ADVERTISEMENT

ಸೆಲೆಬ್ರಿಟಿ ಫಿಟ್‌ನೆಸ್‌: ‘ಪುಟ್ಟಕ್ಕನ ಮಗಳ’ ಫಿಟ್‌ನೆಸ್‌ ಮಾತು...

ಜಿ.ಶಿವಕುಮಾರ
Published 8 ಅಕ್ಟೋಬರ್ 2022, 8:47 IST
Last Updated 8 ಅಕ್ಟೋಬರ್ 2022, 8:47 IST
ಸಂಜನಾ ಬುರ್ಲಿ
ಸಂಜನಾ ಬುರ್ಲಿ   

ಸಂಜನಾ ಬುರ್ಲಿ...ಈ ಹೆಸರು ಬಹುಪಾಲು ಮಂದಿಗೆ ಗೊತ್ತೇ ಇಲ್ಲ. ಆದರೆ ‘ಪುಟ್ಟಕ್ಕನ ಮಗಳು’ ಸ್ನೇಹ ಎಂದರೆ ಸಾಕು, ಎಲ್ಲರ ಕಣ್ಣುಗಳೂ ಅರಳುತ್ತವೆ. ಹಠಮಾರಿ ಹುಡುಗಿಯೊಬ್ಬಳ ಚಹರೆ ಕಣ್ಣೆದುರು ಹಾದುಹೋಗುತ್ತದೆ. ಅಷ್ಟರ ಮಟ್ಟಿಗೆ ಈ ಪಾತ್ರವನ್ನು ಜೀವಿಸಿದವರು ಸಂಜನಾ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಅವರು ಇತ್ತೀಚೆಗಷ್ಟೇ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಅವರ ತಂದೆ ಅಜಿತ್‌ ಬುರ್ಲಿ. ಅಮ್ಮ ಭಾರತಿ. ಕಾಲೇಜು ದಿನಗಳಲ್ಲೇ ನಟನೆಯ ವ್ಯಾಮೋಹ ಬೆಳೆಸಿಕೊಂಡ ಸಂಜನಾ, ‘ಪತ್ತೆದಾರಿ ಪ್ರತಿಭಾ’ ಧಾರವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಅಡಿ ಇಟ್ಟಿದ್ದರು. ಬಳಿಕ ‘ಲಗ್ನಪತ್ರಿಕೆ’ ಧಾರವಾಹಿಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು.

‘ಪುಟ್ಟಕ್ಕನ ಮಕ್ಕಳು’ ಧಾರವಾಹಿಯ ಮೂಲಕ ಜನ ಮಾನಸಕ್ಕೆ ಆಪ್ತವಾಗಿರುವ ಅವರು ‘ಪ್ರಜಾ ಪ್ಲಸ್‌’ ಜೊತೆ ತಮ್ಮ ಫಿಟ್‌ನೆಸ್‌ ಮಂತ್ರವನ್ನು ಬಿಚ್ಚಿಟ್ಟಿದ್ದಾರೆ.

ADVERTISEMENT

* ನಟ, ನಟಿಯರಿಗೆ ಫಿಟ್‌ನೆಸ್‌ ಏಕೆ ಮುಖ್ಯ?
ನಟ, ನಟಿಯರು ಸದಾ ಕ್ರಿಯಾಶೀಲರಾಗಿರಬೇಕಾಗುತ್ತದೆ.ಸದೃಢ ಕಾಯದ ಜೊತೆಗೆ ಆಂತರಿಕ ಹಾಗೂ ಬಾಹ್ಯ ಸೌಂದರ್ಯವನ್ನೂ ಹೊಂದಿರಬೇಕಾಗುತ್ತದೆ. ಮುಖ್ಯವಾಗಿ ಶಿಸ್ತು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಇದಕ್ಕಾಗಿ ಸಮಯ ಸಿಕ್ಕಾಗಲೆಲ್ಲಾ ದೇಹ ದಂಡಿಸಬೇಕಾಗುತ್ತದೆ.

* ಸದಾ ಶೂಟಿಂಗ್‌ನಲ್ಲಿ ತೊಡಗಿಕೊಳ್ಳುವ ನೀವು ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳುತ್ತೀರಿ?
ಫಿಟ್‌ನೆಸ್‌ಗಾಗಿ ಜಿಮ್‌ನಲ್ಲಿ ಗಂಟೆಗಟ್ಟಲೆ ದೇಹ ದಂಡಿಸಬೇಕೆಂದೇನೂ ಇಲ್ಲ. ಹಿತ–ಮಿತ ಹಾಗೂ ಆರೋಗ್ಯಕರ ಆಹಾರ ಸೇವನೆಯಿಂದಲೂ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು. ನಾವು ಎಷ್ಟೇ ದೇಹ ದಂಡಿಸಿದರೂ, ಡಯಟ್‌ ಪಾಲನೆ ಮಾಡಿದರೂ ಕನಿಷ್ಠ 7 ಗಂಟೆ ನಿದ್ರೆ ಮಾಡಬೇಕಾಗುತ್ತದೆ.

ಪ್ರಯಾಣದ ಸಂದರ್ಭದಲ್ಲಿ ಹಿತ–ಮಿತವಾಗಿ ಆಹಾರ ಸೇವಿಸುತ್ತೇನೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಸಾಧ್ಯವಾದಷ್ಟು ದೂರ ಉಳಿಯುತ್ತೇನೆ. ಸಕ್ಕರೆ ಪ್ರಮಾಣ ಅಧಿಕವಿರುವ ಹಾಗೂ ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದಿಲ್ಲ.

