ADVERTISEMENT

ಕಿರುತೆರೆ ನಿರ್ದೇಶಕ, ನಿರ್ಮಾಪಕ ವಿನೋದ್‌ ದೋಂಡಾಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 11:50 IST
Last Updated 20 ಜುಲೈ 2024, 11:50 IST
<div class="paragraphs"><p>ವಿನೋದ್‌ ದೊಂಡಾಲೆ</p></div>

ವಿನೋದ್‌ ದೊಂಡಾಲೆ

   

ಬೆಂಗಳೂರು: ಕನ್ನಡ ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶಕ ವಿನೋದ್‌ ದೋಂಡಾಳೆ (49) ಶನಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ನಾಗರಭಾವಿ ಮಾರುತಿನಗರದಲ್ಲಿ ವಿನೋದ್‌ ಅವರ ಮನೆಯಿದ್ದು, ಮನೆಯಲ್ಲಿ ಮರಣಪತ್ರ ದೊರಕಿದೆ. ‘ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ನಾನೇ ಕಾರಣ’ ಎಂದು ಅದರಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಸಾಲದ ಹೊರೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

‘ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದರು. ಅದನ್ನು ಮನಸ್ಸಿಗೆ ಹಚ್ಚಿಕೊಂಡುಬಿಟ್ಟಿದ್ದರು. ಅದಕ್ಕಿಂತ ಹೆಚ್ಚು ಹೇಳಿಕೊಳ್ಳುತ್ತಿರಲಿಲ್ಲ. ಶುಕ್ರವಾರವಷ್ಟೇ ಸಿನಿಮಾ ತಂಡದ ಜೊತೆ ಸಭೆ ನಡೆಸಿದ್ದರು. ಬಂಡವಾಳ ಹೂಡುವವರು ಒಬ್ಬರು ಸಿಕ್ಕಿದ್ದಾರೆ, ಸಿನಿಮಾ ಶುರು ಮಾಡುತ್ತೇನೆ ಎಂದಿದ್ದರು’ ಎಂದು ವಿನೋದ್‌ ಅವರ ಪತ್ನಿ ಗೀತ ಮಾಧ್ಯಮಗಳಿಗೆ ಹೇಳಿದ್ದಾರೆ.  

ಅಂದಾಜು ₹2 ಕೋಟಿಯಿಂದ ₹3 ಕೋಟಿ ಸಾಲ?: ‘ಅಶೋಕ ಬ್ಲೇಡ್’ ಚಿತ್ರಕ್ಕೆ ವಿನೋದ್ ಸೇರಿ ಇಬ್ಬರು ನಿರ್ಮಾಪಕರಿದ್ದು, ವೃದ್ಧಿ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಚಿತ್ರಕ್ಕಾಗಿ ವಿನೋದ್ ಮನೆಯ ಮೇಲೆ ₹2 ಕೋಟಿಯಿಂದ ₹3 ಕೋಟಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಅಸಹಜಸಾವು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಿರುತೆರೆಯಿಂದ ವೃತ್ತಿ ಜೀವನ: ಪಿ.ಶೇಷಾದ್ರಿ ಅವರ ಜೊತೆ ವೃತ್ತಿ ಆರಂಭಿಸಿದ್ದ ವಿನೋದ್‌ ದೋಂಡಾಳೆ, ಶೇಷಾದ್ರಿ ಹಾಗೂ ಟಿ.ಎನ್‌.ಸೀತಾರಾಮ್‌ ಅವರ ಧಾರಾವಾಹಿಗಳಲ್ಲಿ ಸಹ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕರಾಗಿದ್ದರು. ವರ್ಧನ್​ ಮತ್ತು ದೀಪಕ್​ ನಾಯ್ಡು ಎಂಬವರ ಜೊತೆಗೂಡಿ ಪ್ರೊಡಕ್ಷನ್​ ಹೌಸ್ ಆರಂಭಿಸಿದ್ದ ಅವರು ‘ಕಿನ್ನರಿ’, ‘ಯಶೋಧೆ’, ‘ಮಿಥುನರಾಶಿ’ ಹೀಗೆ ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. 2020ರಲ್ಲೇ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಇಳಿಯಲು ನಿರ್ಧರಿಸಿದ್ದ ವಿನೋದ್‌, ಟಿ.ಕೆ. ದಯಾನಂದ್​ ಬರೆದ ‘ಅಶೋಕ ಬ್ಲೇಡ್‌’ ನಿರ್ದೇಶನಕ್ಕೆ ಕೈಹಾಕಿದ್ದರು. ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡಿತ್ತು. ಸಿನಿಮಾ ಜೊತೆಗೆ ವಿನೋದ್‌ ‘ಕರಿಮಣಿ’ ನಿರ್ಮಾಣ ಹಾಗೂ ‘ಗಂಗೆ ಗೌರಿ’ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.  

ಒತ್ತಡ ಮಾಡಿಕೊಳ್ಳಬಾರದೆಂದು ನನಗೆ ಅನೇಕ ಬಾರಿ ಸಮಾಧಾನ ಹೇಳಿದ್ದ ಮನುಷ್ಯ ಇಂದು ಬಹುಶಃ ಒತ್ತಡ ತಡೆಯಲಾರದೆ ಬದುಕು ಮುಗಿಸಿಕೊಂಡುಬಿಟ್ಟ
ಟಿ.ಎನ್‌.ಸೀತಾರಾಮ್‌ ಸಿನಿಮಾ ನಿರ್ದೇಶಕ
2022ರಲ್ಲಿ ಸೆಟ್ಟೇರಿದ್ದ ಸಿನಿಮಾ 
2022ರ ಮೇ ತಿಂಗಳಲ್ಲಿ ‘ಅಶೋಕ ಬ್ಲೇಡ್‌’ ಸಿನಿಮಾ ಸೆಟ್ಟೇರಿತ್ತು. 70ರ ದಶಕದ ಕಥೆ ಹೊತ್ತಿದ್ದ ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಸಿನಿಮಾ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಚಿತ್ರದ ನಟ ಸತೀಶ್‌ ನೀನಾಸಂ ‘ಚಿತ್ರದ ಶೇ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು. ಮುಂದಿನ ವಾರವೇ ಕೊನೆಯ ಹಂತದ ಶೂಟಿಂಗ್‌ ನಡೆಯಬೇಕಿತ್ತು. ಅಷ್ಟರಲ್ಲೇ ಹೀಗಾಗಿದೆ. ವಿನೋದ್‌ ಅವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಚಿತ್ರಕ್ಕೆ ನಾನು ಇಲ್ಲಿಯವರೆಗೂ ಒಂದು ರೂಪಾಯಿ ತೆಗೆದುಕೊಂಡಿಲ್ಲ. ಸಾಮಾನ್ಯ ಬಜೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ವ್ಯವಹಾರದ ಮಾತುಕಥೆಗಳೂ ನಡೆದಿತ್ತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.