ಮುಂಬೈ: ಹೊಸ ಆಲೋಚನೆಗಳೊಂದಿಗೆ ಉದ್ದಿಮೆ ಆರಂಭಿಸುವವರಿಗೆ ಮಾರ್ಗದರ್ಶನ ಹಾಗೂ ನೆರವು ನೀಡುವ ರಿಯಾಲಿಟಿ ಶೋ ‘ಶಾರ್ಕ್ ಟ್ಯಾಂಕ್ ಇಂಡಿಯಾ’ 4ನೇ ಆವೃತ್ತಿ ಆರಂಭವಾಗುತ್ತಿದ್ದು, ಈ ಬಾರಿ ಇದನ್ನು ಸ್ವಿಗ್ಗಿ ಪ್ರಾಯೋಜಿಸುತ್ತಿದೆ. ಇದರ ಪರಿಣಾಮ ಆಗಿದ್ದು ಮಾತ್ರ ಜೊಮಾಟೊಗೆ.
ಶಾರ್ಕ್ ಟ್ಯಾಂಕ್ ಇಂಡಿಯಾ 4ನೇ ಆವೃತ್ತಿಯು ಕಾರ್ಯಕ್ರಮವು ಸೋನಿ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪೀಪಲ್ ಸಮೂಹದ ಅನುಪಮ್ ಮಿತ್ತಲ್, ಬೋಟ್ ಲೈಫ್‌ಸ್ಟೈಲ್‌ನ ಅಮನ್ ಗುಪ್ತಾ, ಎಮ್‌ಕ್ಯೂರ್ ಫಾರ್ಮಾದ ನಮಿತಾ ಥಾಪರ್, ಲೆನ್ಸ್‌ಕಾರ್ಟ್‌ನ ಪೀಯುಷ್ ಬನ್ಸಲ್ ಹಾಗೂ ಒಯೊನ ರಿತೇಶ್ ಅಗರವಾಲ್ ಅವರು ಶಾರ್ಕ್‌ಗಳಾಗಿ (ನಿರ್ಣಾಯಕರಾಗಿ) ಪಾಲ್ಗೊಳ್ಳಲಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಜೊಮಾಟೊದ ಸಿಇಒ ದೀಪಿಂದರ್ ಗೋಯಲ್ ಅವರು ನಿರ್ಣಾಯಕರಾಗಿ ಇರುವುದಿಲ್ಲ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಕಾರಣವಿಷ್ಟೇ, 4ನೇ ಆವೃತ್ತಿಯ ಶಾರ್ಕ್ ಟ್ಯಾಂಕ್ ಅನ್ನು ಸಿದ್ಧ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಪ್ರಾಯೋಜಿಸುತ್ತಿದೆ. ಅದ್ಕಕಾಗಿ ಸುಮಾರು ₹25 ಕೋಟಿ ನೀಡಿದೆ. ಈ ಒಪ್ಪಂದದ ಭಾಗವಾಗಿ ದೀಪಿಂದರ್ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
‘ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕುವ ಉದ್ದೇಶದಿಂದ ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಕಾರ್ಯಕ್ರಮ ಹೆಚ್ಚು ನೈಜವಾಗಿರಬೇಕು, ಸ್ಟಾರ್ಟ್‌ಅಪ್‌ಗಳನ್ನು ಹೇಗೆ ಕಟ್ಟಬೇಕು ಎಂಬ ಪರಿಕಲ್ಪನೆಯನ್ನು ಜನರು ಹೊಂದಿದ್ದಾರೋ ಅದನ್ನು ಬದಲಿಸಿ ಹೊಸ ಆಯಾಮ ನೀಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು’ ಎಂದು ದೀಪಿಂದರ್ ಹೇಳಿದ್ದಾರೆ.
‘ದುರುದೃಷ್ಟವಶಾತ್ ಈ ಬಾರಿಯ ಶಾರ್ಕ್ ಟ್ಯಾಂಕ್‌ಗೆ ನಾನು ಹೋಗಲಾರೆ. ಸ್ವಿಗ್ಗಿ ಪ್ರಾಯೋಜಕತ್ವದ ಶಾರ್ಕ್ ಟ್ಯಾಂಕ್ ಈ ಬಾರಿಯ ಕಾರ್ಯಕ್ರಮ ಪ್ರಾಯೋಜಿಸುತ್ತಿದೆ. ಹೀಗಾಗಿ ನನ್ನನ್ನು ಹೊರಹಾಕಲಾಗಿದೆ. ಕನಿಷ್ಠಪಕ್ಷ ಅದನ್ನಾದರೂ ನನಗೆ ಹೇಳಿದ್ದಾರೆ’ ಎಂದು ದೀಪಿಂದರ್ ಹೇಳಿರುವುದಾಗಿ ಪ್ರಕಟಣೆ ಹೇಳಿದೆ.
ದೀಪಿಂದರ್ ಗೋಯಲ್ ಅವರು ಇತ್ತೀಚೆಗೆ ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆಗಿ ದೆಹಲಿಯಲ್ಲಿ ಪತ್ನಿಯೊಂದಿಗೆ ಬೈಕ್‌ನಲ್ಲಿ ಓಡಾಡಿದ್ದು ಭಾರೀ ಸುದ್ದಿಯಾಗಿತ್ತು.
ಸಾಫ್ಟ್‌ಬ್ಯಾಂಕ್ ಬೆಂಬಲಿತ ಭಾರತೀಯ ಆಹಾರ ತಲುಪಿಸುವ ಕಂಪನಿಯಾದ ಸ್ವಿಗ್ಗಿಗೆ ₹37.5 ಶತಕೋಟಿ ಹೂಡಿಕೆ ಪಡೆಯುವ ಉದ್ದೇಶದಿಂದ ಐಪಿಒ ಆರಂಭಿಸಲು ಷೇರುದಾರರ ಅನುಮತಿ ಪಡೆಯುವ ಮೂಲಕ ಸುದ್ದಿಯಲ್ಲಿದೆ. ಹಾಲಿ ಇರುವ ಸ್ವಿಗ್ಗಿ ಷೇರುದಾರರು ₹66.64 ಶತಕೋಟಿಯಷ್ಟು ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಉಳಿದಿದ್ದರಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ನೂತನ ಐಪಿಒ ಮೂಲಕ ಕಂಪನಿಯ ಹೂಡಿಕೆ ಗಾತ್ರವು 1.25 ಶತಕೋಟಿ ಅಮೆರಿಕನ್ ಡಾಲರ್‌ನಿಂದ 1.4 ಶತಕೋಟಿ ಡಾಲರ್‌ಗೆ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.