ADVERTISEMENT

ಕಲರ್ಸ್ ಕನ್ನಡದಲ್ಲಿ ಆ.14ರಿಂದ ‘ಎದೆ ತುಂಬಿ ಹಾಡುವೆನು’ ಪ್ರಸಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:15 IST
Last Updated 10 ಆಗಸ್ಟ್ 2021, 12:15 IST
ಎಸ್.ಪಿ. ಬಾಲಸುಬ್ರಮಣ್ಯಂ
ಎಸ್.ಪಿ. ಬಾಲಸುಬ್ರಮಣ್ಯಂ   

ಬೆಂಗಳೂರು: ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಆಗಸ್ಟ್ 14ರಿಂದ ಪ್ರಸಾರ ಆಗಲಿದೆ.

ಈಟಿವಿಯಲ್ಲಿ ಅಂದು ಎಸ್.ಪಿ. ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಇದು. ಈಗ ದಿವಂಗತ ಎಸ್.ಪಿ.ಬಿ. ಅವರ ಜಾಗದಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಇರುತ್ತಾರೆ. ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇರುತ್ತಾರೆ.

ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮಾಹಿತಿ ನೀಡಿದರು.

‘ನಾನು ಮೂರು ವರ್ಷಗಳ ಹಿಂದೆ ಚೆನ್ನೈಯಲ್ಲಿ ಎಸ್‌ಪಿಬಿ ಅವರನ್ನು ಭೇಟಿ ಮಾಡಿ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ತಮ್ಮ ವೇಳಾಪಟ್ಟಿ ನೋಡಿ ತಿಳಿಸುತ್ತೇನೆ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019ರಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.

ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ಧಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತಿದ್ದಾಗ ‘ಕೊರೊನಾ’ ಆರಂಭವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು. ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ’ ಎಂದರು ಪರಮೇಶ್ವರ ಗುಂಡ್ಕಲ್.

‘ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೇಡಿಯೋ ಹಾಕಿದ ತಕ್ಷಣ ಎಸ್‌ಪಿಬಿ ಅವರ ಹಾಡು ಬರುತ್ತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸಿಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ’ ಎಂದರು ರಘು ದೀಕ್ಷಿತ್.

ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿ, ‘ಈ ಕಾರ್ಯಕ್ರಮವನ್ನು ಎಸ್‌ಪಿಬಿ ಅವರೇ ನಮ್ಮೊಂದಿಗೆ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT