ADVERTISEMENT

ಶಕ್ತಿಮಾನ್ ಮತ್ತೆ ತೆರೆಗೆ?

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:30 IST
Last Updated 17 ಅಕ್ಟೋಬರ್ 2019, 19:30 IST
ಮುಕೇಶ್ ಖನ್ನಾ
ಮುಕೇಶ್ ಖನ್ನಾ   

ತೊಂಭತ್ತರ ದಶಕದ ಮಕ್ಕಳಿಗೆ ‘ಶಕ್ತಿಮಾನ್’ ಹೆಸರು ಗೊತ್ತಿರದಿರಲು ಸಾಧ್ಯವಿಲ್ಲ. ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಅದೂ ಒಂದು. ಅಂಧಕಾರದ ರಾಜ ಕಿಲ್ವಿಶ್ ಮತ್ತು ಸತ್ಯದ ಸೇವಕ ಶಕ್ತಿಮಾನ್‌ ನಡುವಿನ ಸಂಘರ್ಷದ ಕಥೆ ಅದು.

ಆ ಧಾರಾವಾಹಿಯ ಅಭಿಮಾನಿಗಳಿಗೆ, ಸ್ವತಃ ಶಕ್ತಿಮಾನ್ ಒಂದು ಒಳ್ಳೆಯ ಸುದ್ದಿ ನೀಡಿದ್ದಾನೆ. ‘ಇದು 3–ಡಿ ಆ್ಯನಿಮೇಷನ್‌ ರೂಪದಲ್ಲಿ ಮತ್ತೆ ಆರಂಭವಾಗಲಿದೆ’ ಎಂದು ಶಕ್ತಿಮಾನ್‌ ಪಾತ್ರದ ಮೂಲಕ ಚಿಣ್ಣರ ಪ್ರೀತಿಪಾತ್ರ ಆಗಿದ್ದ ಮುಕೇಶ್ ಖನ್ನಾ ತಿಳಿಸಿದ್ದಾರೆ.

ತಮ್ಮ ಯೂಟ್ಯೂಬ್‌ ವಾಹಿನಿಯ ಮೂಲಕ ಈ ವಿಚಾರ ಹೊರಗೆಡಹಿರುವ ಮುಕೇಶ್‌, ‘ವಿಜಯ ದಶಮಿಯ ಶುಭಾಶಯಗಳು. ಇದು ಅಸತ್ಯದ ವಿರುದ್ಧ ಸತ್ಯವು ಜಯ ಸಾಧಿಸಿದ ದಿನ. ಕೆಟ್ಟದ್ದರ ವಿರುದ್ಧ ಒಳ್ಳೆಯದು ವಿಜಯ ಸಾಧಿಸಿದ ಹಬ್ಬ. ಕತ್ತಲಿನ ವಿರುದ್ಧ ಬೆಳಕು ಗೆದ್ದ ಉತ್ಸವ. ಹೌದು ಗೆಳೆಯರೆ, ಕಿಲ್ವಿಷ್ ವಿರುದ್ಧ ಶಕ್ತಿಮಾನ್‌ ಗೆದ್ದ ಹಬ್ಬ’ ಎಂದು ಹೇಳಿದ್ದಾರೆ. ಕಿಲ್ವಿಶ್‌ನನ್ನು ಕತ್ತಲೆಯ ಸಾಮ್ರಾಜ್ಯದ ರಾಜನೆಂದೂ, ಶಕ್ತಿಮಾನ್‌ನನ್ನು ಬೆಳಕಿನ ಉಪಾಸಕನೆಂದೂ ಆ ಧಾರಾವಾಹಿ ಬಿಂಬಿಸಿತ್ತು.

