಂಡೆ. ಇದರಿಂದಲೇ ನನ್ನ ಜೀವನ ಆಗುತ್ತದೆ ಎಂಬುವುದು ಸುಳ್ಳು, ಹಾಗೆ ನಾನು ಮಾಡಿದರೆ ನನ್ನ ಜೀವನವನ್ನು ಮಾರಾಟ ಮಾಡಿಕೊಂಡಂತೆ. ನಾನು ಯಾವಾಗಲೂ ತನ್ನ ಪ್ರತಿಭೆಯನ್ನು ನಂಬುತ್ತೇನೆ ಮತ್ತು ನನ್ನ ಸಾಮರ್ಥ್ಯದ ಆಧಾರದ ಮೇಲೆ ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತೇನೆ ಹೊರತು ನಿರ್ದೇಶಕನೊಂದಿಗೆ ಅಲ್ಲ ಎಂದು ಅರಿತುಕೊಂಡಿರುವುದಾಗಿ’ ತಿಳಿಸಿದ್ದಾರೆ.

ADVERTISEMENT

‘ಮೀಟೂ ಚಳುವಳಿಯಿಂದ ಇಂತಹ ಆಫರ್ ನೀಡುವ ಜನರು ಮತ್ತು ಉದ್ಯಮದಲ್ಲಿರುವ ಪ್ರತಿಯೊಬ್ಬರಿಗೂ ಈ ಕುರಿತಂತೆ ಮನವರಿಕೆಯಾಗಿದೆ. ಒಂದು ವೇಳೆ ಆಫರ್‌ಗಳನ್ನು ನೀವು ತಿರಸ್ಕರಿಸಿದರೆ ನಿಮ್ಮ ವೃತ್ತಿ ಜೀವನ ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕುವುದಕ್ಕೂ ಕೆಲವರು ಹಿಂಜರಿಯುವುದಿಲ್ಲ’ ಎಂದು ದಿವ್ಯಾಂಕ ಹೇಳಿಕೊಂಡಿದ್ದಾರೆ.

‘ಇದೆಲ್ಲಾ ನೋಡುತ್ತಿದ್ದರೆ ಆರಂಭದಲ್ಲಿ ನನಗೆ ತಮಾಷೆಯಾಗಿ ಕಾಣಿಸುತ್ತಿತ್ತು. ನನಗೆ ನನ್ನ ಪ್ರತಿಭೆ ಆಧಾರದ ಮೇಲೆ ಮೊದಲ ಬಾರಿಗೆ ಕೆಲಸ ಸಿಕ್ಕಿತು. ಸದ್ಯ ಹಾಗೆಯೇ ಮುಂದುವರಿಯುತ್ತಿದೆ’ ಎಂದು ಹೇಳಿದ್ದಾರೆ.

ದಿವ್ಯಾಂಕಾ ತ್ರಿಪಾಠಿ, ‘ಬಾನೂ ಮೈನ್ ತೇರಿ ದುಲ್ಹಾನ್’ (2006) ಟಿವಿ ಶೋ ಮೂಲಕ ಮನೆಮಾತಾಗಿದ್ದರು. ನಂತರ ಅವರು 'ಯೇ ಹೈ ಮೊಹಬ್ಬತೇನ್' ನಾಟಕದಲ್ಲಿ ಕಾಣಿಸಿಕೊಂಡಿದ್ದರು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.