‘ಹೇ ಇವಳೇ ಅಲ್ವಾ ಕಳ್ಳಿ..!’ ‘ಮೇಡಂ, ನೀವೇ ತಾನೇ ಸೀರಿಯಲ್‍ನಲ್ಲಿ ಬರೋ ಕಳ್ಳಿ..’
‘ಹೀಗಂತಾ ಜನ ಗುರುತಿಸುತ್ತಿರೋದನ್ನು ಸಂಭ್ರಮಿಸಬೇಕೇ ಅನ್ನೋ ಗೊಂದಲದಲ್ಲಿದ್ದೇನೆ’ ಅಂತಾ ಮಾತಿನ ಮನೆಗೆ ಮುನ್ನುಡಿ ಬರೆದಿದ್ದು ರಶ್ಮಿತಾ ಚಂಗಪ್ಪ.
‘ಇವರು ಈಗ ಮಹಾರಾಣಿ ಅಂತಿದ್ದಾರೆ. ಅಯ್ಯೋ, ಅಲ್ಲಿ ಜನರು ನಿಮ್ಮನ್ನು ಕಳ್ಳಿ ಅಂತಿದಾರೆ, ಆದರೆ ನೀವು ನೋಡಿದರೆ ಮಹಾರಾಣಿ ಅಂತೀರಲ್ಲಾ..! ಸ್ವಲ್ಪ ಬಿಡಿಸಿ ಹೇಳಿ’ ಅಂದಿದ್ದಕ್ಕೆ ವೃತ್ತಾಂತವನ್ನು ಬಿಚ್ಚಿಟ್ಟರು.
‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಹೊಸದಾಗಿ ಶುರುವಾಗಿರುವ ‘ಮಹಾರಾಣಿ’ ಧಾರಾವಾಹಿಯ ಮಹಾರಾಣಿ ಇವರೇ. ರಶ್ಮಿತಾ ಮಹಾರಾಣಿಯ ಪಾತ್ರಧಾರಿ. ಅದಕ್ಕೊಂದು ಹಿನ್ನೆಲೆ ಬೇಕಲ್ವಾ.. ಹೀಗಾಗಿ ಹಳ್ಳಿ ಗೆಟಪ್‍ನಲ್ಲಿ ಬಬ್ಲಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮುಂದೆ ಮಹಾರಾಣಿಯ ಪಟ್ಟ ಅಲಂಕರಿಸುವವರಿದ್ದಾರೆ.
ಹಳ್ಳಿ ಹುಡುಗಿಗೂ, ಮಹಾರಾಣಿಗೂ ಎಲ್ಲಿಯದೆಲ್ಲಿಯ ಸಂಬಂಧ? ‘ಇಲ್ಲೇನೋ ಮಿಸ್ಸಿಂಗ್ ಲಿಂಕ್ ಇದ್ಯಲ್ಲಾ’ ಅಂತಾ ಕೇಳಿದ್ದಕ್ಕೆ ಕೊಂಚವೇ ಕತೆಯ ಎಳೆಯನ್ನು ಬಿಟ್ಟುಕೊಟ್ಟರು. ಆಚಾರ್ಯ ಮನೆತನದ ಅಜ್ಜಿ ಹಾಗೂ ಮೊಮ್ಮಗಳ ನಡುವಿನ ಬಾಂಧವ್ಯದ ಕತೆಯಿದು. ಅತ್ತ ಅಜ್ಜಿ ತಮ್ಮ ಮೊಮ್ಮಗಳ ಆಗಮನದ ನಿರೀಕ್ಷೆಯಲ್ಲಿದ್ದರೆ, ಇತ್ತ ಮೊಮ್ಮಗಳು ತನ್ನ ತಮ್ಮ ಹಾಗೂ ತಂಗಿಗಾಗಿ ಕಳ್ಳತನದಂತಹ ವೃತ್ತಿಗೆ ಇಳಿದಿರುತ್ತಾಳೆ. ಇವಳಿಗೊಬ್ಬ ಗೆಳೆಯನೂ ಇದ್ದಾನೆ. ಅಜ್ಜಿ-ಮೊಮ್ಮಗಳನ್ನು ಸೂಕ್ಷ್ಮ ಸಂವೇದನೆಗಳ ಹಂದರದಲ್ಲಿ ಬೆಸೆಯಲು ಹೊರಟಿದೆ ಧಾರಾವಾಹಿಯ ತಂಡ.