ADVERTISEMENT

‘ಬೆಳಕು ಹಾಗೂ ಕತ್ತಲೆಯ ವಿರುದ್ಧ ಮತ್ತೊಮ್ಮೆ ಸಂಗ್ರಾಮ ನಡೆಯಲಿದೆ. ಅಂಧಕಾರದ ಪ್ರತೀ ತಂತ್ರವನ್ನೂ ಬೆಳಕು ಸೋಲಿಸಬೇಕಿದೆ. ಈ ಸಂದರ್ಭದಲ್ಲಿ ನಾನು ನಿಮಗೆಲ್ಲ ಒಂದು ಒಳ್ಳೆಯ ಸುದ್ದಿ ನೀಡಲು ಬಯಸುತ್ತಿದ್ದೇನೆ. ಶಕ್ತಿಮಾನ್‌ ಧಾರಾವಾಹಿ ಬಹುಬೇಗ 3–ಡಿ ಆ್ಯನಿಮೇಷನ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಇದನ್ನು ಕೆಲವು ದಿನಗಳಿಂದ ನಾನೂ ಕಾಯುತ್ತಿದ್ದೆ, ಕೆಲವು ವರ್ಷಗಳಿಂದ ನೀವೂ ಕಾಯುತ್ತಿದ್ದಿರಿ’ ಎಂದು ಮುಕೇಶ್‌ ಹೇಳಿದ್ದಾರೆ.

ಅಷ್ಟೇ ಅಲ್ಲ, ಮುಕೇಶ್ ಅವರು ಇನ್ನೂ ಒಂದು ಸಿಹಿ ಸುದ್ದಿ ನೀಡಿದ್ದಾರೆ. ‘ಶಕ್ತಿಮಾನ್ ಧಾರಾವಾಹಿಯನ್ನು ವಾಸ್ತವ ರೂಪದಲ್ಲಿ (3–ಡಿ ಅಲ್ಲದ್ದು) ಪುನಃ ತೆರೆಯ ಮೇಲೆ ತರುವ ಆಲೋಚನೆಯೂ ಇದೆ. ಅದಕ್ಕೂ ಮೊದಲು 3–ಡಿ ರೂಪದಲ್ಲಿ ಶಕ್ತಿಮಾನ್ ನಿಮ್ಮ ಮುಂದೆ ಬರಲಿದ್ದಾನೆ. ಇದರ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಇದರ (3–ಡಿ) ಮೊದಲ ಟೀಸರ್‌ ಬಿಡುಗಡೆ ಆಗಲಿದೆ’ ಎಂದು ಅವರು ಹೇಳಿದ್ದಾರೆ.

‘ಅಂಧೇರಾ ಖಾಯಂ ರಹೇ’ ಎಂದು ಗಡಸು ದನಿಯಲ್ಲಿ ಹೇಳುತ್ತಿದ್ದ ಕಿಲ್ವಿಶ್, ದುಷ್ಟ ವಿಜ್ಞಾನಿ ಜೈಕಾಲ್, ಪತ್ರಕರ್ತೆ ಗೀತಾ ವಿಶ್ವಾಸ್, ಶಕ್ತಿಮಾನ್‌ನ ಇನ್ನೊಂದು ರೂಪ ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ... ಗಂಗಾಧರ್‌ನ ಪಾತ್ರವನ್ನು ಮುಕೇಶ್‌ ಅವರೇ ನಿಭಾಯಿಸಬಹುದು. ಆದರೆ, ಇತರ ಎಲ್ಲರೂ ಪುನಃ ತೆರೆಯ ಮೇಲೆ ಕಾಣಿಸಿಕೊಳ್ಳುವರೇ? ಹಿಂದೆ ಈ ಪಾತ್ರವನ್ನು ನಿಭಾಯಿಸಿದ್ದವರೇ ಮುಂದೆಯೂ ನಿಭಾಯಿಸುವರೇ ಎಂಬ ಪ್ರಶ್ನೆಗಳಿಗೆ ‘ಶಕ್ತಿಮಾನ್’ ಉತ್ತರ ಕೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.