ಅಪ್ಪ ಮಾಡಿದ ಪಾತ್ರವನ್ನೇ ಮಗ ಕೂಡ ನಿರ್ವಹಿಸುವುದು ದೃಶ್ಯ ಮಾಧ್ಯಮದಲ್ಲಿ ಅಪರೂಪ. ಅದರಲ್ಲೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಮುಖ ಚಿತ್ರವೆಂದು ಗುರುತಿಸುವ ‘ನಾಗರಹಾವು’ ಸಿನಿಮಾದ ಪ್ರಸಿದ್ಧ ‘ಚಾಮಯ್ಯ ಮೇಷ್ಟ್ರು’ ಪಾತ್ರವನ್ನು ಈಗ ಮತ್ತೆ ನಿರ್ವಹಿಸುವುದು ಸವಾಲಿನ ಕೆಲಸ.
1972ರಲ್ಲಿ ಬಿಡುಗಡೆಯಾದ ‘ನಾಗರಹಾವು’ ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರವನ್ನು ನಿಭಾಯಿಸಿದ್ದ ಕೆ.ಎಸ್. ಅಶ್ವತ್ಥ್ ಕನ್ನಡಿಗರ ಮನ ಗೆದ್ದಿದ್ದರು. ಈಗ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಪ್ರಸಾರವಾಗಿ ಜನಮನ ಗೆದ್ದಿರುವ ‘ಮಾಂಗಲ್ಯಂ ತಂತುನಾನೇನ’ ಧಾರವಾಹಿಯಲ್ಲಿ ಕೆ. ಎಸ್. ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಚಾಮಯ್ಯ ಮೇಷ್ಟ್ರಾಗಿ ಕಾಣಿಸಿಕೊಳ್ಳಲಿದ್ದಾರೆ!
ಈ ಧಾರವಾಹಿಯ ನಾಯಕ ತೇಜಸ್ವಿಯೇ ಇಲ್ಲಿ ಭುಸುಗುಡುವ ನಾಗರಹಾವು. ನಾಯಕಿ ಶ್ರಾವಣಿಯದ್ದು ಇಲ್ಲಿ ದ್ವಿಪಾತ್ರ. ರಾಮಾಚಾರಿ ಪ್ರೀತಿಸುವ ಮಾರ್ಗರೇಟ್ ಮತ್ತು ಅಲಮೇಲು ಈ ಎರಡೂ ಪಾತ್ರಗಳನ್ನು ‘ಮಾಂಗಲ್ಯಂ ತಂತುನಾನೇನ’ದ ನಾಯಕಿ ಶ್ರಾವಣಿ ನಿರ್ವಹಿಸಲಿದ್ದಾರೆ.
ತ.ರಾ.ಸು ಅವರ ಕಾದಂಬರಿ ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ಈ ಚಿತ್ರದ ಆಯ್ದ ಭಾಗಗಳನ್ನು ಕಿರುತೆರೆಯಲ್ಲಿ ಮರುಸೃಷ್ಟಿ ಮಾಡುವ ಹೊಚ್ಚ ಹೊಸ ಪ್ರಯತ್ನವನ್ನು ಕಲರ್ಸ್ ಸೂಪರ್ ವಾಹಿನಿ ಮಾಡುತ್ತಿದೆ. ಧಾರವಾಹಿಯ ಕತೆಯಲ್ಲಿ ಚರಿತ್ರೆಯನ್ನು ಬೋಧಿಸುವ ಲೆಕ್ಚರರ್ ಆಗಿ ಶ್ರಾವಣಿ ಇರುತ್ತಾಳೆ. ವಿದ್ಯಾರ್ಥಿಯಾಗಿ ನಾಯಕ ಇರುತ್ತಾನೆ. ಈ ಸಂದರ್ಭದಲ್ಲಿ ‘ನಾಗರಹಾವು’ ಚಿತ್ರದ ಮರುಸೃಷ್ಟಿಯ ಸನ್ನಿವೇಶ ಬರುತ್ತದೆ.
‘ನಾಗರಹಾವು’ ಚಿತ್ರಗೀತೆಗಳಾದ ‘ಬಾರೇ ಬಾರೇ..’, ‘ಕನ್ನಡ ನಾಡಿನ ವೀರ ರಮಣಿಯ..’ ಮತ್ತು ‘ಕರ್ಪೂರದ ಗೊಂಬೆ ನಾನು..’ ಹಾಡುಗಳಿಗೆ ಈ ತಂಡ ಮರುರೂಪ ಕೊಟ್ಟಿರುವುದು ಆಸಕ್ತಿಕರ.
ಕನ್ನಡ ಚಲನಚಿತ್ರ ರಂಗದಒಂದು ಅಪೂರ್ವ ಚಿತ್ರವನ್ನು ಕಿರುತೆರೆಯಲ್ಲಿ ಮರುಸೃಷ್ಟಿ ಮಾಡುವುದು ಅತಿಕಷ್ಟ. ಕಲರ್ಸ್ ಸೂಪರ್ ವಾಹಿನಿಯ ಅಂಥದೊಂದು ಅಪೂರ್ವ ಪ್ರಯತ್ನಕ್ಕೆ ಕೈಹಾಕಿದೆ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಅವರಿಗೆ ಇದು ‘ಮಾಂಗಲ್ಯಮ್ ತಂತು ನಾನೇನಾ’ದ ಪುಟ್ಟ ಗೌರವದ ಕಾಣಿಕೆ. ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕೊಡುಗೆ.
‘ರಾಮಾಚಾರಿ ಇನ್ ಲವ್’ ಶೀರ್ಷಿಕೆಯಲ್ಲಿ ಇದೇ ಮಂಗಳವಾರ (ನ.5ರಿಂದ) ಪ್ರತಿ ರಾತ್ರಿ 7.30ಕ್ಕೆ ‘ಮಾಂಗಲ್ಯಂ ತಂತುನಾನೇನ’ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.