ಲೀಡ್ ರೋಲ್ ಸಮರ್ಥವಾಗಿ ನಿಭಾಯಿಸಬಲ್ಲ ಚಕೋರಿಗಾಗಿ ಸೀರಿಯಲ್ ತಂಡ ರಾಜ್ಯದ ನಾನಾ ಕಡೆ ಆಡಿಷನ್ ನಡೆಸಿತ್ತು. ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡವರು ನೂರಾರು ಮಂದಿ. ಆದರೆ ಕೊನೆಗೆ ರಾಣಿ ಪಟ್ಟ ಒಲಿದಿದ್ದು ಮಾತ್ರ ಈ ಕೊಡಗಿನ ಕುವರಿಗೆ. ಆಡಿಷನ್‍ನಲ್ಲಿ ಕೊನೆಯವರಾಗಿ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದರೂ ಪಾತ್ರ ಬಯಸಿದ್ದು ಇವರನ್ನೇ. ತಡವಾಗಲಿಲ್ಲ, ಕರೆ ಬಂದೇಬಿಟ್ಟಿತು. ರಾತ್ರಿಯೇ ಮಂಗಳೂರಿನಿಂದ ಹೊರಟು ಬೆಂಗಳೂರಿನಲ್ಲಿ ಬೆಳಿಗ್ಗೆ ಶೂಟಿಂಗ್ ಸೆಟ್‍ನಲ್ಲಿ ಹಾಜರ್. ಕಮಿಟ್‍ಮೆಂಟ್ ಹೀಗೇ ಇರಬೇಕು ಎನ್ನುತ್ತಾರೆ ರಶ್ಮಿತಾ.
ನಿರ್ಮಾಪಕರೂ ಅಗಿರುವ ರಾಜ್ ಶೆಟ್ಟಿ ಅವರು ಆರಂಭದ ಎಪಿಸೋಡ್‍ಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ರವಿ ಅವರು ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.
ಮಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿತಾ ಅವರಿಗೆ ನಟನೆ ಒಂದು ಹವ್ಯಾಸ. ಆರಂಭದಲ್ಲಿ ಬೀದಿ ನಾಟಕ ಮಾಡಿದ್ದರು. ಅನುಕರಣ ಕಲೆಯೂ ಗೊತ್ತಿತ್ತು. ಆಕಸ್ಮಿಕವಾಗಿ ಬಂದ ಶಾರ್ಟ್ ಮೂವಿ ಇವರ ನಟನೆಗೊಂದು ಚೌಕಟ್ಟು ನೀಡಿತು. ತುಳು ಭಾಷೆಯಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ತೆರೆಕಂಡ ‘ಕಂಬಳಬೆಟ್ಟು ಭಟ್ರೆನ ಮಗಲ್’ ಚಿತ್ರವು ಅಭಿನಯದ ಹರಿಗೋಲಾಯಿತು. ಸ್ನೇಹಿತ ಅರ್ಜುನ್ ಅವರ ‘ಏರಾ ಉಲ್ಲೆರ್‌ಗೆ’ ಎಂಬ ಮತ್ತೊಂದು ತುಳು ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.
ಇಷ್ಟರಲ್ಲಾಗಲೇ ಎರಡು ಕನ್ನಡ ಸಿನಿಮಾಗಳು ಇವರನ್ನು ಆಹ್ವಾನಿಸಿದ್ದವು. ‘ಅಂಗಾರಕ’ ಸಿನಿಮಾ ನಿರ್ದೇಶಿಸಿದ್ದ ಶ್ರೀನಿವಾಸ್ ಕೌಶಿಕ್ ಅವರ ಚಿತ್ರದಲ್ಲಿ ಇವರೇ ರಾಣಿ. ‘ಗೆಳೆಯ’ ಎಂಬ ಮತ್ತೊಂದು ಚಿತ್ರದ ಮುಹೂರ್ತ ಆಗಿದೆ. ಕೈಯಲ್ಲಿ ಸಾಕಷ್ಟು ಆಫರ್ ಇಟ್ಟುಕೊಂಡೇ ‘ಮಹಾರಾಣಿ’ಯೂ ಆಗಿರುವ ರಶ್ಮಿತಾ, ಎಲ್ಲವನ್ನೂ ನಿಭಾಯಿಸುವ ಉಮೇದಿನಲ್ಲಿದ್ದಾರೆ.
‘ಬರ್ಫಿ’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮಾಡಿದ ಸವಾಲಿನ ಪಾತ್ರ ಮಾಡುವ ಅಭಿಲಾಷೆ ಇವರದ್ದು. ಮೊನ್ನೆ ತೆರೆಕಂಡ ಕನ್ನಡ ದೇಶದೊಳ್ ಚಿತ್ರದ ಹಾಡಿಗೆ ಸಾಹಿತ್ಯ ಬರೆದು, ತಮ್ಮ ಆಸಕ್ತಿಯ ಮತ್ತೊಂದು ಮಗ್ಗುಲನ್ನೂ ಪರಿಚಯಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಕಾಲ ಬಾಳುವ ಭರವಸೆ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.