ADVERTISEMENT

ಕಿರುತೆರೆಯ ‘ಮಣಿಕರ್ಣಿಕಾ’ ಅನುಷ್ಕಾ ಸೇನ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 8:47 IST
Last Updated 15 ಫೆಬ್ರುವರಿ 2019, 8:47 IST
   

ಬಾಲಿವುಡ್‌ನ ಅದ್ದೂರಿ ಚಿತ್ರ ‘ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಝಾನ್ಸಿ’ ತೆರೆಕಂಡಾಗಿದೆ. ಕಂಗನಾ ರಣೌತ್‌, ಝಾನ್ಸಿ ರಾಣಿಯಾಗಿಯೂ ನಿರ್ದೇಶಕಿಯಾಗಿಯೂ ಹೆಸರು ಗಳಿಸಿದರು. ಇದೀಗ ಕಿರುತೆರೆಯಲ್ಲೊಬ್ಬಳು ‘ಮಣಿಕರ್ಣಿಕಾ’ ಗರ್ಜನೆ ಶುರು ಮಾಡಿದ್ದಾಳೆ.

ಅವಳೇ ಅನುಷ್ಕಾ ಸೇನ್‌ ಎಂಬ ಬಂಗಾಲಿ ಬೆಡಗಿ. ಕಲರ್ಸ್‌ ಹಿಂದಿ ವಾಹಿನಿಯಲ್ಲಿ ಕೆಲದಿನಗಳಿಂದೀಚೆ ಆರಂಭವಾಗಿರುವ ‘ಖೂಬ್‌ ಲಡಿ ಮರ್ದಾನಿ ಝಾನ್ಸಿ ಕಿ ರಾಣಿ’ ಧಾರಾವಾಹಿಯಲ್ಲಿ ಝಾನ್ಸಿ ರಾಣಿಯ ಪಾತ್ರಧಾರಿ.

ಕಂಗನಾ ಅಭಿನಯದ ‘ಮಣಿಕರ್ಣಿಕಾ’ ಸಾಕಷ್ಟು ಸುದ್ದಿ, ವಿವಾದ ಸೃಷ್ಟಿಸಿತ್ತು. ಅಲ್ಲದೆ, ಮಣಿಕರ್ಣಿಕಾ ಪಾತ್ರದಲ್ಲಿ ಕಂಗನಾ ವಿಜೃಂಭಿಸಿದ್ದಾರೆ. ಹಾಗಾಗಿ ಎಲ್ಲಿ ಹೋದರೂ ಜನ ಅನುಷ್ಕಾ ಸೇನ್‌ ಅವರನ್ನು ಜೂನಿಯರ್‌ ಕಂಗನಾ ಎಂಬಂತೆ ನೋಡುತ್ತಿದ್ದಾರಂತೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಅನುಷ್ಕಾ ಸೇನ್‌ಗೆ ಕೆಲದಿನಗಳಿಂದೀಚೆ ಇದೇ ಪ್ರಶ್ನೆ ಎದುರಾಗುತ್ತಿದೆಯಂತೆ.

ADVERTISEMENT

ಧಾರಾವಾಹಿ ಪ್ರಸಾರವಾಗುವ ದಿನಗಳಲ್ಲೇ ಅನಿರೀಕ್ಷಿತ ಭಾರ ಹೆಗಲೇರಿದಾಗ ಅಳುಕು ಆಗುವುದು ಸಹಜವೇ. ಆದರೆ ‘ಅಭಿಮಾನಿಗಳ ನಿರೀಕ್ಷೆಯ ಭಾರವನ್ನು ಸವಾಲಾಗಿ ಸ್ವೀಕರಿಸುತ್ತೇನೆ’ ಎನ್ನುತ್ತಾರೆ ಜಾಣೆ ಅನುಷ್ಕಾ.

ಸಿನಿಮಾಕ್ಕಿಂತ ಕತೆ ಭಿನ್ನ

ಝಾನ್ಸಿ ರಾಣಿಯನ್ನು ಜಗತ್ತು ಅರಿತಿದೆ. ಆದರೆ ಝಾನ್ಸಿಯ ರಾಣಿಯಾಗಿ ಆಕೆ ರೂಪುಗೊಂಡ ಬಗೆ ಹೇಗೆ ಎಂಬುದನ್ನು ಈ ಧಾರಾವಾಹಿ ಹೇಳುತ್ತದೆ. ಅಂದರೆ ಕಂಗನಾ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಕರ್ಣಿಕಾ ಪಾತ್ರವನ್ನು ಬಿಂಬಿಸಿದ್ದರೆ, ಧಾರಾವಾಹಿಯಲ್ಲಿ ಮಣಿಕರ್ಣಿಕಾ ಬಗೆಗೆ ಜಗತ್ತು ಅರಿಯದ ಸತ್ಯಗಳನ್ನು ಅನಾವರಣ ಮಾಡಲಾಗಿದೆ. ಆದರೆ ಮಣಿಕರ್ಣಿಕಾ ಸಿನಿಮಾಗಿಂತ ಸಂಪೂರ್ಣ ಭಿನ್ನ ಆಯಾಮದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ ಎನ್ನಲಾಗಿದೆ.

