ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಅಮರರು...
ಹೀಗೆ ಬೆಳ್ಳಿ ತೆರೆಯ ಹಾಗೂ ಸಮಾಜದ ಆದರ್ಶ ಯುವ ನಾಯಕನೊಬ್ಬನನ್ನು ಕಿರುತೆರೆ ಕಲಾವಿದರು ಸ್ಮರಿಸಿ ಕಲಾಗೌರವ ಅರ್ಪಿಸಿದರು.
ಕರ್ನಾಟಕ ಟೆಲಿವಿಷನ್ ಸಂಘದ ವತಿಯಿಂದ ಹಮ್ಮಿಕೊಂಡ ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಭಕ್ತ ಪ್ರಹ್ಲಾದನಾಗಿ, ಬೆಟ್ಟದ ಹೂವಿನ ಪುಟ್ಟ ನಾಯಕನಾಗಿ, ಗುರು ರಾಘವೇಂದ್ರ ರಾಯರ ಭಕ್ತನಾಗಿ ‘ಪುನೀತ್’ ಕಾಣಿಸಿಕೊಂಡರು. ಅವರನ್ನೇ ಹೋಲುವ ಮಕ್ಕಳು ಈ ಪಾತ್ರಗಳಲ್ಲಿ ಅಪ್ಪಟ ‘ಪುನೀತ್’ ಅವರಂತೆ ಅಭಿನಯಿಸಿದರು.
ಪುನೀತ್ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡ ಕಾರ್ಯಕ್ರಮಗಳು, ಧಾರಾವಾಹಿಗಳಿಗೆ ಅವರು ಕೊಟ್ಟ ಬೆಂಬಲ, ಕಿರುತೆರೆ ಕಲಾವಿದರನ್ನು ಅವರು ಪ್ರೋತ್ಸಾಹಿಸುತ್ತಿದ್ದ ಕ್ಷಣಗಳ ವಿಡಿಯೊ ತುಣುಕುಗಳು ವೇದಿಕೆಯ ಪರದೆಯ ಮೇಲೆ ಬಿತ್ತರಗೊಂಡವು.
ಪ್ರವೀಣ್ ಡಿ. ರಾವ್ ಸಂಗೀತ ನಿರ್ದೇಶನದಲ್ಲಿ ಯುವ ಗಾಯಕರು ಪುನೀತ್ ನಟಿಸಿದ್ದ ಚಿತ್ರಗಳ ಗೀತೆಗಳನ್ನು ಹಾಡಿದರು. ಇದೇ ವೇದಿಕೆಯಲ್ಲಿ ಅಪ್ಪು ಲೇಸರ್ ಕಿರಣಗಳ ಮೂಲಕ ಮೂಡಿ ಬಂದರು.
ಪುನೀತ್ ನೆನಪಿನಲ್ಲಿ ನಗರದ ಕಾವೇರಿ ಆಸ್ಪತ್ರೆಯ ವತಿಯಿಂದ ಅಪ್ಪು ಅಮರ ಹೆಸರಿನ ಆಸ್ಪತ್ರೆ ಸೌಲಭ್ಯಗಳ ಕಾರ್ಡನ್ನು ವಿತರಿಸಲಾಯಿತು. ‘ಸುಮಾರು 4 ಸಾವಿರ ಕಲಾವಿದರಿಗೆ ಈ ಕಾರ್ಡನ್ನು ವಿತರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಹೇಳಿದರು.
ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ.ವಿಜಯ ಭಾಸ್ಕರನ್ ಸುಂದರರಾಜ್ ಈ ಕಾರ್ಡನ್ನು ಅನಾವರಣಗೊಳಿಸಿದರು. 100ಕ್ಕೂ ಹೆಚ್ಚು ಕಲಾವಿದರು ನೇತ್ರದಾನಕ್ಕಾಗಿ ನೋಂದಣಿ ಮಾಡಿಸಿಕೊಂಡರು.
ದಾನದ ರಾಯಭಾರಿ: ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ‘ದಾನಕ್ಕೆ ಅಪ್ಪು ರಾಯಭಾರಿಯಾಗಿದ್ದಾರೆ. ನಮ್ಮ ಜೊತೆ ಇಲ್ಲವಾದರೂ ಅವರು ಧ್ರುವತಾರೆಯಾಗಿಯೇ ನಮ್ಮೊಂದಿಗೆ ಇರುತ್ತಾರೆ. ನನ್ನ ಕ್ಷೇತ್ರದ ರಸ್ತೆಯೊಂದನ್ನು ಪುನೀತ್ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಅವರ ಹೆಸರಿಡಲಾಗುವುದು. ಅವರು ಅಗಲಿದ ದಿನ ಅವರ ಕುಟುಂಬದವರು ನಡೆದುಕೊಂಡ ರೀತಿಗೆ ಆಭಾರಿಯಾಗಿದ್ದೇನೆ’ ಎಂದರು.
ನಟರಾದ ರಾಘವೇಂದ್ರ ರಾಜ್‌ಕುಮಾರ್, ಸಿಹಿಕಹಿ ಚಂದ್ರು, ನಟಿ ಉಮಾಶ್ರೀ ಸೇರಿದಂತೆ ಹಲವು ಪ್ರಮುಖ ಕಲಾವಿದರು
ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.