ಕನ್ನಡದ ಖ್ಯಾತ ಲಘು ಸಂಗೀತ ರಿಯಾಲಿಟಿ ಷೋ ಎದೆತುಂಬಿ ಹಾಡುವೆನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈಟಿವಿಯಲ್ಲಿ ಕಾರ್ಯಕ್ರಮವನ್ನು ಹೊಸದಾಗಿ ಮತ್ತೆ ಪ್ರಸಾರ ಮಾಡಲು ಕಲರ್ಸ್ ಕನ್ನಡ ವಾಹಿನಿ ನಿರ್ಧರಿಸಿತ್ತು.
2018ರಲ್ಲೇ ಈ ನಿರ್ಧಾರ ಮಾಡಿ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕಾರ್ಯಕ್ರಮ ನಡೆಸಿಕೊಡಲು ಕೋರಿದಾಗ ಎಸ್‌ಪಿಬಿ ಅವರು ಬಹು ವಿನಯದಿಂದ ಒಂದು ಪತ್ರ ಬರೆದಿದ್ದರು. ಈ ಬಗ್ಗೆ ವಾಹಿನಿಯ ಮುಖ್ಯಸ್ಥರೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆ ಕೈಬರಹದ ಪತ್ರವನ್ನು ವಾಹಿನಿ ಬಿಡುಗಡೆ ಮಾಡಿದೆ. ಆ ಪತ್ರ ಹೀಗಿದೆ.
ಪ್ರೀತಿಯ ಗೆಳೆಯರೇ,
ನಿಮ್ಮನ್ನು ಇಷ್ಟು ದಿನ ಕಾಯುವಂತೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇದಕ್ಕೆ ಕಾರಣಗಳನ್ನು ಹೇಳಲು ನನಗೆ ಇಷ್ಟವಿಲ್ಲ. ಅವು ಖಾಸಗಿಯಾದವು ಮತ್ತು ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮತ್ತೆ ಶುರು ಮಾಡಲು ನಾವು ಮಾಡಿದ ಚರ್ಚೆಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನ ಖಾಸಗಿ ವಿಷಯ ಮತ್ತು ಕೌಟುಂಬಿಕ ಕೆಲಸಗಳೇ ಅವುಗಳಿಗೆ ಕಾರಣ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು 2019ರಲ್ಲಷ್ಟೇ ಈ ಕಾರ್ಯಕ್ರಮ ಪುನರಾರಂಭ ಮಾಡಲು ನನಗೆ ಸಾಧ್ಯ.
ನಿಮಗೆ ಇದರಿಂದ ಆಗಿರಬಹುದಾದ ಅನಾನುಕೂಲಗಳಿಗೆ ಕ್ಷಮೆ ಇರಲಿ
ನಿಮ್ಮ ಪ್ರೀತಿಯ
ಎಸ್ ಪಿ ಬಾಲಸುಬ್ರಹ್ಮಣ್ಯಂ
ಬಿಳಿ ಹಾಳೆ ಮೇಲೆ ನೀಲಿ ಶಾಯಿಯಲ್ಲಿ ಅವರು ಬರೆದಿದ್ದ ಈ ಪತ್ರದಲ್ಲಿ ಅವರ ಹಾಡುಗಳಲ್ಲಿ ಇರುವಷ್ಟೇ ಜೀವಂತಿಕೆ ಇತ್ತು. ಅದನ್ನು ಅವರು ಸ್ಕ್ಯಾನ್ ಮಾಡಿ ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಒಂದು ಕಾರ್ಯಕ್ರಮ ಶುರುಮಾಡಲು ಸಾಧ್ಯವಿಲ್ಲ ಎನ್ನುವುದನ್ನು ದೂರವಾಣಿಯಲ್ಲಿ ಚರ್ಚೆ ಮಾಡಿದ ನಂತರವೂ ಪ್ರೀತಿಯಿಂದ ಪತ್ರವನ್ನೂ ಅವರು ಕಳಿಸಿಕೊಟ್ಟಿದ್ದು ಈ ಕಾರ್ಯಕ್ರಮದ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ಹೇಳುತ್ತದೆ ಎಂದು ವಾಹಿನಿ ಎಸ್‌ಪಿಬಿ ಅವರನ್ನು ಸ್ಮರಿಸಿದೆ. ಆಗಸ್ಟ್ 14ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಮೊದಲ ಸಂಚಿಕೆಯಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್ ಪಿ ಚರಣ್ ಭಾಗಿಯಾಗಲಿದ್ದಾರೆ.ರಾಜೇಶ್ ಕೃಷ್ಣನ್, ರಘು ದೀಕ್ಷಿತ್ ಮತ್ತು ಹರಿಕೃಷ್ಣ ತೀರ್ಪುಗಾರರಾಗಿರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.