ತವರು, ಮದುವೆ, ಹೆಂಡತಿ, ಮಕ್ಕಳ ಹೆರುವ ಜವಾಬ್ದಾರಿ, ಅವರ ಪಾಲನೆ ಪೋಷಣೆ, ಕುಟುಂಬದ ಹೊಣೆಗಾರಿಕೆಗಳು ಎಂಬ ಚೌಕಟ್ಟಿಗಷ್ಟೇ ಹೆಣ್ಣು ಮೀಸಲಾಗಿದ್ದ ಕಾಲದಲ್ಲಿ ಮಣಿಕರ್ಣಿಕಾ ವಿಭಿನ್ನ ನೆಲೆಯಲ್ಲಿ ತನ್ನನ್ನು ರೂಪಿಸಿಕೊಂಡ ಬಗೆಯನ್ನು ಅನುಷ್ಕಾ ಪ್ರಸ್ತುತಪಡಿಸಬೇಕಿದೆ. ಸಣ್ಣ ವಯಸ್ಸಿನ ನಟಿಗೆ ಇದು ದೊಡ್ಡ ಸವಾಲೂ ಹೌದು. ಆದರೆ ಈ ಧಾರಾವಾಹಿ, ಅನುಷ್ಕಾ ತಾರಾ ವರ್ಚಸ್ಸನ್ನು ದುಪ್ಪಟ್ಟು ಮಾಡಿದೆ.

‘ಕಿರುತೆರೆಯ ‘ಮಣಿಕರ್ಣಿಕಾ’ ಆಗಿರುವುದಕ್ಕೆ ಧನ್ಯತಾಭಾವವಿದೆ. ಯಾವುದೇ ನಟಿ ಮಾಡಬಯಸುವ ಪಾತ್ರವಿದು. ನನಗೆ ಸಿಕ್ಕಿದ ಅವಕಾಶಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸುತ್ತೇನೆ’ ಎನ್ನುತ್ತಾಳೆ ಅನುಷ್ಕಾ.

ನೃತ್ಯ, ಹಾಡು, ನಟನೆಯಿಂದಾಚೆ ಯಾವುದೇ ಆಸಕ್ತಿಯನ್ನು ದುಡಿಸಿಕೊಂಡವಳಲ್ಲ ಈ ಹುಡುಗಿ. ಆದರೆ ಈ ಧಾರಾವಾಹಿಗಾಗಿ ಕುದುರೆ ಸವಾರಿ, ಖಡ್ಗ ಎತ್ತುವುದು, ಬೀಸುವುದನ್ನೂ ಕಲಿಯಬೇಕಾಗಿ ಬಂತು. ಹೀಗಾಗಿ ಅನುಷ್ಕಾ ಪ್ರೊಫೈಲ್‌ಗೆ ಈ ವರಸೆಗಳೂ ಸೇರ್ಪಡೆಯಾಗಿವೆ.

ಕಂಗನಾ ರಣೌತ್‌ ನಟನೆ ಮತ್ತು ವ್ಯಕ್ತಿತ್ವ ಅನುಷ್ಕಾಗೆ ತುಂಬಾ ಇಷ್ಟವಂತೆ. ಅದೇ ನಟಿಯೊಂದಿಗೆ ತನ್ನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೋಲಿಕೆ ಮಾಡುತ್ತಿರುವುದು ಸ್ವಲ್ಪ ಜಂಭವನ್ನೂ ತಂದುಕೊಟ್ಟಿದೆಯಂತೆ!

ಎಳೆಯ ಪ್ರಾಯದಲ್ಲೇ ನಟನೆಯ ಅವಕಾಶಗಳು ಅನುಷ್ಕಾಳನ್ನು ಹುಡುಕಿ ಬಂದವು. ಎಂಟು ವರ್ಷಗಳಿಂದ ಆಕೆ ಬಿಡುವಿಲ್ಲದ ನಟಿ. ‘ಕಿರುತೆರೆಯ ಮಣಿಕರ್ಣಿಕಾ’ ಆಕೆಯನ್ನು ಇನ್ನಷ್ಟು ಪ್ರಬುದ್ಧ ನಟನೆಯತ್ತ ಒಯ್ಯುವುದು ಖಚಿತ. ಓದು ಮತ್ತು ನಟನೆ ಎರಡನ್ನೂ ಸಮಚಿತ್ತದಿಂದ ಸಂಭಾಳಿಸುವ ಛಾತಿಯೂ ಅನುಷ್ಕಾಳಲ್ಲಿದೆ.