ಬಿಡುವು ಸಿಕ್ಕಾಗಲೆಲ್ಲಾ ಶೂಟಿಂಗ್‌ ಸ್ಥಳದಲ್ಲೇ ಲಘು ವ್ಯಾಯಾಮಗಳನ್ನು ಮಾಡುತ್ತೇನೆ. ಆ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ.

* ಯಾವ ಬಗೆಯ ಆಹಾರ ಪದಾರ್ಥಗಳಿಗೆ ನೀವು ಆದ್ಯತೆ ನೀಡುತ್ತೀರಿ?
ನಾನು ಸಂಪೂರ್ಣ ಸಸ್ಯಹಾರಿ. ದೇಹಕ್ಕೆ ಪ್ರೊಟೀನ್‌ಗಳು ಹೇರಳವಾಗಿ ಬೇಕಿರುವುದರಿಂದ ಪನ್ನೀರ್‌, ಸೋಯಾ ಹಾಗೂ ಕಾಳುಗಳನ್ನು ಯಥೇಚ್ಚವಾಗಿ ಸೇವಿಸುತ್ತೇನೆ. ಬೆಲ್ಲ ಅಥವಾ ಜೇನುತುಪ್ಪದಿಂದ ಮಾಡಿದ ಪದಾರ್ಥಗಳ ಸೇವನೆಗೆ ಒತ್ತು ನೀಡುತ್ತೇನೆ. ಇದರಿಂದ ಸಕ್ಕರೆಯ ಪ್ರಮಾಣ ದೇಹ ಸೇರುವುದನ್ನು ತಪ್ಪಿಸಬಹುದು.

* ಜಿಮ್‌ನಲ್ಲಿ ಎಷ್ಟು ಕಾಲ ದೇಹ ದಂಡಿಸುತ್ತೀರಿ?
ಮೊದಲೆಲ್ಲಾಬ್ಯಾಡ್ಮಿಂಟನ್‌, ಈಜು ಹಾಗೂ ಇತರ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದೆ. ಈಗೀಗ ಜಿಮ್‌ಗೆ ಹೋಗುವುದನ್ನು ರೂಢಿಸಿಕೊಂಡಿದ್ದೇನೆ. ಜಿಮ್‌ನಲ್ಲಿ ಹೆಚ್ಚೆಂದರೆ ಒಂದು ಗಂಟೆ ದೇಹ ದಂಡಿಸುತ್ತೇನೆ. ಕಾರ್ಡಿಯೊ ಸೇರಿದಂತೆ ಎಲ್ಲಾ ಬಗೆಯ ವ್ಯಾಯಾಮಗಳನ್ನು ಮಾಡುತ್ತೇನೆ. ಸಮಯ ಸಿಕ್ಕಾಗ ಚಾರಣಕ್ಕೆ ಹೋಗುತ್ತೇನೆ.

ಎಳವೆಯಿಂದಲೇ ಯೋಗ ಅಭ್ಯಾಸ ಮಾಡಿಕೊಂಡು ಬಂದಿದ್ದೇನೆ. ಆಗಾಗ ಸೂರ್ಯ ನಮಸ್ಕಾರ ಮಾಡುತ್ತೇನೆ. ಅದರಿಂದ ಮನಸ್ಸು ಹಗುರವೆನಿಸುತ್ತದೆ.

* ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕಾಗಿ ನಮಗಿಷ್ಟದ ಸಿಹಿ ಪದಾರ್ಥಗಳನ್ನು ತ್ಯಜಿಸಬೇಕೆ?
ಹಾಗೇನಿಲ್ಲ. ನಮಗೆ ಇಷ್ಟವಿರುವ ಸಿಹಿ ಪದಾರ್ಥವನ್ನು ಸಕ್ಕರೆರಹಿತವಾಗಿ ತಯಾರಿಸಿಕೊಂಡು ಸೇವಿಸಬಹುದು. ಬ್ರೌನ್‌ ಷುಗರ್‌, ಬೆಲ್ಲ, ಖರ್ಜೂರದ ಹಣ್ಣುಗಳನ್ನು ಬಳಸಿ ಸಿದ್ಧಪಡಿಸಿರುವ ಸಿಹಿ ಪದಾರ್ಥಗಳನ್ನು ತಿನ್ನಬೇಕು. ಆ ಪದಾರ್ಥಗಳಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿರುವುದಿಲ್ಲ. ಹಾಗಂತ ಇದನ್ನೂ ಮಿತಿ ಮೀರಿ ತಿನ್ನಬಾರದು.

ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡುತ್ತೇನೆ. ಆಗಾಗ ಹಣ್ಣುಗಳನ್ನು ಸೇವಿಸುತ್ತೇನೆ. ಮಿತವಾಗಿ ಅನ್ನ ಸೇವಿಸುತ್ತೇನೆ. ಯಾವಾಗಲಾದರೂ ಒಮ್ಮೆ ಕರಿದ ಪದಾರ್ಥಗಳನ್ನು ಸೇವಿಸುತ್ತೇನೆ.

-ಸಂಜನಾ ಬುರ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.