ADVERTISEMENT

ನೃತ್ಯದಿಂದ ನಟನೆಯೆಡೆಗೆ ರಿಶಾ ಪಯಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 5:24 IST
Last Updated 29 ನವೆಂಬರ್ 2019, 5:24 IST
ರಿಶಾ ನಿಜಗುಣ
ರಿಶಾ ನಿಜಗುಣ   

ಆಕೆ ಮಾವನನ್ನು ಮದುವೆಯಾಗಬೇಕೆಂದು ಕನಸು ಕಂಡು, ಅನಿವಾರ್ಯತೆಗೆ ತಲೆಬಾಗಿ ಮಾವನ ತಮ್ಮನನ್ನು ಮದುವೆುಯಾಗಿ ಒಲ್ಲದ ಬದುಕು ಸಾಗಿಸುವಾಕೆ. ಮದುವೆಗೆ ಮೊದಲು ಬಜಾರಿಯಂತಿದ್ದ ಆಕೆ ಮದುವೆಯ ನಂತರ ಮೌನಗೌರಿಯಂತೆ ಮನೆಯವರ ಜೊತೆ ಹೊಂದಿಕೊಂಡು ಹೋಗುತ್ತಾಳೆ. ಅವಳೇ ‘ವರಲಕ್ಷ್ಮಿ ಸ್ಟೋರ್ಸ್‌’ ಧಾರಾವಾಹಿಯ ರಕ್ಷಿತಾ. ಈ ಪಾತ್ರಕ್ಕೆ ಜೀವ ತುಂಬುತ್ತಿರುವವರು ಚಿತ್ರದುರ್ಗದ ಬೆಡಗಿ ರಿಶಾ ನಿಜಗುಣ.

ಬಿ.ಕಾಂ. ಪದವಿ ಪಡೆದಿರುವ ಇವರಿಗೆ ನೃತ್ಯದ ಮೇಲೆ ವಿಪರೀತ ಒಲವು. ಆದರೆ ಮಗಳು ನಟಿಯಾಗಬೇಕು ಎಂಬುದು ಹೆತ್ತವರ ಕನಸು. ನೃತ್ಯದ ಮೇಲಿನ ಪ್ರೀತಿ ಇವರನ್ನು ಬೆಂಗಳೂರಿನತ್ತ ಹೆಜ್ಜೆ ಇರಿಸುವಂತೆ ಮಾಡಿತು. ಹೆತ್ತವರ ಆಸೆಯನ್ನು ನಿರಾಸೆ ಮಾಡಬಾರದೆಂದು ‘ಕಲಾತ್ಮಕ ತಂಡ’ ನಾಟಕ ತಂಡವನ್ನು ಸೇರಿಕೊಂಡು ನಟನೆಯ ಆಳ–ಅಗಲ ಕಲಿತುಕೊಂಡಿದ್ದರು. ಅವಕಾಶಗಳು ಬಂದಾಗ ಆಡಿಷನ್‌ಗಳಲ್ಲಿ ಭಾಗವಹಿಸುತ್ತಿದ್ದರು.‘ಡಿ.ಕೆ. ಬೋಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಈ ಸುಂದರಿಗೆ ಸಿಕ್ಕಿದ ಮೇಲೆ, ಅವರ ನಟನೆಯ ಪಯಣ ಆರಂಭವಾಯಿತು.

ಹಿರಿತೆರೆಯಷ್ಟೇ ಅಲ್ಲ, ಕಿರುತೆರೆಯಲ್ಲೂ ಅದೃಷ್ಟ ಪರೀಕ್ಷೆ ಮಾಡಬೇಕು ಎಂದುಕೊಂಡ ಇವರು ಕಿರುತೆರೆಯ ಆಡಿಷನ್‌ಗಳಲ್ಲೂ ಭಾಗವಹಿಸುತ್ತಿದ್ದರು. ಆದರೆ, ಇವರಿಗೆ ಎಂದೂ ತನಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಆದರೆ ‘ಒನ್ ಫೈನ್ ಡೇ’ ಅಂತಾರಲ್ಲಾ ಹಾಗೆ ಇವರ ಪಾಲಿಗೂ ಆ ಒಂದು ಅದೃಷ್ಟದ ದಿನ ಬಂದಿತ್ತು. ಅದು ಅವರಿಗೆ ವರಲಕ್ಷ್ಮಿ ಸ್ಟೋರ್ಸ್‌ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಟ್ಟಿತ್ತು. ಕಿರುತೆರೆಯ ಪಯಣದ ಹಾದಿ ತೆರೆದುಕೊಂಡ ಬಗೆಯನ್ನು ಹೀಗೆ ವಿವರಿಸಿದರು ದುರ್ಗದ ಬೆಡಗಿ.

ADVERTISEMENT

ನಗು, ಅಳು, ಕೋಪ ಈ ಎಲ್ಲವನ್ನೂ ಒಳಗೊಂಡಂತಹ ಪಾತ್ರದಲ್ಲಿ ನಟಿಸುವ ಆಸೆ ರಿಶಾ ಅವರದ್ದು. ಅಂತಹ ಪಾತ್ರ ಸಿಕ್ಕರೆ ಖುಷಿಯಿಂದ ನಟಿಸುತ್ತೇನೆ ಎನ್ನುವ ಇವರಿಗೆ ಅನಂತನಾಗ್ ಅವರ ಜೊತೆ ನಟಿಸುವ ಕನಸೂ ಇದೆ. ಮಾತಿನ ಮಧ್ಯೆ ಆಗಾಗ ನಟಿ ರಾಧಿಕಾ ಪಂಡಿತ್ ನಟನೆಯನ್ನು ನೆನೆಯುವ ಅವರು ಅವರಂತೆ ನಟಿಸಬೇಕು ಎಂಬ ಹಂಬಲ ತೋರುತ್ತಾರೆ.

‘ನನ್ನ ತಂದೆ– ತಾಯಿಯೇ ನನಗೆ ಮೊದಲ ರೋಲ್ ಮಾಡೆಲ್‌ಗಳು. ನಟಿಯಾಗಬೇಕು ಎಂಬುದು ನನಗೆ ಇಷ್ಟವಾದರೆ; ಅದು ನನ್ನ ಕುಟುಂಬಕ್ಕೆ ಕನಸು. ನನ್ನ ತಮ್ಮನಿಗೂ ನನ್ನನ್ನು ಪರದೆಯ ಮೇಲೆ ನೋಡುವ ಆಸೆ ಇದೆ. ಅದನ್ನು ಪೂರೈಸುವುದು ನನ್ನ ಮುಂದಿನ ಗುರಿ’ ಎನ್ನುತ್ತಾರೆ ಕುಟುಂಬ ಹಾಗೂ ನಟನೆಯ ಮೇಲಿನ ಪ್ರೀತಿಯನ್ನು ತೋರುತ್ತಾರೆ.

ಈಗಾಗಲೇ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ದರೂ ಸದ್ಯಕ್ಕೆ ಇವರು ವರಲಕ್ಷ್ಮಿ ಸ್ಟೋರ್ಸ್‌ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಆರು ತಿಂಗಳು ಬೇರೆ ಯಾವುದೇ ಪ್ರಾಜೆಕ್ಟ್ ಮೇಲೆ ಗಮನ ಹರಿಸುವುದಿಲ್ಲ ಎನ್ನುವ ಇವರು ಮುಂದೆಬೆಳ್ಳಿತೆರೆಯ ಮೇಲೆ ಹಿರಿಯ ಕಲಾವಿದರೊಂದಿಗೆ ನಟಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.