ಸಣ್ಣ ವಯಸ್ಸಿಗೇ ಖ್ಯಾತಿ

ಅವಳೇ ಅನುಷ್ಕಾ ಸೇನ್‌ ಎಂಬ ಬಂಗಾಲಿ ಬೆಡಗಿ. ಹುಟ್ಟೂರು ಜಾರ್ಖಂಡ್‌ನ ರಾಂಚಿ. ಮನೆ ಮಂದಿ ಮತ್ತು ಆಪ್ತರಿಗೆಲ್ಲ ಮುದ್ದಿನ ‘ಮೆಹೆರ್‌’. ಓದಿದ್ದು ಮುಂಬೈನಲ್ಲಿ. ನೃತ್ಯವೆಂದರೆ ಪಂಚಪ್ರಾಣ. ನೃತ್ಯಾಭ್ಯಾಸಕ್ಕಾಗಿಯೇ ದೆಹಲಿಯ ಹೆಸರಾಂತ ಶೈಮಕ್‌ ದವರ್‌ ಡಾನ್ಸ್‌ ಅಕಾಡೆಮಿಗೆ ಸೇರಿದವಳು ಅನುಷ್ಕಾ. ಅನುಷ್ಕಾ ಜನಿಸಿದ್ದು 2002ರಲ್ಲಿ. ಅಂದರೆ ಈಗ ವಯಸ್ಸು ಕೇವಲ 17. ಆದರೆ ಆಕೆ ಕಿರುತೆರೆ ಮತ್ತು ಹಿರಿತೆರೆಯ ಮೂಲಕ ಸಣ್ಣ ವಯಸ್ಸಿಗೇ ಮನೆ ಮಾತಾದವಳು.

ರಾಕೇಶ್‌ ಓಂ ಪ್ರಕಾಶ್‌ ಮೆಹ್ರಾ ನಿರ್ದೇಶನದ ಮ್ಯೂಸಿಕ್ ವಿಡಿಯೊ ಆಲ್ಬಂ ಮೂಲಕ ಮನರಂಜನಾ ಕ್ಷೇತ್ರಕ್ಕೆ ಪರಿಚಯಗೊಂಡವಳು ಅನುಷ್ಕಾ. ನಟನೆಗಾಗಿ ಮೊದಲು ಕ್ಯಾಮೆರಾ ಎದುರಿಸಿದ್ದು 2010ರಲ್ಲಿ ‘ಯಹಾಂ ಮೇ ಘರ್‌ ಘರ್‌ ಖೇಲಿ’ ಶೋಗಾಗಿ. ‘ದೇವೋಂ ಕೆ ದೇವ್‌ ಮಹಾದೇವ್‌’, ಪ್ರಸ್ತುತ ಪ್ರಸಾರವಾಗುತ್ತಿರುವ ‘ಇಂಟರ್‌ನೆಟ್‌ ವಾಲಾ ಲವ್‌’ ಅನುಷ್ಕಾ ಪ್ರತಿಭೆಗೆ ವೇದಿಕೆ ಒದಗಿಸಿದವು. 2015ರಲ್ಲಿ ‘ಕ್ರೇಜಿ ಕುಕ್ಕಡ್‌ ಫ್ಯಾಮಿಲಿ’ ಬಾಲಿವುಡ್‌ ಚಿತ್ರದಲ್ಲಿಯೂ ನಟಿಸಿದ್ದಾಳೆ ಅನುಷ್ಕಾ.

ಮಕ್ಕಳ ನೆಚ್ಚಿನ ಧಾರಾವಾಹಿ, ಮಾಯಾಂಗನೆಯರು ಮತ್ತು ಕುಬ್ಜನ ಕತೆಯಿರುವ ‘ಬಾಲ್‌ವೀರ್‌’, ಅನುಷ್ಕಾಗೆ ಎಲ್ಲಕ್ಕಿಂತ ಹೆಚ್ಚು ಹೆಸರು ತಂದುಕೊಟ್ಟಿತು. ನಾಲ್ಕು ವರ್ಷ ಪ್ರಸಾರವಾದ ಈ ಧಾರಾವಾಹಿ ಮಕ್ಕಳ ಮನಸೂರೆಗೊಂಡಿತ್ತು.

**
ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಹೆಸರುವಾಸಿ. 25 ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಇನ್‌ಸ್ಟಾಗ್ರಾಂನಲ್ಲಿದ್ದರೆ, ಫೇಸ್‌ಬುಕ್‌ ಫ್ರೆಂಡ್ಸ್‌ ಸಂಖ್ಯೆ 5.4 ಲಕ್ಷ! ಅವಳದ್ದೇ ಯೂ ಟ್ಯೂಬ್‌ ಚಾನೆಲ್‌ಗೆ ಈಗ ಎರಡರ ಹರೆಯ.

Like ಆ್ಯಪ್‌ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಮಂದಿ ಫಾಲೋ ಮಾಡಿದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಇತ್ತೀಚೆಗಷ್ಟೇ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.